ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್(ICC World Cup) ಟೂರ್ನಿ ಆಡಲು ಭಾರತಕ್ಕೆ ಪ್ರಯಾಣ ಬೆಳೆಸಲು ಪಾಕಿಸ್ತಾನ ತಂಡಕ್ಕೆ(Pakistan team) ಕೊನೆಗೂ ವೀಸಾ ದೊರೆತಿದೆ. ವೀಸಾ ಸಮಸ್ಯೆಯಿಂದ ಭಾರತಕ್ಕೆ ಪ್ರಯಾಣಿಸಲು ಮತ್ತು ವಿಶ್ವಕಪ್ಗೆ ಪೂರ್ವ ತಯಾರಿ ನಡೆಸಲು ಸರಿಯಾದ ವ್ಯವಸ್ಥೆ ಇಲ್ಲವೆಂದು ಹೇಳಿ ಪಿಸಿಬಿ ಜಾಗತಿಕ ಸಂಸ್ಥೆಯೊಂದಿಗೆ ಕಳವಳ ವ್ಯಕ್ತಪಡಿಸಿತ್ತು. ಕೊನೆಗೆ ಐಸಿಸಿ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಿದ್ದು ಪಾಕಿಸ್ತಾನ ಕ್ರಿಕೆಟ್ ತಂಡದ ಸದಸ್ಯರಿಗೆ ಭಾರತೀಯ ವೀಸಾಗಳನ್ನು ನೀಡಲಾಗಿದೆ ಎಂದು ಖಚಿತಪಡಿಸಿದೆ.
ರಾಜತಾಂತ್ರಿಕವಾಗಿ ಭಾರತ ಮತ್ತು ಪಾಕ್ ಸಂಬಂಧ ಮೊದಲಿನಿಂದಲೇ ಸರಿಯಿಲ್ಲ. ಹೀಗಾಗಿ ಉಭಯ ದೇಶಗಳ ಪ್ರಯಾಣಕ್ಕೆ ವೀಸಾ ಪಡೆಯಲು ಕೂಡ ಹಲವು ನಿರ್ಬಂಧ ಮತ್ತು ಅನೇಕ ಪ್ರಕ್ರಿಯೆಗಳು ಕೂಡ ಇವೆ. ಹೀಗಾಗಿ ಪಾಕ್ಗೆ ಹಿನ್ನಡೆಯಾಗಿತ್ತು. ವಿಶ್ವಕಪ್ ಆಡಲಿರುವ 10 ತಂಡಗಳ ಪೈಕಿ 9 ದೇಶಗಳಿಗೆ ಈ ಮೊದಲೇ ವೀಸಾ ಲಭಿಸಿತ್ತು. ಆದರೆ ಪಾಕ್ ತಂಡಕ್ಕೆ ಮಾತ್ರ ವೀಸಾ ಸಿಕ್ಕಿರಲಿಲ್ಲ. ಇದೀಗ ಪಾಕ್ಗೂ ವೀಸಾ ಲಭಿಸಿದ್ದು ಬುಧವಾರ ಭಾರತಕ್ಕೆ ಆಗಮಿಸಲಿದೆ.
ಪ್ರೇಕ್ಷಕರಿಗಿಲ್ಲ ಅವಕಾಶ
ಪಾಕಿಸ್ತಾನ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಹೈದರಾಬಾದ್ನಲ್ಲಿ ಸೆಪ್ಟೆಂಬರ್ 29 ರಂದು ಕಿವೀಸ್ ವಿರುದ್ಧ ಆಡಲಿದೆ. ಆದರೆ ಈ ಪಂದ್ಯವನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ಧಾರ್ಮಿಕ ಹಬ್ಬಗಳ ಹಿನ್ನೆಲೆಯಲ್ಲಿ ಪ್ರವಾಸಿ ತಂಡಗಳಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲು ಹೈದರಾಬಾದ್ ಪೊಲೀಸರು ಹಿಂದೇಟು ಹಾಕಿದ್ದರು .ಈ ವಿಚಾರವನ್ನು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ಗೆ ಇಲ್ಲಿನ ಪೊಲೀಸರು ಮಾಹಿತಿಯನ್ನು ನೀಡಿದ್ದರು. ಹೀಗಾಗಿ ಈ ಪಂದ್ಯ ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಟಿಕೆಟ್ ಹಣ ಮರುಪಾವತಿ
“ಪಾಕಿಸ್ತಾನ ಮತ್ತು ಕಿವೀಸ್ ನಡುವಣ ಅಭ್ಯಾಸ ಪಂದ್ಯವು ಭದ್ರತಾ ಏಜೆನ್ಸಿಗಳ ಸಲಹೆಯಂತೆ ಪ್ರೇಕ್ಷಕರಿಲ್ಲದೆ ಆಡಿಸಲಾಗುವುದು. ಈ ಪಂದ್ಯಕ್ಕಾಗಿ ಟಿಕೆಟ್ ಖರೀದಿಸಿದ ಪ್ರೇಕ್ಷಕರಿಗೆ ಹಣವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು” ಎಂದು ಬಿಸಿಸಿಐ ಪ್ರಕಟಿಸಿದೆ.
ಇದನ್ನೂ ಓದಿ ICC World Cup: ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್ಗಳು
ICC CWC 2023 warm-up match update.
— BCCI (@BCCI) September 25, 2023
The warm-up match between New Zealand and Pakistan scheduled to take place in Hyderabad on 29th September will now take place behind closed doors as per the advice of the local security agencies.
More details here – https://t.co/eKoFEZ4u94… pic.twitter.com/24PwvIkg7m
ಪಾಕಿಸ್ತಾನ ತಂಡ ಅಕ್ಟೋಬರ್ 6ರಂದು ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈಗಾಗಲೇ ಪಾಕ್ ಈ ಮಹತ್ವದ ಟೂರ್ನಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಬಾಬರ್ ಅಜಂ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್ ಯುವ ವೇಗಿ ನಸೀಮ್ ಶಾ ಅವರು ಏಷ್ಯಾಕಪ್ನಲ್ಲಿ ಗಾಯಗೊಂಡ ಕಾರಣ ಈ ಟೂರ್ನಿಯಿಂದ ಹೊರಬಿದ್ದಾರೆ.
ಪಾಕಿಸ್ತಾನ ತಂಡ
ಬಾಬರ್ ಅಜಂ (ನಾಯಕ), ಶದಾಬ್ ಖಾನ್ (ಉಪ ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹ್ಮದ್, ಅಘಾ ಸಲ್ಮಾನ್, ಸೌದ್ ಶಕೀಲ್, ಮೊಹಮ್ಮದ್ ನವಾಜ್, ಶಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಹಸನ್ ಅಲಿ, ಉಸಾಮ ಮಿರ್, ಮೊಹಮ್ಮದ್ ವಸೀಂ. ಮೀಸಲು ಆಟಗಾರು: ಅಬ್ರಾರ್ ಅಹ್ಮದ್, ಜಮಾನ್ ಖಾನ್ ಹಾಗೂ ಮೊಹಮ್ಮದ್ ಹ್ಯಾರಿಸ್.