ಲಾಹೋರ್: 2023ರ ಏಷ್ಯಾ ಕಪ್ (Asia Cup)ಗೆ ಪಾಕಿಸ್ತಾನಕ್ಕೆ ಪ್ರವಾಸ ಮಾಡದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಪಾಕ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಹೇಳಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಹಾಗೂ ಬಿಸಿಸಿಐ ಕಾರ್ಯದರ್ಶಿ ಆಗಿರುವ ಜಯ್ ಶಾ ಅಕ್ಟೋಬರ್ 18 ರಂದು ಭಾರತ ತಂಡವು 2023ರ ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಪಾಕ್ ಕ್ರಿಕೆಟ್ ಮಂಡಳಿ ಆಕ್ರೋಶ ವ್ಯಕ್ತಪಡಿಸಿ, ಮುಂದಿನ ವರ್ಷ ಭಾರತದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್ ಕೂಟದಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ತಿರುಗೇಟು ನೀಡಿತ್ತು.
ಇದೀಗ ಈ ವಿಚಾರವಾಗಿ ಮಾತನಾಡಿದ ಪಾಕ್ ಮಾಜಿ ಕ್ರಿಕೆಟಿಗ ಕನೇರಿಯಾ “ಬಿಸಿಸಿಐ ವಿಶ್ವದ ಅತ್ಯಂತ ಶಕ್ತಿಶಾಲಿ ಮಂಡಳಿಯಾಗಿದ್ದು, ಐಸಿಸಿಯೂ ಕೂಡ ಅವರ ಷರತ್ತುಗಳನ್ನು ಒಪ್ಪಿಕೊಳ್ಳಬೇಕಾದ ಸ್ಥಿತಿಯಲ್ಲಿದೆ. ಹೀಗಿರುವಾಗ ಬಿಸಿಸಿಐ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪಾಕ್ ಕ್ರಿಕೆಟ್ ಮಂಡಳಿಗೆ ಸಾಧ್ಯವಿಲ್ಲ” ಎಂದು ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.
“ಬಿಸಿಸಿಐಗಿಂತ ದುರ್ಬಲವಾಗಿರುವ ಪಿಸಿಬಿ, ಯಾವುದೇ ಆಕ್ಷೇಪಣೆ ಮಾಡಿದರೂ ಅದು ಲೆಕ್ಕಕ್ಕಿಲ್ಲ. ಎಲ್ಲ ಇತರ ಮಂಡಳಿಗಳು ಬಿಸಿಸಿಐ ಪರವಾಗಿದೆ. ಆದ್ದರಿಂದ ಪಿಸಿಬಿ ಆಕ್ಷೇಪಣೆ ಮಾಡಿದರೂ ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಯಾಕೆಂದರೆ ಬಿಸಿಸಿಐ ತನ್ನ ನಿರ್ಧಾರವನ್ನು ಬದಲಿಸುವುದಿಲ್ಲ” ಎಂದು ಕನೇರಿಯಾ ಹೇಳಿದ್ದಾರೆ.
ಇದನ್ನೂ ಓದಿ | T20 World Cup | ಸ್ಕಾಟ್ಲೆಂಡ್ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿದ ಐರ್ಲೆಂಡ್