ಮುಂಬಯಿ: ಬಹುನಿರೀಕ್ಷಿತ ಏಷ್ಯಾ ಕಪ್ ಟೂರ್ನಿಯ(Asia Cup 2023) ದಿನಾಂಕವನ್ನು ಈಗಾಗಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪ್ರಕಟಿಸಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಪಂದ್ಯಾವಳಿ ನಡೆಯಲಿದೆ ಎಂದು ಹೇಳಿತ್ತು. ಆದರೆ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಿರಲಿಲ್ಲ. ಇದೀಗ ವರದಿಯಾಗಿರುವ ಪ್ರಕಾರ ಈ ವೇಳಾಪಟ್ಟಿ(Asia Cup Schedule) ಇಂದು ಸಂಜೆ (ಬುಧವಾರ ಜುಲೈ 19) ಪ್ರಕಟಗೊಳ್ಳಲಿದೆ ಎಂದು ವರದಿಯಾಗಿದೆ. ಇಡೀ ಕ್ರಿಕೆಟ್ ಜಗತ್ತು ಬಹಳಾ ಕಾತರದಿಂದ ಎದುರು ನೋಡುತ್ತಿರುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಹೈ-ವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 2ರಂದು ಕ್ಯಾಂಡಿಯಲ್ಲಿ(Kandy) ನಡೆಯಲಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಭಾರತ ಮತ್ತು ಪಾಕ್ ನಡುವಣ ಪಂದ್ಯ ಲಂಕಾದ ಡಂಬೂಲದಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ವೇಳಾಪಟ್ಟಿಯಲ್ಲಿ ಕೆಲ ಪರಿಷ್ಕರಣೆ ನಡೆಸಿದ ಕಾರಣ ಉಭಯ ತಂಡಗಳ ಈ ಮುಖಾಮುಖಿಗೆ ಕ್ಯಾಂಡಿ ಆತಿಥ್ಯ ವಹಿಸಿಕೊಂಡಿದೆ ಎಂದು ವರದಿಯಾಗಿದೆ.
50 ಓವರ್ಗಳ ಮಾದರಿಯಲ್ಲಿ ನಡೆಯುವ ಈ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ. ಡೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಗೊಂಡಿದೆ. ಆರಂಭದಲ್ಲಿ ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳು ನಡೆಯಲಿದ್ದು, ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಪಾಕ್ನಲ್ಲಿ ನಡೆಯುವ ಪಂದ್ಯಗಳು ಲಹೋರ್ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ Jasprit Bumrah Fitness: ಏಷ್ಯಾಕಪ್ಗೂ ಮುನ್ನವೇ ಭಾರತ ತಂಡ ಸೇರಲಿದ್ದಾರೆ ಜಸ್ಪ್ರೀತ್ ಬುಮ್ರಾ
ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನು ರಚಿಸಿ ಎಲ್ಲ ಕ್ರಿಕೆಟ್ ಬೋರ್ಡ್ಗಳಿಗೂ ಕಳುಹಿಸಲಾಗಿದೆ. ಸಣ್ಣ ಪುಟ್ಟ ಬದಲಾವಣೆಯನ್ನು ಸರಿಪಡಿಸಿ ಇಂದು ಸಂಜೆ ಅಧಿಕೃತವಾಗಿ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎಂದು ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ. ಲೀಗ್ ಹಂತದಲ್ಲಿ ಭಾರತ ಪಾಕಿಸ್ತಾನ ಮತ್ತು ನೇಪಾಳ ಒಂದೇ ಗುಂಪಿನಲ್ಲಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಎರಡನೇ ಗುಂಪಿನಲ್ಲಿವೆ.
ಗೊಂದಲದಲ್ಲಿದೆ ಪಾಕ್
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಝಾಕಾ ಅಶ್ರಫ್ (Zaka Ashraf) ಅವರು ಏಷ್ಯಾ ಕಪ್ ವಿಚಾರದಲ್ಲಿ ಪದೇಪದೆ ಕ್ಯಾತೆ ತೆಗೆಯುತ್ತಲೇ ಇದ್ದಾರೆ. ಹೈಬ್ರಿಡ್ ಮಾದರಿಯನ್ನು ಮತ್ತೊಮ್ಮೆ ಪರಿಶೀಲಿಸುವುದಾಗಿ ಹೇಳಿದ್ದ ಅವರು. ಕೆಲ ದಿನಗಳ ಹಿಂದೆ ನಮಗೆ ನಾಲ್ಕು ಪಂದ್ಯಗಳ ಆತಿಥ್ಯ ಸಾಲದು ಎಂದು ಹೇಳಿದ್ದರು. ಈ ಹಿಂದೆ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದ ನಜಮ್ ಸೇಥಿ ಅವರ ಅಧಿಕಾರವಧಿಯಲ್ಲಿ ಹೈಬ್ರಿಡ್ ಮಾದರಿಗೆ ಒಪ್ಪಿದ್ದರು. ಆದರೆ ಅವರ ಸ್ಥಾನಕ್ಕೆ ಬಂದ ಅಶ್ರಫ್ ಉಲ್ಟಾ ಹೊಡೆಯುತ್ತಿದ್ದಾರೆ. ಒಟ್ಟಾರೆ ಪಾಕ್ ತನ್ನ ಕುತಂತ್ರವನ್ನು ನಡೆಸುತ್ತಲೇ ಬರುತ್ತಿದೆ.