Site icon Vistara News

ಪಾಕ್​ ನಾಯಕ ಬಾಬರ್​ ಅಜಂ ಹುಟ್ಟುಹಬ್ಬಕ್ಕೂ ವಿಶ್ವಕಪ್​ ಟೂರ್ನಿಗೂ ಇದೆ ಅವಿನಾಭಾವ ಸಂಬಂಧ

icc world cup 2023 INDvsPAK

ಬೆಂಗಳೂರು: ಕ್ರಿಕೆಟ್​ ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ಐಸಿಸಿ ಏಕದಿನ ಕ್ರಿಕೆಟ್​ ವಿಶ್ವ ಕಪ್​ನ(ICC World Cup 2023) ವೇಳಾಪಟ್ಟಿ(world cup 2023 schedule) ಮಂಗಳವಾರ ಅಧಿಕೃತವಾಗಿ ಪ್ರಕಟಗೊಂಡಿದೆ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ(indvspak) ನಡುವಣ ಮೊದಲ ಸಮರ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ(Narendra Modi Stadium) ಅಕ್ಟೋಬರ್​ 15ರಂದು ನಡೆಯಲಿದೆ. ಈ ಪಂದ್ಯಕ್ಕೆ ದಾಖಲೆಯ ಸಂಖ್ಯೆಯಲ್ಲಿ ಕ್ರಿಕೆಟ್​ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. ಭಾರತದ ನೆಲದಲ್ಲಿ ಉಭಯ ತಂಡಗಳು 7 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿರುವ ಪಂದ್ಯ ಇದಾಗಿದೆ.

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕ್​ ವಿರುದ್ಧ ನಡೆಯುವ ಪಂದ್ಯದ ದಿನವೇ ಪಾಕ್​ ನಾಯಕ ಬಾಬರ್​ ಅಜಂ ಅವರ ಹುಟ್ಟುಹಬ್ಬವಾಗಿದೆ. ಅವರ ಜನ್ಮದಿನಕ್ಕೂ ಮತ್ತು ಐಸಿಸಿ ವಿಶ್ವ ಕಪ್​ ಟೂರ್ನಿಗೂ ಅವಿನಾಭಾವ ಸಂಬಂಧವೊಂದು ಇದ್ದಂತೆ ತೋರುತ್ತಿದೆ. ಏಕೆಂದರೆ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ 20 ವಿಶ್ವ ಕಪ್​ ಟೂರ್ನಿಯ ಟ್ರೋಫಿ ಅನಾವರಣವೂ ಅವರ ಹುಟ್ಟುಹಬ್ಬದಂದೇ ಮಾಡಲಾಗಿತ್ತು. ಎಲ್ಲ ತಂಡಗಳ ನಾಯಕರು ಈ ಟ್ರೋಫಿ ಅನಾವರಣಗೊಳಿಸುವ ಮುನ್ನ ಅಜಂ ಅವರೊಂದಿಗೆ ಕೇಕ್​ ಕತ್ತರಿಸಿ ಅವರಿಗೆ ಶುಭ ಕೋರಿದ್ದರು. ಅಚ್ಚರಿ ಎಂದರೆ ಆ ಟೂರ್ನಿಯಲ್ಲಿ ಪಾಕ್​ ಆರಂಭಿಕ ಹಂತದಲ್ಲಿ ಕಳಪೆ ಪ್ರದರ್ಶನ ತೋರಿ ಬಳಿಕ ಯಾರೂ ಊಹಿಸದ ರೀತಿಯಲ್ಲಿ ಫೈನಲ್​ ಪ್ರವೇಶಿಸಿತ್ತು. ಇದೀಗ ಏಕದಿನ ವಿಶ್ವ ಕಪ್​ ಕೂಡ ಅವರ ಹುಟ್ಟುಹಬ್ಬದಂದೇ ಬಂದಿದೆ. ಈ ಬಾರಿಯೂ ಪಾಕ್​ ಫೈನಲ್​ ಪ್ರವೇಶ ಪಡೆಯಲಿದೆಯಾ ಎಂದು ಕಾದು ನೋಡಬೇಕಿದೆ.​

10 ತಾಣಗಳಲ್ಲಿ 10 ತಂಡಗಳ ಪೈಪೋಟಿ

ಅಕ್ಟೋಬರ್​ 5 ರಿಂದ ಆರಂಭಗೊಂಡು ನವೆಂಬರ್​ 19 ತನಕ ಈ ವಿಶ್ವ ಕಪ್​ ಟೂರ್ನಿ ನಡೆಯಲಿದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ವೇಳಾಪಟ್ಟಿ ಪ್ರಕಟಗೊಂಡ ಇಂದಿನಿಂದ(ಜೂನ್​ 27 ಮಂಗಳವಾರ) ಈ ಟೂರ್ನಿ ಆರಂಭಕ್ಕೆ ಇನ್ನು ಭರ್ತಿ 100 ದಿನಗಳು ಬಾಕಿ ಉಳಿದಿವೆ.

ಈಗಾಗಲೇ 8 ತಂಡಗಳಾದ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​, ಬಾಂಗ್ಲಾದೇಶ, ಇಂಗ್ಲೆಂಡ್​,ಅಫಘಾನಿಸ್ತಾನ ತಂಡಗಳು ನೇರವಾಗಿ ಅರ್ಹತೆ(world cup 2023 qualifiers) ಪಡೆದುಕೊಂಡಿದೆ. ಇನ್ನುಳಿದ 2 ಸ್ಥಾನಗಳಿಗೆ ಸದ್ಯ 10 ತಂಡಗಳು ಅರ್ಹತಾ ಪಂದ್ಯವನ್ನಾಡುತ್ತಿದೆ. ಇಲ್ಲಿ ಗೆದ್ದ ಎರಡು ತಂಡಗಳು ಪ್ರಧಾನ ಸುತ್ತಿಗೆ ಅರ್ಹತೆ ಪಡೆಯಲಿದೆ. ಈ ಟೂರ್ನಿ ಪ್ರಸ್ತುತ ಜಿಂಬಾಬ್ವೆಯಲ್ಲಿ ಸಾಗುತ್ತಿದೆ.

ಇದನ್ನೂ ಓದಿ ICC World Cup 2023: ಏಕದಿನ ವಿಶ್ವ ಕಪ್​ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ; ಬೆಂಗಳೂರಿನಲ್ಲೂ ಇದೆ ಪ್ರಮುಖ ಪಂದ್ಯ

Exit mobile version