ಮುಲ್ತಾನ್: ಹೈಬ್ರೀಡ್ ಮಾದರಿಯಲ್ಲಿ ನಡೆಯುತ್ತಿರುವ ಏಷ್ಯಾಕಪ್(Asia Cup 2023) ಟೂರ್ನಿ ಇಂದು ಆರಂಭಗೊಂಡಿದೆ. ಪಾಕಿಸ್ತಾನ ತಂಡ ನೇಪಾಳ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ನಡೆಸುತ್ತಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಪಾಕ್ ತಂಡದ ನಾಯಕ ಬಾಬರ್ ಅಜಂ(babar azam) ಏಷ್ಯಾಕಪ್ ವೇಳಾಪಟ್ಟಿಯ(Asia cup schedule 2023) ಅಸಮಾಧಾನ ಹೊರಹಾಕಿದ್ದಾರೆ.
“ಏಷ್ಯಾಕಪ್ ಟೂರ್ನಿ ಎಲ್ಲಿ ನಡೆಯಬೇಕು ಎಂದು ನೀವು ನನ್ನನ್ನು ಕೇಳಿದರೆ, ನಾನು ಈ ಟೂರ್ನಿ ಸಂಪೂರ್ಣವಾಗಿ ಪಾಕಿಸ್ತಾನದಲ್ಲಿ ನಡೆಯಬೇಕು ಎನ್ನುತ್ತೇನೆ. ಆದರೆ ದುರದೃಷ್ಟವಶಾತ್, ಅದರ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ” ಎಂದು ಪಂದ್ಯಾವಳಿಯ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಬಾಬರ್ ಹೇಳಿದರು.
ವೇಳಾಪಟ್ಟಿಗೆ ನಾವು ಸಿದ್ಧ
ವೃತ್ತಿಪರರಾಗಿ ನಮಗೆ ನೀಡಲಾದ ಯಾವುದೇ ವೇಳಾಪಟ್ಟಿಗೆ ನಾವು ಸಿದ್ಧರಿದ್ದೇವೆ. ಪ್ರಯಾಣ ಮತ್ತು ಬ್ಯಾಕ್-ಟು-ಬ್ಯಾಕ್ ಪಂದ್ಯಗಳು ಕಿರಿಕಿರಿ ಉಂಟು ಮಾಡಿರುವುದು ನಿಜ. ಆದರೆ ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ ಎಂದು ಪರೋಕ್ಷವಾಗಿ ಬಾಬರ್ ಈ ವೇಳಾಪಟ್ಟಿಯ ಬಗ್ಗೆ ಬೇಸರ ಹೊರಹಾಕಿದರು. ಇದೇ ವೇಳೆ ಭಾರತ ವಿರುದ್ಧದ ಪಂದ್ಯಕ್ಕೆ ನಡೆಸಿದ ತಯಾರಿಯ ಬಗ್ಗೆಯೂ ಮಾಹಿತಿ ನೀಡಿದರು.
ಭಾರತ ವಿರುದ್ಧದ ಪಂದ್ಯ ಎಂದಾಗ ಹಲವು ನಿರೀಕ್ಷೆಗಳು ಸಹಜ. ಇದಕ್ಕೆ ಬೇಕಾದ ಎಲ್ಲ ಕಾರ್ಯತಂತ್ರವನ್ನು ನಾವು ರೂಪಿಸಿದ್ದೇವೆ. ಇದನ್ನು ಇಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಉತ್ತಮ ಆಟ ಪ್ರದರ್ಶಿಸುವುದೇ ನಮ್ಮ ಮೊದಲ ಗುರಿ. ಭಾರತವೂ ಕೂಡ ಈ ಪಂದ್ಯಕ್ಕೆ ರಣತಂತ್ರವನ್ನು ರೂಪಿಸಿರುವುದು ಸಹಜ. ಒಟ್ಟಾರೆ ಇದರ ಫಲಿತಾಂಶ ಪಂದ್ಯದ ದಿನ ಹೊರಬೀಳಲಿದೆ ಎಂದು ಹೇಳಿದರು.
ಪಂದ್ಯ ನಡೆಯುವುದೇ ಅನುಮಾನ
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಇದು ಭಾರತಕ್ಕೆ ಈ ಕೂಟದ ಮೊದಲ ಪಂದ್ಯವಾದರೆ, ಪಾಕ್ಗೆ ಎರಡನೇ ಪಂದ್ಯ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಆದರೆ ಅಭಿಮಾನಿಗಳ ಈ ಆಸೆಗೆ ಮಳೆ ತಣ್ಣೀರೆರಚುವ ಸಾಧ್ಯತೆ ಇದೆ. ಹೌದು ಪಂದ್ಯ ನಡೆಯುವ ದಿನ ಕ್ಯಾಂಡಿಯಲ್ಲಿ ಶೇ. 90ರಷ್ಟು ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪಾಕ್ ಸವಾಲು ಸುಲಭದಲ್ಲ
ಲಂಕಾದಲ್ಲೇ ಕಳೆದ ವಾರವ ಅಫಘಾನಿಸ್ತಾನವನ್ನು ಕ್ಲೀನ್‌ಸ್ವೀಪ್ ಮಾಡಿ ನಂ.1 ಸ್ಥಾನ ಅಲಂಕರಿಸಿರುವ ಪಾಕಿಸ್ತಾನ ಈ ಕೂಟದ ಅತ್ಯಂತ ಅಪಾಯಕಾರಿ ತಂಡವಾಗಿ ಕಾಣಿಸಿಕೊಂಡಿದೆ. ಲಂಕಾದ ಪಿಚ್ನಲ್ಲಿ ಆಡಿದ ಅನುಭವ ಕೂಡ ತಂಡಕ್ಕೆ ನೆರವಾಗಲಿದೆ. ಇದಲ್ಲದೆ ಬಾಬರ್ ಅಜಂ ಪಡೆ ಎಲ್ಲ ವಿಭಾಗಗಳಲ್ಲೂ ಬಲಿಷ್ಠ ಆಟಗಾರರನ್ನು ನೆಚ್ಚಿಕೊಂಡಿದೆ. ಅದಲ್ಲದೆ ಭಾರತ ವಿರುದ್ಧ 2021ರ ವಿಶ್ವಕಪ್ ಟೂರ್ನಿಯಲ್ಲಿ ಗೆದ್ದ ಬಳಿಕ ಒತ್ತಡವನ್ನು ನಿಭಾಯಿಸುವ ಕಲೆ ಪಾಕ್ ಕಲಿತುಕೊಂಡಿದೆ. ಹೀಗಾಗಿ ಪಾಕ್ ಸವಾಲನ್ನು ರೋಹಿತ್ ಪಡೆ ಅಷ್ಟು ಲಘುವಾಗಿ ತೆಗೆದುಕೊಳ್ಳಬಾರದು.
ಇದನ್ನೂ ಓದಿ Asia Cup 2023: ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ ನಡೆಯುವುದೇ ಅನುಮಾನ!
ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಜಸ್‌ಪ್ರಿತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).
ಪಾಕಿಸ್ತಾನ ತಂಡ
ಬಾಬರ್ ಅಜಂ (ನಾಯಕ), ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಸೌದ್ ಶಕೀಲ್ (ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಮಾತ್ರ) ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರಾವುಫ್, ನಸೀಮ್ ಶಾ, ಶಾಹೀನ್ ಅಫ್ರಿದಿ, ತಯ್ಯಬ್ ತಾಹಿರ್, ಮೊಹಮ್ಮದ್ ಹ್ಯಾರಿಸ್, ಫಹೀಮ್ ಅಶ್ರಫ್, ಮೊಹಮ್ಮದ್ ವಾಸಿಮ್.