ಹೈದರಾಬಾದ್: ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪರದಾಡಿ ಗೆದ್ದ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ದಿಟ್ಟ ಹೋರಾಟ ನಡೆಸಿ ಸೋಲು ಕಂಡ ಶ್ರೀಲಂಕಾ(Pakistan vs Sri Lanka) ಮಂಗಳವಾರದ ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯಕ್ಕೆ ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂ ಅಣಿಯಾಗಿದೆ.
ಏಷ್ಯಾ ಕಪ್ನಲ್ಲಿ ಭಾರತ ವಿರುದ್ಧ 50ಕ್ಕೆ ಕುಸಿದಿದ್ದ ಲಂಕಾವನ್ನು ವಿಶ್ವಕಪ್ನಲ್ಲಿ ಆಟಕ್ಕುಂಟು ಲೆಕ್ಕಕಿಲ್ಲ ಎಂದು ಪರಿಗಣಿಸಲಾಗಿತ್ತು. ಆದರೆ ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡದೆದುರು 400 ರನ್ಗಳ ಗುರಿ ಬೆನ್ನಟ್ಟಿ ಹೋದ ಲಂಕಾ ಆಟಗಾರರು 326 ರನ್ ತನಕ ಬಂದಿದ್ದು ಅಸಾಮಾನ್ಯ ಪ್ರದರ್ಶನವೇ ಸರಿ. ಲಂಕಾ ಸೋಲು ಕಂಡರೂ ತಂಡದ ಪ್ರದರ್ಶನ ಕಂಡು ಉಳಿದ ಎಲ್ಲ ತಂಡಗಳು ಬೆಚ್ಚಿಬಿದ್ದಿದ್ದವು. ಲಂಕಾ ಸವಾಲನ್ನು ಹಗುರವಾಗಿ ಕಂಡರೆ ಸೋಲು ಖಚಿತ ಎನ್ನುವ ದೃಢ ನಿರ್ಧಾರವೊಂದನ್ನು ಎಲ್ಲ ತಂಡಗಳು ಗಮನದಲ್ಲಿಟ್ಟುಕೊಂಡಿದೆ.
ಪಾಕ್ ಅಸ್ಥಿರ ಪ್ರದರ್ಶನ
ಏಕದಿನ ಶ್ರೇಯಾಂಕದ ಅಗ್ರ ಮೂರು ಮಂದಿ ಪಾಕ್ ತಂಡದಲ್ಲಿದ್ದರೂ ಅವರ ಪ್ರದರ್ಶನ ಮಾತ್ರ ಏನು ಸಾಲದು. ಇದಕ್ಕೆ ನೆದರ್ಲೆಂಡ್ ಎದುರಿನ ಪಂದ್ಯವೇ ಸಾಕ್ಷಿ. ಫಕಾರ್ ಜಮಾನ್, ಬಾಬರ್ ಅಜಂ, ಇಮಾಮ್ ಉಲ್ ಹಕ್ ಅಗ್ಗಕ್ಕೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದ್ದರು. ರಿಜ್ವಾನ್ ಮತ್ತು ಸೌದ್ ಶಕೀಲ್ ಅರ್ಧಶತಕ ಬಾರಿಸದೇ ಹೋಗಿದ್ದರೆ ಪಾಕ್ 150ರ ಗಡಿ ದಾಟುವುದು ಅಸಾಧ್ಯ ಎನ್ನುವಂತಿತ್ತು. ಹೀಗಾಗಿ ಪಾಕ್ ಈ ಪಂದ್ಯದಲ್ಲಿ ಬ್ಯಾಟಿಂಗ್ ಸಮಸ್ಯೆಗೆ ಮದ್ದು ಮಾಡದೇ ಹೋದರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ.
ಬೌಲಿಂಗ್ ಓಕೆ
ಘಾತಕ ವೇಗಿ ಶಾಹೀನ್ ಅಫ್ರಿದಿ ಮಿಂಚದಿದ್ದರೂ ಉಳಿದ ಬೌಲರ್ಗಳಾದ ಹ್ಯಾರಿಸ್ ರಾವುಫ್, ಹಸನ್ ಅಲಿ, ಮೊಹಮ್ಮದ್ ನವಾಜ್ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿರುವ ಕಾರಣ ಲಂಕಾಗೆ ಹೋಲಿಸಿದರೆ ಪಾಕ್ ತಂಡದ ಬೌಲಿಂಗ್ ಓಕೆ ಎನ್ನುವ ಮಟ್ಟದಲ್ಲಿದ್ದೆ.
ಲಂಕಾ ಬೌಲಿಂಗ್ ಸುಧಾರಣೆ ಅಗತ್ಯ
ಲಂಕಾ ತಂಡದ ದೊಡ್ಡ ಸಮಸ್ಯೆ ಎಂದರೆ ಅದು ಬೌಲಿಂಗ್. ಕೊನೆಯದಾಗಿ ಮಾಲಿಂಗ, ಕುಲಶೇಖರ ಜಾಯಮಾನ ಹೋದ ಬಳಿಕ ಲಂಕಾ ತಂಡಕ್ಕೆ ಹೇಳಿಕೊಳ್ಳುವಂತಹ ಬೌಲರ್ ಇನ್ನೂ ಸಿಕ್ಕಿಲ್ಲ. ಎಲ್ಲ ಐಪಿಎಲ್ ಆಡಿ ಬಂದ ಯುವ ಆಟಗಾರರೇ ನೆಚ್ಚಿಕೊಂಡಿದ್ದಾರೆ. ಆದರೆ ಬ್ಯಾಟಿಂಗ್ನಲ್ಲಿ ಎಲ್ಲರು ಸಮರ್ಥರಿದ್ದಾರೆ. ಅದು ಕೂಡ ಹೊಡಿ ಬಡಿ ಆಟಕ್ಕೆ. ನಿಂತು ಆಡುವುದು ತಿಳಿದೇ ಇಲ್ಲ. ಕುಸಿದರೆ 50ರ ಒಳಗೆ ಗಂಟು ಮೂಟೆ ಕಟ್ಟುತ್ತದೆ. ಸಿಡಿದರೆ ಮುನ್ನೂರರ ಗಡಿ ದಾಡುತ್ತದೆ. ಒಟ್ಟಾರೆ ಬ್ಯಾಟಿಂಗ್ ತಂಡದ ಬಲವಾಗಿದೆ.
ಇದನ್ನೂ ಓದಿ ENG vs BAN: ಗೆಲುವಿನ ಹಳಿ ಏರಿತೇ ಹಾಲಿ ಚಾಂಪಿಯನ್ ಇಂಗ್ಲೆಂಡ್?; ಬಾಂಗ್ಲಾ ಎದುರಾಳಿ
ಪಿಚ್ ರಿಪೋರ್ಟ್
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಸಾಂಪ್ರದಾಯಿಕವಾಗಿ ಬ್ಯಾಟಿಂಗ್ ಗೆ ಉತ್ತಮವಾಗಿದೆ. ಈ ಮೈದಾನದಲ್ಲಿ 300 ಕ್ಕೂ ಹೆಚ್ಚು ಸ್ಕೋರ್ಗಳು ದಾಖಲಾಗಿವೆ. ಆದರೆ ಚೇಸಿಂಗ್ ಇಲ್ಲಿ ಬಲು ಸುಲಭ. ಹೀಗಾಗಿ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಳ್ಳಬಹುದು.
ಸಂಭಾವ್ಯ ತಂಡ
ಪಾಕಿಸ್ತಾನ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ಸಿ), ಮೊಹಮ್ಮದ್ ರಿಜ್ವಾನ್ (ವಿಕೆ), ಸೌದ್ ಶಕೀಲ್, ಇಫ್ತಿಖರ್ ಅಹ್ಮದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರವೂಫ್.
ಶ್ರೀಲಂಕಾ: ಕುಸಲ್ ಪೆರೇರ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಗೆ, ಮಥೀಶ ಪತಿರಣ, ದಿಲ್ಶನ್ ಮಧುಶಂಕ, ಕಸುನ್ ರಜಿತ.