ಕರಾಚಿ : ಏಷ್ಯಾ ಕಪ್ (Asia Cup- 2022) ಟೂರ್ನಿಗೆ ಸಜ್ಜಾಗುತ್ತಿರುವ ಪಾಕಿಸ್ತಾನ ತಂಡಕ್ಕೆ ಕಹಿ ಸುದ್ದಿಯೊಂದು ಬಂದಿದೆ. ಕಳೆದ ವರ್ಷ ನಡೆದ ಟಿ೨೦ ವಿಶ್ವ ಕಪ್‌ನಲ್ಲಿ ಭಾರತ ತಂಡದ ಪ್ರಮುಖ ೩ ವಿಕೆಟ್‌ಗಳನ್ನು ಕಬಳಿಸಿದ್ದ ಯುವ ವೇಗಿ ಶಹೀನ್ ಶಾ ಅಫ್ರಿದಿ ಗಾಯದ ಸಮಸ್ಯೆಯಿಂದಾಗಿ ಏಷ್ಯಾ ಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಭಾರತ ವಿರುದ್ಧದ ಮೊದಲ ಹಣಾಹಣಿಗೆ ಸಿದ್ಧತೆ ಮಾಡುತ್ತಿದ್ದ ಬಾಬರ್ ಅಜಮ್ ಬಳಗಕ್ಕೆ ಆರಂಭಿಕ ಹಿನ್ನಡೆ ಉಂಟಾಗಿದೆ.
ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ತಂಡ ಶ್ರೀಲಂಕಾಗೆ ಪ್ರವಾಸ ಮಾಡಿದ್ದ ವೇಳೆ ಶಹೀನ್ ಅಫ್ರಿದಿ ಪಾದದ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಅವರಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಏಷ್ಯಾ ಕಪ್‌ಗೆ ಲಭ್ಯರಾಗುವುದಾಗಿ ಹೇಳಲಾಗಿತ್ತು. ಆದರೆ, ಮುಂಬರುವ ಟಿ೨೦ ವಿಶ್ವ ಕಪ್‌ನ ದೂರ ದೃಷ್ಟಿಯಿಂದ ಶಹೀನ್ ಶಾ ಅಫ್ರಿದಿಗೆ ನೀಡಲಾದ ವಿಶ್ರಾಂತಿಯನ್ನು ಹೆಚ್ಚಿಸಲು ಪಿಸಿಬಿ ಮುಂದಾಗಿದೆ. ಹೀಗಾಗಿ ಏಷ್ಯಾ ಕಪ್‌ನಲ್ಲೂ ಆಡಿಸದೇ ಇರಲು ನಿರ್ಧರಿಸಿದೆ.
೨೧ ವರ್ಷದ ಶಹೀನ್ ಶಾ ಅಫ್ರಿದಿ ಪಾಕಿಸ್ತಾನದ ತಂಡದ ಪ್ರಮುಖ ಬೌಲರ್ ಆಗಿದ್ದಾರೆ. ನಾಲ್ಕು ವರ್ಷದಲ್ಲಿ ಅವರು ಪಾಕಿಸ್ತಾನ ತಂಡದ ಪರ ಎಲ್ಲ ಮಾದರಿಯಲ್ಲಿ ೯೭ ಪಂದ್ಯಗನ್ನು ಆಡಿದ್ದಾರೆ. ಸತತವಾಗಿ ಆಡುತ್ತಿರುವ ಅವರಿಗೆ ವಿಶ್ರಾಂತಿ ನೀಡಿ ವಿಶ್ವ ಕಪ್‌ಗೆ ಪುನಶ್ಚೇತನ ಕೊಡಿಸುವುದು ಪಿಸಿಬಿಯ ಉದ್ದೇಶವಾಗಿದೆ.
ಕಳೆದ ಟಿ೨೦ ವಿಶ್ವ ಕಪ್‌ನಲ್ಲಿ ಶಹೀನ್ ಅವರು ಕೆ.ಎಲ್ ರಾಹುಲ್, ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದ್ದರು. ಅವರ ಬೌಲಿಂಗ್ ದಾಳಿಗೆ ಬೆಚ್ಚಿದ ಭಾರತ ದೊಡ್ಡ ಮೊತ್ತ ಪೇರಿಸಲು ವಿಫಲಗೊಂಡಿತ್ತು ಅಲ್ಲದೆ, ೧೦ ವಿಕೆಟ್‌ಗಳ ಹೀನಾಯ ಸೋಲಿಗೆ ಒಳಗಾಗಿತ್ತು.
ಇದನ್ನೂ ಓದಿ | Asia Cup | ವೇಗದ ಬೌಲರ್‌ಗೆ ಗಾಯ, ಪಾಕ್ ನಾಯಕನಿಗೆ ಶುರುವಾಯ್ತು ಟೆನ್ಷನ್