Site icon Vistara News

Pakistan Cricket: ಟಿ20 ವಿಶ್ವಕಪ್​ ಗೆದ್ದರೆ ಪಾಕ್​ ಆಟಗಾರರಿಗೆ ಸಿಗಲಿದೆ ಭಾರೀ ಬಹುಮಾನ ಮೊತ್ತ

Pakistan Cricket

ಕರಾಚಿ: ಬಹುನಿರೀಕ್ಷಿತ ಟಿ20 ವಿಶ್ವಕಪ್(ICC T20 World Cup 2024)​ ಟೂರ್ನಿಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಟೂರ್ನಿಗಾಗಿ ಬಹುತೇಕ ತಂಡಗಳು ಕಠಿಣ ತಯಾರಿ ನಡೆಸುತ್ತಿವೆ. ಜತೆಗೆ 15 ಸದಸ್ಯರ ಬಲಿಷ್ಠ ಸಂಭಾವ್ಯ ತಂಡಗಳನ್ನು ಕೂಡ ಪ್ರಕಟಿಸಿವೆ. ಆದರೆ ಪಾಕಿಸ್ತಾನ(Pakistan Cricket) ಇದುವರೆಗೂ ತನ್ನ ತಂಡ ಪ್ರಕಟಿಸದಿದ್ದರೂ ಕೂಡ ವಿಶ್ವಕಪ್​ ಗೆದ್ದರೆ ತಂಡದ ಸದಸ್ಯರಿಗೆ ತಲಾ 83 ಲಕ್ಷ ರೂ. ಬಹುಮಾನ ನೀಡುವುದಾಗಿ ಪಿಸಿಬಿ(PCB) ಮುಖ್ಯಸ್ಥ ಮೊಹ್ಸೀನ್‌ ನಖ್ವಿ(Mohsin Naqvi) ಘೋಷಣೆ ಮಾಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಅಧಕಾರಿಗಳೊಂದಿಗೆ 2 ಗಂಟೆಗಳ ಕಾಲ ಸಭೆ ನಡೆಸಿದ ನಖ್ವಿ, ಈ ಬಹುಮಾನ ಮೊತ್ತವನ್ನು ಘೋಷಣೆ ಮಾಡಿದೆ. ಈ ಘೋಷಣೆಯನ್ನು ಕಂಡು ಅನೇಕ ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಹೈರಾಣವಾಗಿರುವ ಮಧ್ಯೆ ಇದೆಲ್ಲ ಬೇಕಿತ್ತಾ ಎಂದು ಕಾಲೆಳೆದಿದ್ದಾರೆ. ಪಾಕಿಸ್ತಾನ ತಂಡ ಐರ್ಲೆಂಡ್‌ ಮತ್ತು ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿ ಆಡಿದ ಬಳಿಕ ತನ್ನ ವಿಶ್ವಕಪ್​ ತಂಡವನ್ನು ಪ್ರಕಟಿಸಲಿದೆ.

“ಎದುರಾಳಿ ಯಾರೇ ಆಗಿರಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಒಂದು ತಂಡವಾಗಿ ಆಟವಾಡಿ” ಎಂದು ನಖ್ವಿ ಪಾಕಿಸ್ತಾನ ತಂಡದ ಆಟಗಾರರನ್ನು ಹುರಿದುಂಬಿಸಿದ್ದಾರೆ. ಇವರ ನೇತೃತ್ವದಲ್ಲೇ ಇತ್ತೀಚೆಗೆ ಪಾಕಿಸ್ತಾನ ಆಟಗಾರರಿಗೆ ಫಿಟ್​ನೆಸ್​ ಕಾಯ್ದುಕೊಳ್ಳುವ ಸಲುವಾಗಿ ಸೈನ್ಯದಲ್ಲಿ ಕಠಿಣ ತರಬೇತಿ ನೀಡಲಾಗಿತ್ತು.

ಭಾರತದ ಮಾಜಿ ಮುಖ್ಯ ಕೋಚ್, 2011ರಲ್ಲಿ ಏಕದಿನ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್(Gary Kirsten) ಮಾರ್ಗದರ್ಶನದಲ್ಲಿ ಪಾಕಿಸ್ತಾನ ಈ ಬಾರಿ ಟಿ20 ವಿಶ್ವಕಪ್​ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್​ 9ರಂದು ನಡೆಯಲಿದೆ.

ಇದನ್ನೂ ಓದಿ Pakistan Cricket: ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್ ಪಾಕ್​ ತಂಡಕ್ಕೆ ನೂತನ ಕೋಚ್​

ನ್ಯೂಯಾರ್ಕ್‌ನಲ್ಲಿ ಪಂದ್ಯ

ಇತ್ತಂಡಗಳ ನಡುವಣ ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಅಣಿಯಾಗಲಿದೆ. ಈ ಪಂದ್ಯಕ್ಕಾಗಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಈ ಪಂದ್ಯವನ್ನು ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ನಡೆಸಲಾಗುತ್ತಿದೆ. ಅಲ್ಲದೆ ಭಾರತದ ಬಹುತೇಕ ಲೀಗ್​ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದೆ.

ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್​ ಅಂತರದ ಹೀನಾಯ ಸೋಲಾಗಿತ್ತು.

Exit mobile version