ಇಸ್ಲಾಮಾಬಾದ್: ಭಾರತಕ್ಕೆ ವಿಶ್ವ ಕಪ್ನಲ್ಲಿ (World Cup 2023) ಆಡುವುದಕ್ಕೆ ತಂಡವನ್ನು ಕಳುಹಿಸಲು ಅಲ್ಲಿನ ವಿದೇಶಾಂಗ ಸಚಿವಾಲಯ ಒಪ್ಪಿಗೆ ನೀಡಿದೆ. ಹೀಗಾಗಿ ಟೂರ್ನಿಯಲ್ಲಿ ಪಾಕಿಸ್ತಾನದ ಪಾಲ್ಗೊಳ್ಳುವಿಕೆ ಖಾತರಿಯಾಗಿದೆ. ಏತನ್ಮಧ್ಯೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 2023 ರ ವಿಶ್ವ ಕಪ್ಗೆ ಮುಂಚಿತವಾಗಿ ಭದ್ರತೆಯನ್ನು ತಪಾಸಣೆ ನಡೆಸಲು ಬಿಸಿಸಿಐ ಮತ್ತು ಐಸಿಸಿಗೆ ಮನವಿ ಮಾಡಿದೆ. ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಭಾರತಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗಿರುವ ಹೊರತಾಗಿಯೂ ಭದ್ರತಾ ಕಾಳಜಿಗಳು ಇನ್ನೂ ಇದೆ. 14 ಸದಸ್ಯರ ಸಮಿತಿಯು ವಿಶೇಷವಾಗಿ ಅಹಮದಾಬಾದ್ನಲ್ಲಿ ಆಯೋಜನೆಗೊಂಡಿರುವ ಭಾರತ ಮತ್ತು ಪಾಕ್ ಪಂದ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ನಾವು ಈ ಭದ್ರತಾ ಕಳವಳವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಭಾರತೀಯ ಅಧಿಕಾರಿಗಳಿಗೆ ತಿಳಿಸುತ್ತಿದ್ದೇವೆ. ಭಾರತ ಭೇಟಿಯ ಸಮಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಸಂಪೂರ್ಣ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಬೇಕು ಎಂಬುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜಿಯೋ ಟಿವಿ ಪ್ರಕಾರ, ಪಾಕಿಸ್ತಾನವು ಭದ್ರತಾ ನಿಯೋಗವನ್ನು ಕಳುಹಿಸುವ ಬಗ್ಗೆ ಭಾರತ ಮತ್ತು ಐಸಿಸಿಯನ್ನು ಸಂಪರ್ಕಿಸಿದೆ. ನಿಯೋಗವನ್ನು ಕಳುಹಿಸುವ ಬಗ್ಗೆ ಒಪ್ಪಿಗೆ ಸಿಕ್ಕಿದರೆ ಅದು ಆಗಸ್ಟ್ ಕೊನೆಯ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದೆ ವರದಿ ಮಾಡಿದೆ. ದಿ ಟೆಲಿಗ್ರಾಫ್ ಪ್ರಕಾರ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿನ ಭದ್ರತೆಯ ಬಗ್ಗೆ ಅಲ್ಲಿನ ಕ್ರಿಕೆಟ್ ಸಂಸ್ಥೆ ಅನುಮಾನ ವ್ಯಕ್ತಪಡಿಸಿದೆ.
ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಬಾರದು ಎಂದು ಪಾಕಿಸ್ತಾನ ನಿರಂತರವಾಗಿ ಪ್ರತಿಪಾದಿಸುತ್ತಿದೆ. ಆದ್ದರಿಂದ ಮುಂಬರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾಗವಹಿಸಲು ತನ್ನ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸಲು ನಿರ್ಧರಿಸಿದೆ ಎಂದು ತಂಡದ ಪ್ರಯಾಣಕ್ಕೆ ಅನುಮತಿ ಕೊಡುವ ಮೊದಲು ವಿದೇಶಾಂಗ ಸಚಿವಾಲಯ ಹೇಳಿತ್ತು.
ಜನ ಜಂಗುಳಿ
ಇದೇ ಸ್ಥಳದಲ್ಲಿ ನಡೆದ ಐಪಿಎಲ್ 2023 ಫೈನಲ್ ಪಂದ್ಯದ ವೇಳೆ ಕಾಲ್ತುಳಿತದಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ಹೀಗಾಗಿ 2023ರ ವಿಶ್ವಕಪ್ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದ ಸುರಕ್ಷತೆಗಾಗಿ ಪಿಸಿಬಿ ಬಿಸಿಸಿಐ ಮತ್ತು ಐಸಿಸಿಯಿಂದ ಲಿಖಿತ ಭದ್ರತಾ ಖಾತರಿಯನ್ನು ಕೋರಿತ್ತು.
ಇದನ್ನೂ ಓದಿ : World Cup 2023 : ವಿಶ್ವ ಕಪ್ ವೇಳೆ ಪ್ರೇಕ್ಷರಿಗೆ ಉಚಿತ ಕುಡಿಯುವ ನೀರು!
ಪಾಕಿಸ್ತಾನದ ಪ್ರಧಾನಿ ಈ ವಾರದ ಆರಂಭದಲ್ಲಿ ಬಾಬರ್ ಅಜಮ್ ಮತ್ತು ಬಳಗದ ಬಗ್ಗೆ ಚರ್ಚಿಸಲು 14 ಸದಸ್ಯರ ಸಮಿತಿಯನ್ನು ನೇಮಿಸಿದ್ದರು. 2023ರ ವಿಶ್ವಕಪ್ ವೇಳಾಪಟ್ಟಿ ಇನ್ನೂ ನಿರ್ಧಾರವಾಗದಿದ್ದರೂ ಅವರಿಗೆ ಹಸಿರು ನಿಶಾನೆ ಕೊಡಲಾಗಿದೆ.
ಏಷ್ಯಾ ಕಪ್ ಟೂರ್ನಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ಬಿಸಿಸಿಐ ನಿರಾಕರಿಸಿತ್ತು. ಪರಿಣಾಮವಾಗಿ ಪಂದ್ಯಾವಳಿಯನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕಾಯಿತು. ಪಾಕಿಸ್ತಾನದಲ್ಲಿ ಕೇವಲ ನಾಲ್ಕು ಪಂದ್ಯಗಳು ನಡೆಯಲಿದೆ. ಪ್ರತೀಕಾರವಾಗಿ ಭಾರತಕ್ಕೆ ಪ್ರಯಾಣಿಸದಿರಲು ಪಿಸಿಬಿ ಈ ಹಿಂದೆ ಒತ್ತಾಯಿಸಿತ್ತು. ಆದರೆ ನಂತರ ತನ್ನ ನಿಲುವನ್ನು ಬದಲಿಸಿದೆ. ಬಾಬರ್ ಅಜಮ್ ಪಡೆ ಹೈದರಾಬಾದ್, ಅಹಮದಾಬಾದ್, ಚೆನ್ನೈ, ಕಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಆಡಲಿದೆ.