ಮುಲ್ತಾನ್: ಸಂಘಟಿತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರಿದ ಪಾಕಿಸ್ತಾನ(Pakistan vs Nepal) ತಂಡ ಏಷ್ಯಾಕಪ್(Asia Cup 2023)ನ ಉದ್ಘಾಟನ ಪಂದ್ಯದಲ್ಲೇ ಭರ್ಜರಿ ಗೆಲುವು ಸಾಧಿಸಿದೆ. ಕ್ರಿಕೆಟ್ ಶಿಶು ನೇಪಾಳ ವಿರುದ್ಧದ ಪಂದ್ಯದಲ್ಲಿ 238 ರನ್ಗಳ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.
ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. 25 ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ನಾಯಕ ನಾಯಕ ಬಾಬರ್ ಅಜಂ(151) ಮತ್ತು ಇಫ್ತಿಕರ್ ಅಹ್ಮದ್(109*) ಸೇರಿಕೊಂಡು ಶತಕ ಬಾರಿಸಿ ತಂಡಕ್ಕೆ ಆಸರೆಯಾದರು ಉಭಯ ಆಟಗಾರರ ಈ ಆಟದ ನೆರವಿನಿಂದ ಪಾಕ್ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 342 ರನ್ ಗಳಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ನೇಪಾಳ 23.4 ಓವರ್ಗಳಲ್ಲಿ 204 ರನ್ ಗಳಿಸಿ ಸೋಲು ಕಂಡಿತು.
ಸೋತರೂ ನೇಪಾಳ ಪ್ರದರ್ಶನ ಮೆಚ್ಚಲೇ ಬೇಕು. ಏಕೆಂದರೆ ಈಗ ತಾನೆ ಕ್ರಿಕೆಟ್ಗೆ ಅಂಬೆಗಾಲಿಟ್ಟ ಈ ತಂಡ ಏಕದಿನ ಕ್ರಿಕೆಟ್ನ ನಂ.1 ತಂಡದ ವಿರುದ್ಧ ಈ ಪ್ರದರ್ಶನ ತೋರಿದ್ದು ಸಾಹಸವೇ ಸರಿ. 14 ರನ್ಗೆ ಮೂರು ವಿಕೆಟ್ ಬಿದ್ದರೂ ಆ ಬಳಿಕ ಆರಿಫ್ ಶೇಖ್ ಮತ್ತು ಸೋಂಪಾಲ್ ಕಾಮಿ ತಂಡಕ್ಕೆ ಆಸರೆಯಾಗಿ ಪಾಕ್ ಬೌಲರ್ಗಳ ನಿದ್ದೆಗೆಡಿಸುವ ಪ್ರಯತ್ನ ಮಾಡಿದರು. ಆದರೆ ಈ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡು ತಂಡ ಸೋಲು ಕಂಡಿತು. ಆರಿಫ್ ಶೇಖ್ 26 ರನ್ ಬಾರಿಸಿದರೆ, ಸೋಂಪಾಲ್ 28 ರನ್ ಗಳಿಸಿದರು. ಪಾಕ್ ಪರ ಶದಾಬ್ ಖಾನ್ 27 ರನ್ ನೀಡಿ ಪ್ರಮುಖ 4 ವಿಕೆಟ್ ಕಿತ್ತರು. ಉಳಿದಂತೆ ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ತಲಾ 2 ವಿಕೆಟ್ ಪಡೆದರು.
ಗಾಯದ ಮಧ್ಯೆಯೂ ಶತಕ ಬಾರಿಸಿದ ಬಾಬರ್
ದ್ವಿತೀಯ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ಬಾಬರ್ ಅಜಂ(Babar Azam) ಆರಂಭದಲ್ಲಿ ನಿಧಾನ ಗತಿಯ ಆಟಕ್ಕೆ ಒತ್ತು ನೀಡಿದರು. ಮತ್ತೊಂದು ಬದಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಕೂಡ ಇವರಿಗೆ ಉತ್ತಮ ಸಾಥ್ ನೀಡಿದರು. ಉಭಯ ಆಟಗಾರರ ತಾಳ್ಮೆಯ ಆಟದ ನೆರವಿನಿಂದ ತಂಡ ಮೂರನೇ ವಿಕೆಟ್ಗೆ 86 ರನ್ ಒಟ್ಟುಗೂಡಿಸಿದರು. ಉತ್ತಮವಾಗಿ ಆಡುತ್ತಿದ್ದ ರಿಜ್ವಾನ್ ಸರಿಯಾದ ಸಂವಹನ ಕೊರತೆಯಿಂದಾಗಿ ರನೌಟ್ ಆದರು. ಅವರ ಗಳಿಕೆ 44. ಈ ಇನಿಂಗ್ಸ್ನಲ್ಲಿ 6 ಬೌಂಡರಿ ದಾಖಲಾಯಿತು. ಆದರೆ ಮತ್ತೊಂದು ತುದಿಯಲ್ಲಿ ಬೇರೂರಿ ನಿಂತ ಬಾಬರ್ ಗಾಯದ ಮಧ್ಯೆಯೂ ಶತಕ ಬಾರಿಸಿ ಮಿಂಚಿದರು.
ಇದನ್ನೂ ಓದಿ Asia Cup 2023: ಲಂಕಾ-ಬಾಂಗ್ಲಾ ಮುಖಾಮುಖಿ; ಉಭಯ ತಂಡಗಳಿಗೂ ಗಾಯದ್ದೇ ಚಿಂತೆ
ಆರಂಭಿಕ ಹಂತದಲ್ಲಿ ಉತ್ತಮ ಬೌಲಿಂಗ್ ಹಿಡಿತ ಸಾಧಿಸಿದ ನೇಪಾಳ ಬೌಲರ್ಗಳು ಬಳಿಕ ನಿಧಾನವಾಗಿ ಲಯ ಕಳೆದುಕೊಂಡರು. ಬಾಬರ್ ಮತ್ತು ಇಫ್ತಿಕರ್(Iftikhar Ahmed) ಸೇರಿಕೊಂಡು ಉತ್ತಮ ಇನಿಂಗ್ಸ್ ಕಟ್ಟಿದರು. ಬಾಬರ್ ಅವರ ಕವರ್ ಡ್ರೈ ಮತ್ತು ಸಿಕ್ಸರ್ ಕಂಡು ನೇಪಾಳ ಬೌಲರ್ಗಳು ಮಂಕಾದರು. ಶತಕ ಬಾರಿಸಿದ ಬಳಿಕ ಬಾಬರ್ ತಮ್ಮ ಸೊಂಡದ ನೋವಿನ ಮಧ್ಯೆಯೂ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇದು ಬಾಬರ್ ಅವರ 19ನೇ ಏಕದಿನ ಶತಕವಾಗಿದೆ. ಒಂದೇ ಕೈಯಲ್ಲಿ ಬಾಬರ್ ಬಾರಿಸಿದ ಸಿಕ್ಸರ್ ಇದೀಗ ಎಲ್ಲಡೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಲಾರಂಭಿಸಿದೆ.
ಚೊಚ್ಚಲ ಶತಕ ಬಾರಿಸಿದ ಇಫ್ತಿಕರ್
ಅಘಾ ಸಲ್ಮಾನ್ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಬಂದ ಹಿರಿಯ ಆಟಗಾರ ಇಫ್ತಿಕರ್ ಅಹ್ಮದ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ನೇಪಾಳ ಬೌಲರ್ಗಳ ಮೇಲೆ ಒತ್ತಡ ಹೇರಿದರು. ಪತ್ರಿ ಓವರ್ಗೂ ಸಿಕ್ಸರ್, ಬೌಂಡರಿ ಬಾರಿಸಿ ತಂಡದ ರನ್ ಗಳಿಕೆಯನ್ನು ವೇಗವಾಗಿ ಏರಿಸಿದರು. ಕೇವಲ 67 ಎಸೆತದಲ್ಲಿ ಶತಕ ಬಾರಿಸಿ ಸಂಭ್ರಮಿಸಿದರು. ಇದು ಅವರ ಚೊಚ್ಚಲ ಏಕದಿನ ಶತಕವಾಗಿದೆ. ಅವರ ಈ ಶತಕ ಇನಿಂಗ್ಸ್ನಲ್ಲಿ ಬರೋಬ್ಬರಿ 11 ಬೌಂಡರಿ ಮತ್ತು 4 ಸಿಕ್ಸರ್ ದಾಖಲಾಯಿತು. ಒಟ್ಟು 71 ಎಸೆತಗಳಿಂದ ಅಜೇಯ 109 ರನ್ ಬಾರಿಸಿದರು.