ಕರಾಚಿ: ಪ್ರಸಕ್ತ ಸಾಗುತ್ತಿರುವ ಏಕದಿನ ವಿಶ್ವಕಪ್ನಲ್ಲಿ(ICC World Cup 2023) ಪಾಕಿಸ್ತಾನ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವುತ್ತಿರುವ ಕಾರಣ ತಂಡದ ನಾಯಕ ಬಾಬರ್ ಅಜಂ(Babar Azam) ಅವರನ್ನು ಈ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಸೋಮವಾರ ನಡೆದ ಪಂದ್ಯದಲ್ಲಿ ದುರ್ಬಲ ಅಫಘಾನಿಸ್ತಾನ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡ ಬಳಿಕ ಬಾಬರ್ ಮತ್ತು ತಂಡದ ವಿರುದ್ಧ ಪಾಕಿಸ್ತಾನದ ಮಾಜಿ ಆಟಗಾರರು ಬಹಿರಂಗವಾಗಿಯೇ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ವಾಸಿಂ ಅಕ್ರಮ್ ಅವರಂತೂ ನೇರ ಪ್ರಸಾರದಲ್ಲೇ ಪಾಕಿಸ್ತಾನ ಆಟಗಾರರು ನಿತ್ಯ 8 ಕೆಜಿ ಮಟನ್ ತಿಂದರೆ ಇದೇ ಗತಿ ಎದುರಾಗುತ್ತದೆ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದರು. ಇದೀಗ ಬಾಬರ್ ಅವರು ನಾಯಕತ್ವದಿಂದ ಕೆಳಗಿಳಿಯುವ ಸುದ್ದಿಯೊಂದು ಹೊರಬಿದ್ದಿದೆ.
ಸದ್ಯದ ಮಾಹಿತಿ ಪ್ರಕಾರ ವಿಶ್ವಕಪ್ ಟೂರ್ನಿಯ ಬಳಿಕ ಬಾಬರ್ ಅಜಂ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಒಂದೊಮ್ಮೆ ಬಾಬರ್ ನಾಯಕತ್ವದಲ್ಲಿ ಪಾಕ್ ವಿಶ್ವಕಪ್ ಗೆದ್ದರೆ ಅವರೇ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ. ಸೋತು ಟೂರ್ನಿಯಿಂದ ಹೊರಬಿದ್ದರೆ ಅವರ ನಾಯಕತ್ವದ ಪಟ್ಟ ಕಳೆದುಕೊಳ್ಳುವುದು ಖಚಿತ ಎನ್ನಲಾಗಿದೆ.
ಇದನ್ನೂ ಓದಿ Babar Azam: ಬೆಂಗಳೂರಿನಲ್ಲಿ ಹುಟ್ಟುಹಬ್ಬ ಆಚರಿಸಿದ ಪಾಕ್ ನಾಯಕ ಬಾಬರ್ ಅಜಂ
ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಈ ವೇಳೆ ಬಾಬರ್ ತಲೆದಂಡ ಖಚಿತ ಎಂದು ಪಾಕ್ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. 2024 ರ ಟಿ20 ವಿಶ್ವಕಪ್ ಮತ್ತು 2025 ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಪಿಬಿಸಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ತನ್ನ ವರದಿಯಲ್ಲಿ ತಿಳಿಸಿದೆ.
ರೇಸ್ನಲ್ಲಿ ರಿಜ್ವಾನ್, ಅಫ್ರಿದಿ
ಬಾಬರ್ ಅವರು ನಾಯಕತ್ವದಿಂದ ಕೆಳಗಿಳಿದರೆ ಅವರ ಸ್ಥಾನಕ್ಕೆ ಇಬ್ಬರು ಆಟಗಾರರು ರೇಸ್ನಲ್ಲಿದ್ದಾರೆ. ಅವರೆಂದರೆ ಮೊಹಮ್ಮದ್ ರಿಜ್ವಾನ್ ಮತ್ತು ವೇಗಿ ಶಾಹೀನ್ ಅಫ್ರಿದಿ. ರಿಜ್ವಾನ್ ಪ್ರತಿ ಪಂದ್ಯದಲ್ಲೂ ಉತ್ತಮ ಇನಿಂಗ್ಸ್ ಕಟ್ಟಿ ತಂಡಕ್ಕೆ ಗೆಲುವು ತಂದುಕೊಡುತ್ತಿದ್ದಾರೆ. ಹೀಗಾಗಿ ಅವರು ಕೂಡ ನಾಯಕನ ರೇಸ್ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಶಾಹೀನ್ ಅಫ್ರಿದಿ ಈ ಹಿಂದೆಯೇ ಬಾಬರ್ ನಾಯಕತ್ವದ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿದ್ದರು. ಡ್ರೆಸಿಂಗ್ ರೂಮ್ನಲ್ಲಿ ಇವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಬಾಬರ್ ಅವರು ಆಟಗಾರರ ಜತೆ ಸರಿಯಾಗಿ ವರ್ತಿಸುತ್ತಿಲ್ಲ ಎಂದು ಹೇಳಿದ್ದರು. ಒಟ್ಟಾರೆ ಬಾಬರ್ಗೆ ಈ ವಿಶ್ವಕಪ್ ಟೂರ್ನಿ ಅಗ್ನಿಪರೀಕ್ಷೆಯಾಗಿದೆ.
ಇದನ್ನೂ ಓದಿ Hardik Pandya : ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಹಾರ್ದಿಕ್ ಅಲಭ್ಯ; ಹೊಸ ಮಾಹಿತಿ ಬಹಿರಂಗ
ಬಾಬರ್ಗೆ ಸಲಹೆ
ಅನೇಕರು ಬಾಬರ್ಗೆ ಸಲಹೆಯನ್ನು ನೀಡಿ ನಾಯಕತ್ವ ತೊರೆದು ಆಟಗಾರನಾಗಿ ತಂಡದಲ್ಲಿ ಮುಂದುವರಿಯಿರಿ ಆಗ ನಿಮ್ಮ ಬ್ಯಾಟಿಂಗ್ ಫಾರ್ಮ್ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಕೂಡ ನಾಯತ್ವದ ಅವಧಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಅವರು ನಾಯಕತ್ವ ತ್ಯಜಿಸಿದ ಬಳಿಕ ಮತ್ತೆ ತಮ್ಮ ಹಳೆಯ ಪ್ರಚಂಡ ಫಾರ್ಮ್ ಕಂಡುಕೊಂಡರು. ಇದೇ ರೀತಿ ಬಾಬರ್ ಕೂಡ ತಮ್ಮ ನಾಯಕತ್ವ ತ್ಯಜಿಸಿ ಆಟಗಾರನಾಗಿ ಮುಂದುವರಿಯಿರಿ ಎಂದು ಸೂಕ್ತ ಸಲಹೆ ನೀಡಿದ್ದಾರೆ.