ಮುಂಬಯಿ : ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ ಬಳಿಕ ಟೀಮ್ ಇಂಡಿಯಾವೇನೂ ಸುಧಾರಣೆ ಕಂಡಿಲ್ಲ. ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಕೊಹ್ಲಿ ವಿಚಾರದಲ್ಲಿ ಅಸಮರ್ಪಕ ನಿರ್ಧಾರ ತೆಗೆದುಕೊಂಡಿತು ಎಂದು ಪಾಕಿಸ್ತಾನ ತಂಡದ ಮಾಜಿ ಆರಂಭಿಕ ಬ್ಯಾಟರ್ ಸಲ್ಮಾನ್ ಬಟ್ ಹೇಳಿದ್ದಾರೆ.
ತಮ್ಮ ಯೂಟ್ಯೂಚ್ ಚಾನೆಲ್‌ನಲ್ಲಿ ಮಾತನಾಡಿದ ಅವರು “ಚೇತನ್ ಶರ್ಮ ನೇತೃತ್ವದ ಆಯ್ಕೆ ಸಮಿತಿ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಿತು. ವಿಶ್ವ ಕಪ್ ಗೆಲ್ಲಲಿಲ್ಲ ಎಂಬುದು ಅವರು ಕೊಟ್ಟ ಕಾರಣ. ಅಂತೆಯೇ ಆಯ್ಕೆ ಸಮಿತಿ ಹಲವಾರು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಉತ್ತಮ ಬೌಲರ್‌ಗಳು ಇಲ್ಲದ ವಿಶ್ವ ಕಪ್ ತಂಡವನ್ನು ಆಯ್ಕೆ ಮಾಡಿರುವುದು ಕೂಡ ತಪ್ಪು ನಿರ್ಧಾರಗಳಲ್ಲೊಂದು. ಇದೀಗ ವಿಶ್ವ ಕಪ್‌ಗೆ ಉತ್ತಮ ತಂಡವನ್ನು ಆಯ್ಕೆ ಮಾಡಿಲ್ಲ ಎಂದು ಅವರನ್ನೇ ವಜಾ ಮಾಡಲಾಗಿದೆ,” ಎಂಬುದಾಗಿ ಪಾಕಿಸ್ತಾನದ ಮಾಜಿ ಆಟಗಾರ ಹೇಳಿದರು.
ಎಲ್ಲ ನಾಯಕರು ವಿಶ್ವ ಕಪ್ ಅಥವಾ ಐಸಿಸಿ ಟ್ರೋಫಿಗಳನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಕೆಲವರು ಯಾವುದೇ ಒಂದು ಉತ್ತಮ ದಾಖಲೆಗಳನ್ನು ನಿರ್ಮಿಸದೇ ನಿವೃತ್ತಿಯಾಗಿದ್ದಾರೆ. ಅದೇ ಕಾರಣ ಮುಂದೊಡ್ಡಿ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಲಾಗಿದೆ. ಅಷ್ಟಾಗಿಯೂ ಟೀಮ್ ಇಂಡಿಯಾ ಟಿ೨೦ ವಿಶ್ವ ಕಪ್‌ನಲ್ಲಿ ಭಾರತ ತಂಡದ ಟ್ರೋಫಿ ಗೆಲ್ಲಲಿಲ್ಲ ಎಂದು ಅವರು ಪ್ರಶ್ನಿಸಿದರು.
“ನಾಯಕತ್ವದ ವಿಚಾರಕ್ಕೆ ಬಂದಾಗ ವಿರಾಟ್ ಕೊಹ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದರು. ಆದಾಗ್ಯೂ ವಿಶ್ವ ಕಪ್ ಗೆಲ್ಲುವ ಮಾನದಂಡವನ್ನು ಇಟ್ಟುಕೊಂಡು ಅವರನ್ನು ಬದಿಗೆ ಸರಿಸಲಾಯಿತು. ಟ್ರೋಫಿಗಳನ್ನು ಗೆಲ್ಲದ ಹೊರತಾಗಿಯೂ ತಂಡದ ಪ್ರದರ್ಶನ ಸುಧಾರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು,” ಎಂದು ಅವರು ಬಟ್ ಹೇಳಿದ್ದಾರೆ.
ಇದೇ ವೇಳೆ ಅವರು ಮಹೇಂದ್ರ ಸಿಂಗ್ ಧೋನಿಯನ್ನು ಮುಂದುವರಿಸಬೇಕಾಗಿತ್ತು ಎಂಬುದಾಗಿಯೂ ಹೇಳಿದ್ದಾರೆ. ಮಹೇಂದ್ರ ಸಿಂಗ್ ಧೋನಿಗೆ ವಿಶ್ವ ಕಪ್ ಗೆಲ್ಲುವ ಸಾಮರ್ಥ್ಯ ಇದೆ ಎಂದು ಹೇಳುವುದಾಗಿದ್ದರೆ ಅವರಿಗೆ ಇನ್ನಷ್ಟು ವರ್ಷಗಳ ಕಾಲ ಆಡುವ ಅವಕಾಶ ನೀಡಬೇಕಾಗಿತ್ತು ಎಂಬುದಾಗಿ ಬಟ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ | INDvsNZ | ಪಂದ್ಯ ಶ್ರೇಷ್ಠ ಪುರಸ್ಕಾರ ಪಡೆಯುವಲ್ಲೂ ವಿರಾಟ್ ಕೊಹ್ಲಿ ದಾಖಲೆ ಮುರಿದ ಸೂರ್ಯಕುಮಾರ್