Site icon Vistara News

ಪಾಕ್​ಗೆ ಸೂಪರ್​ ಐಡಿಯಾ ಕೊಟ್ಟ ಅಕ್ರಮ್; ‘ಕ್ಯಾ ಕಮಾಲ್​ ಹೈ ಭಾಯ್’​ ಎಂದ ನೆಟ್ಟಿಗರು

wasim akram babar

ಕರಾಚಿ: ನ್ಯೂಜಿಲ್ಯಾಂಡ್(New Zealand) ತಂಡ​ ಗೆಲುವು ಸಾಧಿಸಿದ ಕಾರಣದಿಂದ ಸೆಮಿಫೈನಲ್​ನಿಂದ ಬಹುತೇಕ ಹೊರಬಿದ್ದಿರುವ ಪಾಕಿಸ್ತಾನ(Pakistan Cricket Team) ಹಲವು ಲೆಕ್ಕಾಚಾರದ ಚಿಂತೆಯಲ್ಲಿ ಮುಳುಗಿದೆ. ಇದರ ಮಧ್ಯೆ ಪಾಕಿಸ್ತಾನ ತಂಡದ ಮಾಜಿ ವೇಗಿ ಮತ್ತು ನಾಯಕ ವಾಸಿಂ ಅಕ್ರಮ್(Wasim Akram)​ ಅವರು ಉಪಾಯವೊಂದನ್ನು ತಿಳಿಸಿದ್ದಾರೆ. ಅವರ ಈ ಉಪಾಯ ಎಲ್ಲಡೆ ವೈರಲ್​ ಆಗಿದೆ.

ಡ್ರೆಸ್ಸಿಂಗ್​ ರೂಮ್​ಗೆ ಬೀಗ ಜಡಿಯಿರಿ

ಪಾಕಿಸ್ತಾನದ ಕ್ರೀಡಾ ಸಂದರ್ಶನದಲ್ಲಿ ಮಾತನಾಡಿದ ವಾಸಿಂ ಅಕ್ರಮ್​, ‘ಬಾಬರ್​ ಅಜಂ(babar azam) ಪಡೆ ಸೆಮಿಫೈನಲ್​ ಪ್ರವೇಶಿಸಬೇಕಾದರೆ ಹೆಚ್ಚು ತಲೆ ಕೆಡೆಸಿಕೊಳ್ಳಬೇಕಿಲ್ಲ. ಮೊದಲು ಬ್ಯಾಟಿಂಗ್ ನಡೆಸಿ ದೊಡ್ಡ ಮೊತ್ತವನ್ನು ಪೇರಿಸಬೇಕು. ಆ ಬಳಿಕ ಇಂಗ್ಲೆಂಡ್​ ತಂಡ ಬ್ಯಾಟಿಂಗ್​ ಇನಿಂಗ್ಸ್ ಆರಂಭಿಸುವ ಮುನ್ನ ಅವರ ಡ್ರೆಸ್ಸಿಂಗ್​​ ರೂಮ್​ಗೆ ಬೀಗ ಹಾಕಬೇಕು. ಯಾವುದೇ ಕಾರಣಕ್ಕೂ 20 ನಿಮಿಷದ ವರೆಗೆ ಆಟಗಾರರು ಡ್ರೆಸಿಂಗ್​ ರೂಮ್​ ಬಿಟ್ಟು ಹೊರಬರದಂತೆ ನೋಡಿಕೊಳ್ಳಬೇಕು. ಆಗ ಟೈಮ್ಡ್​ ಔಟ್​ ಮೂಲಕ ಇಂಗ್ಲೆಂಡ್​ ಆಟಗಾರು ಆಲ್​ಔಟ್​ ಆಗಲಿಲಿದ್ದಾರೆ. ಪಾಕಿಸ್ತಾನ ಸುಲಭವಾಗಿ ಸೆಮಿಫೈನಲ್​ ಪ್ರವೇಶ ಪಡೆಯಲಿದೆ” ಎಂದು ಹೇಳಿದ್ದಾರೆ.

ಕಮಾಲ್​ ಹೈ ಭಾಯ್…

ವಾಸಿಂ ಅಕ್ರಮ ಅವರ ಈ ಮಾತು ಕೇಳಿದ ನೆಟ್ಟಿಗರು ‘ಕ್ಯಾ ಕಮಾಲ್​ ಹೈ ಭಾಯ್​’ ನೀವು ನಿಜಕ್ಕೂ ಐಸಿಸಿ ಪ್ಯಾನಲ್​ನಲ್ಲಿರಬೇಕಿತ್ತು ಎಂದು ಕೆಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಪಾಕಿಸ್ತಾನದ ಕುತಂತ್ರ ಏನೆಂಬಹುದು ನಿಮ್ಮ ಈ ಮನಸ್ಥಿತಿಯಿಂದಲೇ ಬಹಿರಂಗಗೊಂಡಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ತಂಡ ಶನಿವಾರ ನಡೆಯುವ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್(England vs Pakistan)​ ವಿರುದ್ಧ ಕಣಕ್ಕಿಳಿಯಲಿದೆ. ಸದ್ಯ ಪಾಕ್​ ತಂಡ ಆಡಿದ 8 ಪಂದ್ಯಗಳಲ್ಲಿ ತಲಾ 4 ಗೆಲುವು ಮತ್ತು ಸೋಲು ಕಾಣುವ ಮೂಲಕ 8 ಅಂಕ ಪಡೆದಿದೆ. +0.036 ರನ್‌ ರೇಟ್‌ ಹೊಂದಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನವನ್ನು ಅಲಂಕರಿಸಿದೆ. ಶ್ರೀಲಂಕಾ ವಿರುದ್ಧ ಗೆದ್ದ ನ್ಯೂಜಿಲ್ಯಾಂಡ್​ 10 ಅಂಕದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್​ ತಂಡ ಲಂಕಾ ವಿರುದ್ಧ ಸೋಲು ಕಾಣುತ್ತಿದ್ದರೆ, ಆಗ ಪಾಕಿಸ್ತಾನಕ್ಕೆ ಯಾವುದೇ ಚಿಂತೆ ಇರುತ್ತಿರಲಿಲ್ಲ. ಜಸ್ಟ್​ ಪಂದ್ಯ ಗೆದ್ದರೆ ಸಾಕಿತ್ತು. ಆದರೆ ಈಗ ಪವಾಡ ನಡೆದಂತೆ ಗೆಲ್ಲಬೇಕಾದ ಸ್ಥಿತಿ ಎದುರಾಗಿದೆ.

300 ರನ್‌ ಬಾರಿಸಬೇಕು…

ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಬಾಬರ್​ ಅಜಂ ಪಡೆ ಮೊದಲು ಬ್ಯಾಟಿಂಗ್​ ನಡೆಸಿ ಮಾಡಿ 300 ರನ್‌ ಗಳಿಸಿದರೆ, ಇಂಗ್ಲೆಂಡ್‌ ತಂಡವನ್ನು ಕೇವಲ 13 ರನ್‌ಗಳಿಗೆ ಆಲ್​ಔಟ್​ ಮಾಡಬೇಕು. ಆ ಮೂಲಕ ಪಾಕಿಸ್ತಾನ 287 ರನ್‌ಗಳ ಭಾರಿ ಅಂತರದಲ್ಲಿ ಗೆಲುವು ಪಡೆಯಬೇಕು. ಆಗ ಮಾತ್ರ ಪಾಕಿಸ್ತಾನ ಉತ್ತಮ ರನ್​ ರೇಟ್​ ಸಾಧಿಸಿ ಕಿವೀಸ್‌ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದು.

ಇದನ್ನೂ ಓದಿ ‘ಪಾಕಿಸ್ತಾನ್ ಜಿಂದಾಭಾಗ್’; ಹ್ಯಾಪಿ ಜರ್ನಿ ಎಂದು ಬಾಬರ್​ ಪಡೆಗೆ ಕುಟುಕಿದ ಸೆಹವಾಗ್ ​

2.5 ಓವರ್​ನಲ್ಲಿ ಚೇಸಿಂಗ್​

ಒಂದೊಮ್ಮೆ ಪಾಕಿಸ್ತಾನ ಈ ಪಂದ್ಯದಲ್ಲಿ ಮೊದಲು ಬೌಲಿಂಗ್​ ನಡಸುವ ಸನ್ನಿವೇಶ ಎದುರಾದರೆ ಇಂಗ್ಲೆಂಡ್‌ ತಂಡವನ್ನು ಕೇವಲ 100 ರನ್‌ಗಳಿಗೆ ಆಲ್‌ಔಟ್‌ ಮಾಡಬೇಕು. ಬಳಿಕ ಪಾಕ್​ ಈ ಮೊತ್ತವನ್ನು ಕೇವಲ 2.5 ಓವರ್‌ಗಳಿಗೆ ಚೇಸ್‌ ಮಾಡಬೇಕು. ಆ ಮೂಲಕ 283 ಎಸೆತಗಳು ಬಾಕಿ ಇರುವಾಗಲೇ ಪಾಕ್‌ ಪಂದ್ಯವನ್ನು ಗೆಲ್ಲಬೇಕು. ಇದು ಸಾಧ್ಯವಾಗದೇ ಇದ್ದರೆ ಪಾಕ್ ವಿಶ್ವಕಪ್ ಅಭಿಯಾನ ಕೊನೆಗೊಳ್ಳುತ್ತದೆ. ಮತ್ತೊಂದೆಡೆ, -0.338 ರನ್‌ರೇಟ್ ಹೊಂದಿರುವ ಅಫ್ಘಾನಿಸ್ತಾನವು ಸೆಮಿಸ್‌ಗೆ ಅರ್ಹತೆ ಪಡೆಯಲು ಇಂದು ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಕನಿಷ್ಠ 438 ರನ್‌ಗಳಿಂದ ಗೆಲ್ಲಬೇಕಾಗಿದೆ. ಇದಕ್ಕಿಂತ ಕಡಿಮೆ ರನ್​ನಿಂದ ಗೆದ್ದರೆ ಅಫಘಾನಿಸ್ತಾನವೂ ಟೂರ್ನಿಯಿಂದ ಹೊರಬೀಳಲಿದೆ.

Exit mobile version