Site icon Vistara News

World Cup 2023 : ವೇಳಾಪಟ್ಟಿ ಪ್ರಕಟಗೊಂಡಿದ್ದರೂ ಪಾಕಿಸ್ತಾನ ತಂಡ ಬರುವುದು ಖಾತರಿಯಿಲ್ಲ!

Pakistan Cricket Team

ಮುಂಬಯಿ: ವಿಶ್ವ ಕಪ್ 2023 (World Cup 2023) ವೇಳಾಪಟ್ಟಿ ಹೊರಬಿದ್ದಿದೆ. ಆದರೆ, ಭಾರತದಲ್ಲಿ ನಡೆಯಲಿರುವ ಮೆಗಾ ಟೂರ್ನಮೆಂಟ್​ನಲ್ಲಿ ಪಾಲ್ಗೊಳ್ಳುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್​ ತಂಡ ಇನ್ನೂ ಖಚಿತ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿಗದಿಯಾಗಿರು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್​ ತಂಡಗಳ ನಡುವಿನ ಪಂದ್ಯದ ತಾಣವನ್ನು ಬದಲಾವಣೆ ಮಾಡಲು ಬಿಸಿಸಿಐ ನಿರಾಕರಿಸಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿ ಮತ್ತು ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ವೇಳೆ ಭಾರತಕ್ಕೆ ಪ್ರಯಾಣಿಸುವ ಬಗ್ಗೆ ಅಲ್ಲಿನ ಕ್ರಿಕೆಟ್​ ಮಂಡಳಿ ಪಾಕಿಸ್ತಾನ ಸರ್ಕಾರದ ಮಾರ್ಗದರ್ಶನವನ್ನು ಕೋರಿದೆ. ಒಂದು ವೇಳೆ ಸರಕಾರ ನಿರಾಕರಿಸಿತು ಎಂದಾದರೆ ಆ ತಂಡ ಭಾರತಕ್ಕೆ ಬರುವುದಿಲ್ಲ.

ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ ಬಾಬರ್ ಅಜಮ್ ಮತ್ತು ಬಳಗ ಅಕ್ಟೋಬರ್ 6 ರಂದು ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್ 1 (ಅರ್ಹತಾ ಪಂದ್ಯಗಳಿಂದ ಬಂದ ತಂಡದ ) ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಪಂದ್ಯದ ಸ್ಥಳಗಳು ಖಾತರಿ ಸೇರಿದಂತೆ ಭಾರತದ ಪ್ರವಾಸಕ್ಕೆ ಪಾಕಿಸ್ತಾನ ಸರ್ಕಾರದ ಅನುಮತಿ ಬೇಕೇಬೇಕು. ಕೆಲವು ವಾರಗಳ ಹಿಂದೆ ಐಸಿಸಿ ಕರಡು ವೇಳಾಪಟ್ಟಿಯನ್ನು ನಮ್ಮೊಂದಿಗೆ ಹಂಚಿಕೊಂಡಿತ್ತು. ಅದರನ್ವಯ ಕೆಲವೊಂದು ಬದಲಾವಣೆಗಳನ್ನು ಕೋರಿದ್ದೇವೆ. ಆ ಬೇಡಿಕೆಗೆ ಬದ್ಧರಾಗಿದ್ದೇವೆ. ಇನ್ನುಳಿದಂತೆ ಸರಕಾರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಪಿಸಿಬಿ ವಕ್ತಾರರು ಜಿಯೋ ಟಿವಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : World Cup 2023 : ಏಕ ದಿನ ವಿಶ್ವ ಕಪ್​ನಲ್ಲಿ ಭಾರತ ತಂಡದ ವೇಳಾಪಟ್ಟಿ ಇಂತಿದೆ

ಸರ್ಕಾರ ಅನುಮತಿ ನೀಡಿದರೆ ಮಾತ್ರ ಪಾಕಿಸ್ತಾನ ತಂಡ ಭಾರತಕ್ಕೆ ಪ್ರಯಾಣಿಸಲಿದೆ. 2023ರ ಏಷ್ಯಾಕಪ್ ಟೂರ್ನಿಯನ್ನು ಭಾಗಶಃ ಪಾಕಿಸ್ತಾನದಿಂದ ಸ್ಥಳಾಂತರಿಸುವಂತೆ ಬಿಸಿಸಿಐ ಒತ್ತಡ ಹೇರಿರುವುದಕ್ಕೆ ಪಾಕಿಸ್ತಾನಕ್ಕೆ ಅಸಮಾಧಾನವಿದೆ. ಪಾಕಿಸ್ತಾನ ಕೇವಲ ನಾಲ್ಕು ಪಂದ್ಯಗಳಿಗೆ ಆತಿಥ್ಯ ವಹಿಸಿದರೆ, ಶ್ರೀಲಂಕಾ ಏಷ್ಯಾಕಪ್ ಮತ್ತು ಮೆಗಾ ಕಾಂಟಿನೆಂಟಲ್ ಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಇದಕ್ಕೆ ಪ್ರತಿಕಾರವಾಗಿ ಪಾಕಿಸ್ತಾನವೂ ಈಗ ಕ್ಯಾತೆ ತೆಗೆಯುತ್ತಿದೆ.

ಪಿಸಿಬಿ ಈಗ ಪಾಕಿಸ್ತಾನ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಐಸಿಸಿಗೂ ಕೂಡ ಅದೇ ಮಾಹಿತಿ ನೀಡಿದೆ. ಆದಾಗ್ಯೂ, ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಕ್ಕೆ ಪಾಕಿಸ್ತಾನದ ಆತಿಥ್ಯ ಹಕ್ಕುಗಳನ್ನು ಬಿಸಿಸಿಐ ಆಕ್ಷೇಪಿಸುತ್ತಿವೆ ಎಂದು ಈಗಾಗಲೇ ಸುದ್ದಿಯಾಗಿದೆ. ಅದೇ ವಿಚಾರವನ್ನೂ ಇದೇ ಸಂದರ್ಭದಲ್ಲಿ ಮುನ್ನಲೆಗೆ ತರಲು ಪಿಸಿಬಿ ಬಯಸಿದೆ. ಭಾರತ ಮುಂದೆಯೂ ಇದೇ ರೀತಿ ಆಕ್ಷೇಪ ವ್ಯಕ್ತಪಡಿಸಬಹುದು ಎಂಬ ವಿಷಯವನ್ನೂ ಪಿಸಿಬಿ ಐಸಿಸಿ ವಿರುದ್ಧ ಪ್ರಸ್ತಾಪಿಸಿದೆ.

ಆದಾಗ್ಯೂ, ಮುಂದಿನ ಎರಡು ತಿಂಗಳಲ್ಲಿ ಸಾಕಷ್ಡು ಬದಲಾವಣೆಗಳು ಆಗಬಹುದು. ಆಡಳಿತಾರೂಢ ಸಮ್ಮಿಶ್ರ ಸರಕಾರದ ಅವಧಿ ಆಗಸ್ಟ್ ನಲ್ಲಿ ಕೊನೆಗೊಳ್ಳಲಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಭಾರತಕ್ಕೆ ಪ್ರಯಾಣಿಸುವ ನಿರ್ಧಾರವು ಹೊಸ ಸರ್ಕಾರ ಮತ್ತು ನರೇಂದ್ರ ಮೋದಿ ಸರ್ಕಾರದೊಂದಿಗಿನ ರಾಜತಾಂತ್ರಿಕ ಸಂಬಂಧಗಳ ಮೇಲೆ ಅವಲಂಬಿತವಾಗಿರುತ್ತದೆ.

2016ರಲ್ಲಿ, ನವಾಜ್ ಷರೀಫ್ ನೇತೃತ್ವದ ಸರ್ಕಾರವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಕೊನೆಯ ಕ್ಷಣದಲ್ಲಿ ಅನುಮತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪಿಸಿಬಿ ಮತ್ತು ಪಾಕಿಸ್ತಾನ ಸರ್ಕಾರವು ಭದ್ರತೆಯ ಬಗ್ಗೆ ಭಾರತ ಸರ್ಕಾರದಿಂದ ಭರವಸೆಗಳನ್ನು ಬಯಸಿತ್ತು. ಧರ್ಮಶಾಲಾದಿಂದ ಕೋಲ್ಕತಾಗೆ ಭಾರತ-ಪಾಕಿಸ್ತಾನ ಪಂದ್ಯವನ್ನು ಬಿಸಿಸಿಐ ಸ್ಥಳಾಂತರಿಸಿತ್ತು.

ಪಾಕಿಸ್ತಾನ ವಿಶ್ವಕಪ್ ವೇಳಾಪಟ್ಟಿ

Exit mobile version