Site icon Vistara News

Asia Cup | ಹಾಂಕಾಂಗ್‌ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ 155 ರನ್ ಜಯ, ಸೆ. 4ರಂದು ಭಾರತ- ಪಾಕ್‌ ಫೈಟ್‌

Asia Cup

ದುಬೈ : ಮೊಹಮ್ಮದ್‌ ರಿಜ್ವಾನ್‌ (೭೮*) ಮತ್ತು ಫಖರ್ ಜಮಾನ್‌ (೫೩) ಅವರ ಅರ್ಧ ಶತಕಗಳು ಹಾಗೂ ಬೌಲರ್‌ಗಳ ಮಾರಕ ದಾಳಿಯ ನೆರವು ಪಡೆದ ಪಾಕಿಸ್ತಾನ ತಂಡ, ಏಷ್ಯಾ ಕಪ್‌ನ ಎ ಗುಂಪಿನ ತನ್ನ ಕೊನೇ ಪಂದ್ಯದಲ್ಲಿ ಹಾಂಕಾಂಗ್‌ ವಿರುದ್ಧ ೧೫೫ ರನ್‌ಗಳ ಬೃಹತ್‌ ಜಯ ದಾಖಲಿಸಿತು. ಇದರೊಂದಿಗೆ ಪಾಕಿಸ್ತಾನ ತಂಡ ಸೂಪರ್-೪ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದು, ಸೆಪ್ಟೆಂಬರ್‌ ೪ರಂದು ಮತ್ತೆ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ.

ಶಾರ್ಜಾ ಇಂಟರ್‌ನ್ಯಾಷನ್‌ ಸ್ಟೇಡಿಯಮ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡ ೨ ವಿಕೆಟ್ ನಷ್ಟಕ್ಕೆ ೧೯೩ ರನ್ ಬಾರಿಸಿತು. ಬೃಹತ್ ಗುರಿ ಬೆನ್ನಟ್ಟಲು ಆರಂಭಿಸಿದ ಹಾಂಕಾಂಗ್‌ ತಂಡ ೩೮ ರನ್‌ಗಳಿಗೆ ಸರ್ವಪತನ ಕಂಡಿತು. ಹಾಂಕಾಂಗ್ ತಂಡದ ಯಾವೊಬ್ಬ ಆಟಗಾರನೂ ಎರಡಂಕಿ ಮೊತ್ತವನ್ನೂ ತಲುಪಲಿಲ್ಲ. ಇದು ಪಾಕಿಸ್ತಾನ ತಂಡಕ್ಕೆ ಟಿ೨೦ ಮಾದರಿಯಲ್ಲಿ ಲಭಿಸಿದ ಬೃಹತ್‌ ರನ್‌ಗಳ ಅಂತರದ ಗೆಲುವಾಗಿದೆ.

ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್‌ (೯) ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಹಿನ್ನಡೆ ಅನುಭವಿಸಿತು. ಆದರೆ, ಬಳಿಕ ಬ್ಯಾಟ್‌ ಮಾಡಿದ ರಿಜ್ವಾನ್‌ ಹಾಗೂ ಜಮಾನ್‌ ೧೧೬ ರನ್‌ಗಳ ಜತೆಯಾಟ ಕೊಟ್ಟರು. ಬಳಿಕ ಕುಶ್ದಿಲ್‌ ಖಾನ್ ೧೫ ಎಸೆತಗಳಲ್ಲಿ ೩೫ ರನ್‌ ಬಾರಿಸಿ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ನೆರವಾದರು.

ಬಳಿಕ ಬ್ಯಾಟ್ ಮಾಡಿದ ಹಾಂಕಾಂಗ್‌ ತಂಡ ಸತತವಾಗಿ ವಿಕೆಟ್‌ ಕಳೆದಕೊಂಡಿತು. ನಸೀಮ್‌ ಶಾ (೭ ರನ್‌ಗಳಿಗೆ ೨ ವಿಕೆಟ್‌), ಶಹನವಾಜ್‌ ದಹಾನಿ (೭ ರನ್‌ಗಳಿಗೆ ೧ ವಿಕೆಟ್‌ ), ಶದಬ್‌ ಖಾನ್‌ (೮ ರನ್‌ಗಳಿಗೆ ೪ ವಿಕೆಟ್‌ ), ಮೊಹಮ್ಮದ್‌ ನವಾಜ್‌ (೫ ರನ್‌ಗಳಿಗೆ ೩ ವಿಕೆಟ್‌) ಹಾಂಕಾಂಗ್‌ ಬ್ಯಾಟಿಂಗ್‌ ವಿಭಾಗವನ್ನು ಧ್ವಂಸ ಮಾಡಿದರು.

ಸ್ಕೋರ್‌ ವಿವರ

ಪಾಕಿಸ್ತಾನ : ೨೦ ಓವರ್‌ಗಳಲ್ಲಿ ೨ ವಿಕೆಟ್‌ಗೆ ೧೯೩ (ಮೊಹಮ್ಮದ್‌ ರಿಜ್ವಾನ್‌ ೭೮*, ಫಖರ್‌ ಜಮಾನ್‌ ೫೩, ಕುಶ್ದಿಲ್‌ ಶಾ ೩೫; ಇಶಾನ್‌ ಖಾನ್‌ ೨೮ಕ್ಕೆ೨).

ಹಾಂಕಾಂಗ್‌ : ನಿಜಾಖತ್‌ ಖಾನ್‌ ೮, ಕಿಂಚಿತ್‌ ಶಾ ೬; ಶದಬ್‌ ಖಾನ್‌ ೮ಕ್ಕೆ ೪, ಮೊಹಮ್ಮದ್‌ ನವಾಜ್‌ ೫ಕ್ಕೆ೩).

Exit mobile version