ಲಾಹೋರ್: ಚಾಂಪಿಯನ್ಸ್ ಕಪ್ ದೇಶಿ ಟೂರ್ನಿಯಲ್ಲಿ ಆಡಲಿರುವ ಐದು ತಂಡಗಳಿಗೆ ಮಾಜಿ ಆಟಗಾರರಾದ ಮಿಸ್ಬಾ-ಉಲ್-ಹಕ್, ಸಕ್ಲೇನ್ ಮುಷ್ತಾಕ್, ಸರ್ಫರಾಜ್ ಅಹ್ಮದ್, ಶೋಯೆಬ್ ಮಲಿಕ್ ಮತ್ತು ವಕಾರ್ ಯೂನಿಸ್ ಅವರನ್ನು ಪಾಕಿಸ್ತಾನ ಕ್ರಿಕೆಟ್(Pakistan Cricket) ಮಂಡಳಿಯು(Pakistan Cricket Board ) ಮೆಂಟರ್‌ಗಳಾಗಿ ಹೆಸರಿಸಿದೆ. ಪ್ರವಾಸಿ ಬಾಂಗ್ಲಾದೇಶ (Bangladesh) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ತವರಿನಲ್ಲೇ ಪಾಕಿಸ್ತಾನ ಹೀನಾಯ ಸೋಲು ಕಂಡ ಬಳಿಕ ಪಿಸಿಬಿ ಈ ನಿರ್ಧಾರ ಕೈಗೊಂಡಿದೆ.
ವಕಾರ್ ಇತ್ತೀಚೆಗಷ್ಟೇ ಪಿಸಿಬಿಗೆ ಕ್ರಿಕೆಟ್ ವ್ಯವಹಾರಗಳ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಆಫ್ ಸ್ಪಿನ್ನರ್ ಆಗಿ ಆಡಿದ್ದ ಸಕ್ಲೇನ್ ಮುಷ್ತಾಕ್ ಮಾಜಿ ಹೆಡ್ ಕೋಚ್. ಮಿಸ್ಬಾ ಉಲ್ ಹಕ್ ಅವರೂ ರಾಷ್ಟ್ರೀಯ ತಂಡಕ್ಕೆ ಕೋಚ್ ಆಗಿದ್ದರು.
ಪಾಕ್ ಸೋಲಿಗೆ ಭಾರತ ಕಾರಣ!
ಪಾಕಿಸ್ತಾನ (Pakistan) ತವರಲ್ಲಿಯೇ ಸೋಲು ಕಂಡಿದ್ದಕ್ಕೆ ಪಾಕಿಸ್ತಾನದ ಮಾಜಿ ಆಟಗಾರ, ಕಾಮೆಂಟೇಟರ್ ರಮೀಜ್ ರಾಜಾ(Ramiz Raja), ಈ ಸೋಲಿಗೆ ಭಾರತವೇ ಕಾರಣ ಎಂದು ಹೇಳಿದ್ದಾರೆ. ಪಾಕಿಸ್ತಾನದ ಸೋಲಿನ ಬಳಿಕ ಮಾತನಾಡಿರುವ ರಮಿಜ್ ರಜಾ, “ಮೊದಲನೆಯದಾಗಿ, ತಂಡದ ಆಯ್ಕೆಯಲ್ಲಿಯೇ ತಪ್ಪಾಗಿದೆ. ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಬ್ಯಾಟರ್ಗಳು ನಮ್ಮ ವೇಗಿಗಳಿಗೆ ಸರಿಯಾಗಿ ದಂಡಿಸಿದ ಬಳಿಕ ಪಾಕ್ ತಂಡದ ಬೌಲಿಂಗ್ ಲೈನ್-ಅಪ್ ಎಲ್ಲರಿಗೂ ತಿಳಿಯುವಂತಾಯಿತು” ಎಂದು ಹೇಳುವ ಮೂಲಕ ಸೋಲಿಗೆ ಭಾರತವನ್ನು ದೂರಿದ್ದಾರೆ.
ಇದನ್ನೂ ಓದಿ Pakistan Cricket: ಬಾಡಿಗೆ ಫ್ಲಡ್‌ಲೈಟ್ ಅಳವಡಿಸಿ ಚಾಂಪಿಯನ್ ಟ್ರೋಫಿ ನಡೆಸಲು ಮುಂದಾದ ಪಾಕಿಸ್ತಾನ
ರಮೀಜ್ ರಾಜಾ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿರುವದು ಇದೇ ಮೊದಲೇನಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದ ವೇಳೆ, ಹಿಂದೊಮ್ಮೆ ಬಿಸಿಸಿಐ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಿದೆ. ಕೆಂದ್ರ ಸರ್ಕಾರ ಏನು ಹೇಳುತ್ತದೆಯೋ ಅದನ್ನೇ ಬಿಸಿಸಿಐ ಪಾಲಿಸುತ್ತಿದೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್ ಬೆಳವಣಿಗೆಯನ್ನು ನಾಶಮಾಡಲು ಆರಂಭಸಿದೆ ಎಂದು ಹೇಳಿದ್ದರು.
ಭಾನುವಾರ ರಾವಲ್ಪಿಂಡಿಯಲ್ಲಿ ಮುಕ್ತಾಯ ಕಂಡಿದ್ದ ಈ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 6 ವಿಕೆಟ್ಗೆ 448 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತ್ತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 565 ರನ್ ಪೇರಿಸಿತ್ತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಅಂತಿಮ ದಿನದಾಟದಲ್ಲಿ ಕೇವಲ 146 ರನ್ಗೆ ಸರ್ವ ಪತನ ಕಂಡಿತ್ತು. ಗೆಲುವಿಗೆ 28 ರನ್ ಗುರಿ ಪಡೆದ ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೆ 30 ರನ್ ಬಾರಿಸಿ ಗೆಲುವಿನ ನಗೆ ಬೀರಿತ್ತು. ಅತಿಯಾದ ಆತ್ಮವಿಶ್ವಾಸವೇ ಪಾಕ್ ತಂಡದ ಸೋಲಿಗೆ ಕಾರಣವಾಗಿತ್ತು. ಮೊದಲ ಇನಿಂಗ್ಸ್ನಲ್ಲಿ ಡಿಕ್ಲೇರ್ ಮಾಡದೇ ಇರುತ್ತಿದ್ದರೆ ಕನಿಷ್ಠ ಪಕ್ಷ ಪಂದ್ಯವನ್ನು ಡ್ರಾ ಮಾಡುವ ಅವಕಾಶ ದೊರಕುತ್ತಿತ್ತು. ಆದರೆ, ಅತಿಯಾದ ಆತ್ಮವಿಶ್ವಾಸದಿಂದ ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದ ಸಂಕಟಕ್ಕೆ ಸಿಲುಕಿತ್ತು.