ನವ ದೆಹಲಿ: ಭಾರತ ತಂಡ ಏಷ್ಯಾ ಕಪ್ನಲ್ಲಿ ಆಡುವುದಕ್ಕೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ, ಪಾಕಿಸ್ತಾನ ತಂಡ ವಿಶ್ವ ಕಪ್ ಆಡುವುದಕ್ಕೆ ಭಾರತಕ್ಕೆ ಬರುವುದಿಲ್ಲ ಎಂಬ ಚರ್ಚೆ ನಿರಂತರವಾಗಿ ನಡೆಯುತ್ತಿದೆ. ಏತನ್ಮಧ್ಯೆ ಹೊಸ ಸುದ್ದಿಯೊಂದು ಐಸಿಸಿ ಕಡೆಯಿಂದ ಪ್ರಕಟಗೊಂಡಿದೆ. ಭಾರತ ತಂಡ ನಮ್ಮ ದೇಶಕ್ಕೆ ಆಡಲು ಬರುವದೋ ಇಲ್ಲವೊ ಗೊತ್ತಿಲ್ಲ. ಆದರೆ, ನಾವು ಭಾರತಕ್ಕೆ ಹೋಗುವುದಕ್ಕೆ ರೆಡಿ ಇದ್ದೇವೆ. ಆದರೆ, ನಮ್ಮ ಪಂದ್ಯಗಳೆಲ್ಲವನ್ನೂ ಚೆನ್ನೈ ಮತ್ತು ಕೋಲ್ಕೊತಾದಲ್ಲಿ ಆಯೋಜಿಸಬೇಕು ಎಂದು ಕೋರಿಕೊಂಡಿದೆ ಎಂಬುದಾಗಿ ಪಿಟಿಐ ವರದಿ ಮಾಡಿದೆ.
ಭಾರತದ ಆತಿಥ್ಯದಲ್ಲಿ ನಡೆಯಲಿರುವ ವಿಶ್ವ ಕಪ್ ಅಕ್ಟೋಬರ್ 5ರಂದ ಆರಂಭಗೊಳ್ಳಲಿದೆ. ಸುಮಾರು 46 ಪಂದ್ಯಗಳು ಈ ಐಸಿಸಿ ಟೂರ್ನಿಯಲ್ಲಿ ನಡೆಯಲಿದೆ. ಭಾರತದ 12 ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಸಿದ್ಧತೆಯನ್ನೂ ನಡೆಸಿಕೊಂಡಿದೆ. ಅಹಮದಾಬಾದ್, ಲಖನೌ, ಮುಂಬಯಿ, ಕೋಲ್ಕೊತಾ, ರಾಜ್ಕೋಟ್, ಬೆಂಗಳೂರು, ಡೆಲ್ಲಿ, ಇಂದೋರ್, ಗುವಾಹಟಿ ಹಾಗೂ ಹೈದರಾಬಾದ್ನಲ್ಲಿ ಪಂದ್ಯಗಳು ನಡೆಯಲಿವೆ. ಇಲ್ಲಿ ಚೆನ್ನೈ ಮತ್ತು ಕೋಲ್ಕೊತಾವನ್ನು ಪಾಕಿಸ್ತಾನ ತಂಡ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.
ದಶಕದ ಹಿಂದೆ ಪಾಕಿಸ್ತಾನ ತಂಡ ಭಾರತಕ್ಕೆ ಪ್ರವಾಸ ಮಾಡಿದ್ದಾಗ ಚೆನ್ನೈ ಮತ್ತು ಕೋಲ್ಕೊತಾ ಸುರಕ್ಷಿತ ಎಂದು ಅನಿಸಿತ್ತು. ಹೀಗಾಗಿ ಆ ಎರಡು ತಾಣಗಳಲ್ಲಿ ಪಂದ್ಯಗಳನ್ನು ನಡೆಸಿದರೆ ಮಾತ್ರ ಬರುವುದಾಗಿ ಐಸಿಸಿ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದೆ ಎಂದು ಹೇಳಲಾಗಿದೆ.
2016ರ ಟಿ20 ವಿಶ್ವ ಕಪ್ಗೆ ಪಾಕಿಸ್ತಾನ ತಂಡ ಭಾರತಕ್ಕೆ ಬಂದಿತ್ತು. ಈ ವೇಳೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಧರ್ಮಶಾಲಾದಲ್ಲಿ ಆಯೋಜನೆಗೊಂಡಿತ್ತು. ಆದರೆ, ಪಠಾಣ್ಕೋಟ್ ದಾಳಿಯ ಹಿನ್ನೆಲೆಯಲ್ಲಿ ಪಂದ್ಯವನ್ನು ಕೋಲ್ಕೊತಾಗೆ ವರ್ಗಾಯಿಸಲಾಗಿತ್ತು.
ಪಾಕಿಸ್ತಾನದ ತೀರ್ಮಾನಕ್ಕೆ ಬಿಸಿಸಿಐ ಮತ್ತು ಭಾರತ ಸರಕಾರ ಒಪ್ಪಿಗೆ ಕೊಡಬೇಕಾಗುತ್ತದೆ. ಆದರೆ, ಪಾಕಿಸ್ತಾನ ತಂಡ ತನ್ನ ಪಂದ್ಯಗಳನ್ನು ಚೆನ್ನೈ ಮತ್ತು ಕೋಲ್ಕೊತಾದಲ್ಲಿ ಆಡುವುದಾಗಿಯೇ ಹೇಳುತ್ತಿದೆ. 2016ರಲ್ಲಿ ಟಿ20 ವಿಶ್ವ ಕಪ್ ಆಡಿದಾಗ ಪಾಕಿಸ್ತಾನದ ಆಟಗಾರರಿಗೆ ಅಲ್ಲಿ ಸುರಕ್ಷಿತ ಎಂದು ಅನಿಸಿತತು. ಚೆನ್ನೈ ಕೂಡ ಅಪಾಯಕಾರಿ ಅಲ್ಲ ಎಂಬುದು ಅವರ ಭಾವನೆ ಎಂಬುದಾಗಿ ಪಾಕಿಸ್ತಾನ ತಂಡ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ : World Cup : ವಿಶ್ವ ಕಪ್ ಹಿನ್ನೆಲೆಯಲ್ಲಿ ಐದು ಸ್ಟೇಡಿಯಮ್ಗಳ ಉನ್ನತೀಕರಣಕ್ಕೆ ಬಿಸಿಸಿಐ ಸಿದ್ಧತೆ
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೆಂದರೆ ಜಿದ್ದಾಜಿದ್ದಿ ಹೆಚ್ಚು. ಈ ಹಣಾಹಣಿಯ ಮೂಲಕ ಗರಿಷ್ಠ ಆದಾಯ ಸಂಗ್ರಹ ಮಾಡುವುದು ಬಿಸಿಸಿಐ ಗುರಿಯಾಗಿರುತ್ತದೆ. ಹೀಗಾಗಿ ಭಾರತದಲ್ಲಿರುವ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ಆಗಿರುವ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಈ ಪಂದ್ಯ ಆಯೋಜಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಸ್ಟೇಡಿಯಮ್ನಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಗೆ ಪಂದ್ಯ ವೀಕ್ಷಿಸಲು ಸಾಧ್ಯವಿದೆ.
ವಿಶ್ವ ಕಪ್ನಲ್ಲಿ ಪ್ರತಿಯೊಂದು ತಂಡಗಳು ತಲಾ 9 ಪಂದ್ಯಗಳಲ್ಲಿ ಆಡಲಿವೆ. ಟೂರ್ನಿಯು ರೌಂಡ್ ರಾಬಿನ್ ಹಂತದಲ್ಲಿ ನಡೆಯಲಿದೆ.
ಐಪಿಎಲ್ ಮುಕ್ತಾಯಗೊಂಡ ತಕ್ಷಣ ವಿಶ್ವ ಕಪ್ನ ವೇಳಾಪಟ್ಟಿಯನ್ನು ಬಿಸಿಸಿಐ ಮತ್ತು ಐಸಿಸಿ ಜಂಟಿಯಾಗಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.