Site icon Vistara News

ICC World Cup 2023 : ಭಾರತ ಶತ್ರುಗಳ ನೆಲವಂತೆ; ವಿವಾದ ಸೃಷ್ಟಿಸಿದ ಪಾಕ್​ ಕ್ರಿಕೆಟ್ ಮಂಡಳಿ ಅಧ್ಯಕ್ಷ

Pakistan Cricket board president

ಬೆಂಗಳೂರು: ಇದೇ ಮೊದಲ ಬಾರಿಗೆ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವ ಕಪ್​ನಲ್ಲಿ (World Cup 2023) ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕಪ್​ ಗೆಲ್ಲುವ ಅವಕಾಶಗಳಿವೆ. ಭಾರತದ ಉಪ ಖಂಡದ ಪರಿಸ್ಥಿತಿ ಹಾಗೂ ಹವಾಗುಣ ಪ್ರದರ್ಶನದ ಉತ್ತುಂಗದಲ್ಲಿರುವ ಪಾಕಿಸ್ತಾನಕ್ಕೆ ಪೂರಕವಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್​​ನಲ್ಲಿ ಆ ತಂಡ ಉತ್ತಮ ಅಭಿಯಾನವನ್ನು ನಡೆಸದಿದ್ದರೂ. ಇಲ್ಲಿನ ಪರಿಸ್ಥಿತಿಗಳಲ್ಲಿ ಮತ್ತೊಮ್ಮೆ ಪುಟಿದೇಳುವ ಸಾಧ್ಯತೆಗಳಿವೆ. ಹೀಗಾಗಿ ಪಾಕಿಸ್ತಾನವನ್ನು ಕಪ್​ ಗೆಲ್ಲುವ ನೆಚ್ಚಿನ ತಂಡ ಎಂಬುದಾಗಿ ಗುರುತಿಸಲಾಗುತ್ತಿದೆ

ನಾಯಕ ಬಾಬರ್ ಅಜಮ್​ ನೇತೃತ್ವದ ತಂಡ ಸೆಪ್ಟೆಂಬರ್ 27ರ ಬುಧವಾರ ಹೈದರಾಬಾದ್​ಗೆ ಬಂದಿಳಿದಿದೆ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಕ್ರಿಕೆಟ್ ಉತ್ಸಾಹಿಗಳು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಬಾಬರ್ ಮತ್ತು ಶಾಹೀನ್ ಅಫ್ರಿದಿ ಅವರಂತಹವರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್​​ಗಳಲ್ಲಿ ತಮಗೆ ಸಿಕ್ಕಿರುವ ಸ್ವಾಗತವನ್ನು ಶ್ಲಾಘಿಸಿದ್ದಾರೆ.

ಅನಗತ್ಯ ಪದ ಬಳಕೆ

ಎರಡು ನೆರೆಯ ದೇಶಗಳ ನಡುವಿನ ಸಂಬಂಧವನ್ನು ಸರಿಪಡಿಸಲು ಕ್ರಿಕೆಟ್ ಕ್ಷೇತ್ರ ತನ್ನ ಪ್ರಯತ್ನ ಮಾಡುತ್ತಿರುವ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ನಿರ್ವಹಣಾ ಸಮಿತಿಯ ಅಧ್ಯಕ್ಷ ಝಾಕಾ ಅಶ್ರಫ್ ಸಂದರ್ಶನವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಭಾರಿ ಕೋಲಾಹಲವನ್ನು ಸೃಷ್ಟಿಸಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ಅಶ್ರಫ್ ಪಾಕಿಸ್ತಾನಿ ಕ್ರಿಕೆಟಿಗರಿಗೆ ಲಾಭದಾಯಕ ಒಪ್ಪಂದಗಳನ್ನು ನೀಡುವ ಬಗ್ಗೆ ಮಾತನಾಡಿದ್ದಾರೆ. ಸಂವಾದದ ಸಮಯದಲ್ಲಿ, ಅವರು ‘ದುಷ್ಮನ್ ಮುಲ್ಕ್’ ಗೆ (ಶತ್ರುಗಳ ನೆಲ) ನಮ್ಮ ಆಟಗಾರರು ಪ್ರಯಾಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಉನ್ನತ ಹುದ್ದೆಯ ಘನತೆಯನ್ನು ಮರೆತು ನಾಲಿಗೆ ಹರಿಬಿಟ್ಟಿದ್ದಾರೆ.

ನಾವು ಈ ಒಪ್ಪಂದಗಳನ್ನು ನಮ್ಮ ಆಟಗಾರರಿಗೆ ಪ್ರೀತಿ ಮತ್ತು ವಾತ್ಸಲ್ಯದಿಂದ ನೀಡಿದ್ದೇವೆ. ಪಾಕಿಸ್ತಾನದ ಇತಿಹಾಸದಲ್ಲಿ ಆಟಗಾರರಿಗೆ ಇಷ್ಟು ಹಣವನ್ನು ನೀಡಲಾಗಿಲ್ಲ. ಸ್ಪರ್ಧೆಗಳಿಗಾಗಿ ಶತ್ರು ದೇಶಕ್ಕೆ (‘ದುಶ್ಮನ್ ಮುಲ್ಕ್’) ಹೋಗುವಾಗ ಆಟಗಾರರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದು ನನ್ನ ಗುರಿಯಾಗಿತ್ತು ಎಂದು 71 ವರ್ಷದ ಝಾಕಾ ಅವರು ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಇದು ಪಾಕಿಸ್ತಾನ ತಂಡದ ಆಟಗಾರರಿ ಐಸಿಸಿ ಆದಾಯದಲ್ಲಿ ಪಾಲು ಕೊಡುವ ವಿಚಾರದ ಕುರಿತ ಮಾತಾಗಿತ್ತು.

ಅಶ್ರಫ್ ಅವರ ಈ ಭಯಾನಕ ಮತ್ತು ಸಂವೇದನಾರಹಿತ ಹೇಳಿಕೆಗಳು ಭಾರತೀಯ ಅಭಿಮಾನಿಗಳಿಂದ ಮಾತ್ರವಲ್ಲದೆ ಪಾಕಿಸ್ತಾನಿ ಅಭಿಮಾನಿಗಳಿಂದ ತೀವ್ರ ಟೀಕೆಗಳನ್ನು ಎದುರಿಸಿವೆ.

ಇದನ್ನೂ ಓದಿ : World Cup 2023 : ವಿಶ್ವ ಕಪ್​ ಆಡಲು ಬಂದ ಪಾಕ್​ ತಂಡದ ಊಟಕ್ಕೆ ಬೀಫ್​ ಕೊಡಲ್ಲ ಎಂದ ಭಾರತ

ಕಳೆದ 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಕ್ರಿಕೆಟ್ ತಂಡವೊಂದು ಭಾರತದ ನೆಲಕ್ಕೆ ಬಂದು ಕ್ರಿಕೆಟ್ ಆಡುತ್ತಿದೆ. 2016ರ ಟಿ20 ವಿಶ್ವಕಪ್ ಟೂರ್ನಿಗಾಗಿ ಪಾಕಿಸ್ತಾನ ಕೊನೆಯ ಬಾರಿ ಭಾರತಕ್ಕೆ ಆಗಮಿಸಿತ್ತು. ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ಐಸಿಸಿ ಮತ್ತು ಎಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಆಡುತ್ತವೆ. ಅಕ್ಟೋಬರ್ 14 ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕ್ ವಿಶ್ವಕಪ್ 2023 ರ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

Exit mobile version