ಬುಡಾಪೆಸ್ಟ್ (ಹಂಗೇರಿ): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನೀರಜ್ ಚೋಪ್ರಾ (Neeraj Chopra) ಅವರು ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನದ ಅರ್ಷದ್ ನದೀಮ್ ಅವರು ತೀವ್ರ ಸ್ಪರ್ಧೆಯ ಮಧ್ಯೆಯೂ ಎರಡನೇ ಸ್ಥಾನ ಪಡೆದು ಬೆಳ್ಳಿಯ ಪದಕಕ್ಕೆ ಕೊರಳೊಡಿದ್ದಾರೆ. ಇದರ ಬೆನ್ನಲ್ಲೇ, ಅರ್ಷದ್ ನದೀಮ್ ಅವರು ನೀರಜ್ ಚೋಪ್ರಾ ಬಗ್ಗೆ, ನೀರಜ್ ಚೋಪ್ರಾ ಅವರು ಅರ್ಷದ್ ನದೀಮ್ (Arshad Nadeem) ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸಹೋದರ ಎಂದ ಅರ್ಷದ್ ನದೀಮ್
ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ 88.17 ಮೀಟರ್ ದೂರ ಭರ್ಜಿ ಎಸೆದು ಚಿನ್ನ ಗೆದ್ದ ನೀರಜ್ ಚೋಪ್ರಾ ಅವರಿಗೆ ಅರ್ಷದ್ ನದೀಮ್ ಅಭಿನಂದನೆ ಸಲ್ಲಿಸಿದ್ದಾರೆ. “ನೀರಜ್ ಭಾಯ್ (ಸಹೋದರ) ನಿಮ್ಮ ಬಗ್ಗೆ ಖುಷಿ ಇದೆ. ಜಗತ್ತಿನಲ್ಲಿ ಮೊದಲ ಹಾಗೂ ದ್ವಿತೀಯ ಸ್ಥಾನವನ್ನು ಭಾರತ ಮತ್ತು ಪಾಕಿಸ್ತಾನ ಹೊಂದಿವೆ. ಒಲಿಂಪಿಕ್ಸ್‌ನಲ್ಲೂ ಇದೇ ಫಲಿತಾಂಶ ಬರುವ ನಿರೀಕ್ಷೆ ಇದೆ” ಎಂದು ಹೇಳುವ ಮೂಲಕ ಜಾವೆಲಿನ್ ಥ್ರೋನಲ್ಲಿ ಭಾರತ ಹಾಗೂ ಪಾಕಿಸ್ತಾನದ ಪ್ರಾಬಲ್ಯವನ್ನು ವಿವರಿಸಿದ್ದಾರೆ.
ಚೋಪ್ರಾ-ಅರ್ಷದ್ ಬಾಂಧವ್ಯ
ಅರ್ಷದ್ ಬಗ್ಗೆ ಚೋಪ್ರಾ ಮೆಚ್ಚುಗೆ
ಅರ್ಷದ್ ನದೀಮ್ ಬಗ್ಗೆ ನೀರಜ್ ಚೋಪ್ರಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಜಾವೆಲಿನ್ ಥ್ರೋನಲ್ಲಿ ಇದುವರೆಗೆ ಐರೋಪ್ಯ ದೇಶಗಳ ಪ್ರಾಬಲ್ಯ ಇತ್ತು. ಆದರೀಗ ಭರ್ಜಿ ಎಸೆತದಲ್ಲಿ ಏಷ್ಯಾದ ರಾಷ್ಟ್ರಗಳು ಪ್ರಬಲವಾಗಿವೆ. ಅರ್ಷದ್ ನದೀಮ್ ಅವರು ಅದ್ಭುತವಾಗಿ ಭರ್ಜಿ ಎಸೆದರು. ಯಾವುದೇ ಸ್ಪರ್ಧೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಪೈಪೋಟಿ ಎಂದಾಗ ನನಗೆ ಖುಷಿಯಾಗುತ್ತದೆ. ಈಗ ಜಾವೆಲಿನ್ ಥ್ರೋನಲ್ಲಿ ಏಷ್ಯಾ ಪ್ರಬಲವಾಗಿದೆ” ಎಂದು ಹೇಳಿದ್ದಾರೆ.
ನೀರಜ್ ಚೋಪ್ರಾ ಗೆಲುವಿನ ಥ್ರೋ
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೂ ಮೊದಲೇ ನೀರಜ್ ಚೋಪ್ರಾ ಹಾಗೂ ಅರ್ಷದ್ ನದೀಮ್ ಉತ್ತಮ ಸ್ನೇಹಿತರಾಗಿದ್ದಾರೆ. ಚಾಂಪಿಯನ್‌ಶಿಪ್‌ಗೂ ಮೊದಲು ಚೋಪ್ರಾಗೆ ನದೀಮ್ ಶುಭ ಕೋರಿದ್ದರು. ಅಷ್ಟೇ ಅಲ್ಲ, ಪಾಕಿಸ್ತಾನದ ಹಲವು ಅಥ್ಲೀಟ್‌ಗಳಿಗೆ ನೀರಜ್ ಚೋಪ್ರಾ ಸ್ಫೂರ್ತಿಯಾಗಿದ್ದಾರೆ. ಈ ಕುರಿತು ಬಹಿರಂಗವಾಗಿಯೇ ಪಾಕ್ ಅಥ್ಲೀಟ್‌ಗಳು ಒಪ್ಪಿಕೊಂಡಿದ್ದಾರೆ.
ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾ ಕ್ಯಾಮೆರಾ ಎದುರು ಮಿಂಚುತ್ತಿದ್ದರು. ಇದೇ ವೇಳೆ ಅವರು ಪಾಕಿಸ್ತಾನದ ಅರ್ಷದ್ ನದೀಮ್ ಅವರನ್ನು ಪಕ್ಕಕ್ಕೆ ಕರೆದು, ಅವರ ಜತೆ ಕ್ಯಾಮೆರಾಗೆ ಪೋಸ್ ನೀಡಿದರು. ನೀರಜ್ ಚೋಪ್ರಾ ಕರೆಯುತ್ತಲೇ ಆಗಮಿಸಿದ ಅರ್ಷದ್ ನದೀಮ್, ತಿರಂಗಾ ಬಳಿ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟರು. ಇದು ಇಬ್ಬರ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.