ನವ ದೆಹಲಿ: ಏಷ್ಯಾಕಪ್ 2023 ಆಯೋಜಿಸುವ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಷ್ಯಾ ಕ್ರಿಕೆಟ್ ಕೌನ್ಸಿಲ್ನ ಉಳಿದ ಎಲ್ಲ ದೇಶಗಳ ಕ್ರಿಕೆಟ್ ಮಂಡಳಿಗಳ ಬೆಂಬಲ ಕಳೆದುಕೊಂಡಿದೆ. ಶ್ರೀಲಂಕಾ ಕ್ರಿಕೆಟ್, ಬಾಂಗ್ಲಾದೇಶ ಕ್ರಿಕೆಟ್ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ಪಿಸಿಬಿ ಪ್ರಸ್ತಾಪಿಸಿದ್ದ ‘ಹೈಬ್ರಿಡ್ ಮಾದರಿ’ಯನ್ನು ನಿರಾಕರಿಸಿವೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭರ್ಜರಿ ಹಿನ್ನಡೆಯಾಗಿದ್ದು, ಬಿಸಿಸಿಐಗೆ ಈ ವಿಚಾರದಲ್ಲಿ ಜಯ ಸಿಕ್ಕಿದೆ. ಈ ಬೆಳವಣಿಗೆ ಪರಿಣಾಮವಾಗಿ ಏಷ್ಯಾ ಕಪ್ ತಟಸ್ಥ ಸ್ಥಳದಲ್ಲಿ ಮಾತ್ರ ನಡೆಯಬೇಕು ಅಥವಾ ಬೇರೆ ದೇಶಗಳಿಗೆ ಆತಿಥ್ಯ ನೀಡಬೇಕು. ಅದೂ ಅಲ್ಲದಿದ್ದರೆ ಏಷ್ಯಾಕಪ್ನಿಂದ ಪಾಕಿಸ್ತಾನ ತಂಡವನ್ನು ಹೊರಗಿಡಬೇಕಾಗುತ್ತದೆ.
ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡುವುದಿಲ್ಲ ಎಂದು ಹೇಳಿದ ಬಳಿ ಪಿಸಿಬಿ ಮುಖ್ಯಸ್ಥ ನಜಾಮ್ ಸೇಥಿ ಹೈಬ್ರಿಡ್ ಮಾದರಿ ಪ್ರಸ್ತಾಪಿಸಿದ್ದರು. ಇದರ ಪ್ರಕಾರ ಭಾರತ ಆಡಲಿರುವ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಬಹುದು. ಆದಾಗ್ಯೂ, ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸುವ ಬಿಸಿಸಿಐನ ಒತ್ತಡವನ್ನು ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳು ಬೆಂಬಲಿಸಿವೆ ಎಂಬುದು ಈಗ ಸ್ಪಷ್ಟವಾಗಿದೆ.
ಪಿಸಿಬಿ ಮುಖ್ಯಸ್ಥ ನಜಾಮ್ ಸೇಥಿ ಆರಂಭದಲ್ಲಿ ಬಿಸಿಸಿಐ ಹೊರತುಪಡಿಸಿ ಎಲ್ಲಾ ಮೂರು ಮಂಡಳಿಗಳಿಂದ ಬೆಂಬಲವನ್ನು ಪಡೆದಿದ್ದರು. ಪ್ರಸ್ತಾವಿತ ಮಾದರಿಯಲ್ಲಿ, ಪಾಕಿಸ್ತಾನವು ನಾಲ್ಕು ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿತ್ತು. ರತ ಮತ್ತು ಫೈನಲ್ ಒಳಗೊಂಡ ಉಳಿದ ಪಂದ್ಯಗಳು ಶ್ರೀಲಂಕಾ ಅಥವಾ ಯುಎಇಯಲ್ಲಿ ನಡೆಯಬೇಕಾಗಿತ್ತು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಮಾದರಿಯನ್ನು ಅನುಮೋದಿಸಲು ನಿರಾಕರಿಸಿದ್ದರಿಂದ, ಪಿಸಿಬಿ ನಿಧಾನವಾಗಿ ಬೆಂಬಲವನ್ನು ಕಳೆದುಕೊಂಡಿತು. ಈಗ, ಪಂದ್ಯಾವಳಿ ಮುಂದುವರಿದರೆ, ಅದು ತಟಸ್ಥ ಸ್ಥಳದಲ್ಲಿ ಮುಂದುವರಿಯುತ್ತದೆ. ಆದರೆ ಪಾಕಿಸ್ತಾನ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತದೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಹೈಬ್ರಿಡ್ ಮಾದರಿಗೆ ಅನುಮೋದನೆ ಸಿಗದಿದ್ದರೆ ಏಷ್ಯಾ ಕಪ್ ಅನ್ನು ಬಹಿಷ್ಕರಿಸುವುದಾಗಿ ಪಿಸಿಬಿ ಈಗಾಗಲೇ ಬೆದರಿಕೆ ಹಾಕಿದೆ.
ಏಷ್ಯಾಕಪ್ನ ಪಂದ್ಯಗಳನ್ನು ತವರಿನಲ್ಲಿ ಆಯೋಜಿಸಲು ಸಾಧ್ಯವಾಗದು ಎಂಬ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚಿಸಲು ಪಿಸಿಬಿ ಅಧ್ಯಕ್ಷ ಸೇಥಿ ಈಗಾಗಲೇ ತಮ್ಮ ಕ್ರಿಕೆಟ್ ನಿರ್ವಹಣಾ ಸಮಿತಿಯ ಸದಸ್ಯರು ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕ್ಗೆ ಎರಡು ಆಯ್ಕೆಗಳು
ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ತಟಸ್ಥ ದೇಶಕ್ಕೆ ಸ್ಥಳಾಂತರಿಸಿದರೆ, ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸೇಥಿ ಪದೇ ಪದೇ ಹೇಳುತ್ತಿದ್ದರು. ಹೀಗಾಗಿ ಪಾಕಿಸ್ತಾನಕ್ಕೆ ಕೇವಲ ಎರಡು ಆಯ್ಕೆಗಳಿವೆ. ತಟಸ್ಥ ಸ್ಥಳದಲ್ಲಿ ಪಂದ್ಯವನ್ನು ಆಡುವುದು ಅಥವಾ ಹಿಂದೆ ಸರಿಯವುದು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮೂಲಗಳು ತಿಳಿಸಿವೆ.
ಇದರೆಲ್ಲರ ಪರಿಣಾಮವಾಗಿ ಈ ವರ್ಷ ಏಷ್ಯಾ ಕಪ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಸಾಧ್ಯತೆಯಿದೆ. ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ವಿಶ್ವ ಕಪ್ಗೆ ಮುಂಚಿತವಾಗಿ 50 ಓವರ್ಗಳ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಸಾಧ್ಯತೆಗಳಿವೆ.
ಈ ವರ್ಷ ಏಷ್ಯಾ ಕಪ್ ನಡೆಯದೇ ಇರುವ ಎಲ್ಲಾ ಸಾಧ್ಯತೆಗಳೇ ಹೆಚ್ಚು. ಏಕೆಂದರೆ ಪಾಕಿಸ್ತಾನ ಮತ್ತು ಭಾರತ ನಡುವೆ ಪಂದ್ಯಗಳಿಲ್ಲದೆ ನೇರ ಪ್ರಸಾರದ ಹಕ್ಕು ಪಡೆದ ಸಂಸ್ಥೆಗಳು ಎಸಿಸಿಗೆ ಈ ಹಿಂದಿನ ಒಪ್ಪಂದದ ಪ್ರಕಾರ ಎಸಿಸಿಗೆ ಹಣ ನೀಡಲು ಸಾಧ್ಯವಿಲ್ಲ. ಹೀಗಾಗಿ ಉಳಿದ ತಂಡಗಳನ್ನು ಒಳಗೊಂಡ ಟೂರ್ನಿ ಮಾತ್ರನ ನಡೆಯಲಿದೆ ಎನ್ನಲಾಗಿದೆ.
ಹೊಸ ಬೆಳವಣಿಗೆಯಿಂದ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ ವಹಿಸುವ ಸಾಧ್ಯತೆ ಶೂನ್ಯ. ಮುಂದಿನ ಚಾಂಪಿಯನ್ಸ್ ಟ್ರೋಫಿಯನ್ನು ಸಹ ಸ್ಥಳಾಂತರ ಮಾಡುವ ವಿಚಾರ ಐಸಿಸಿಯಲ್ಲಿ ಚರ್ಚೆ ನಡೆಯಲಿದೆ. ಒಂದು ವೇಳೆ ಪಾಕಿಸ್ತಾನ ತಪ್ಪಿದರೆ ಸದ್ಯಕ್ಕೆ ಶ್ರೀಲಂಕಾ ಟೂರ್ನಿಯ ಆತಿಥ್ಯ ವಹಿಸುವ ಸಾಧ್ಯತೆ ಇದೆ. ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.