ದುಬೈ : ಸೆಪ್ಟೆಂಬರ್ ೪ರಂದು ನಡೆದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್ ಸೂಪರ್-೪ ಪಂದ್ಯದಲ್ಲಿ ಭಾರತ ತಂಡದ ಸೋಲುವುದಕ್ಕೆ ನಾನಾ ಕಾರಣಗಳಿವೆ. ಆದರೆ, ಗೆಲುವನ್ನು ಪಾಕಿಸ್ತಾನ ಪರ ವಾಲಿಸಿದ್ದು, ಸ್ಪಿನ್ನರ್ ಮೊಹಮ್ಮದ್ ನವಾಜ್. ತಮ್ಮ ೮ನೇ ಕ್ರಮಾಂಕದಿಂದ ಏಕಾಏಕಿ ಐದನೇ ಕ್ರಮಾಂಕಕ್ಕೆ ಬಡ್ತಿ ಪಡೆದುಕೊಂಡ ಅವರು ೨೦ ಎಸೆತಗಳಲ್ಲಿ ೪೨ ರನ್‌ಗಳನ್ನು ಬಾರಿಸಿದ್ದರು. ಈ ಸ್ಕೋರ್ ಭಾರತದ ಪಾಲಿಗೆ ಸೋಲಿನ ಮುನ್ನುಡಿಯನ್ನು ಬರೆಯಿತು. ಅಚ್ಚರಿಯೆಂದರೆ ಇದೇ ರೀತಿ ರವೀಂದ್ರ ಜಡೇಜಾ ಅವರಿಗೆ ಬಡ್ತಿ ನೀಡಿ, ಏಷ್ಯಾ ಕಪ್‌ನ ಗುಂಪು ಹಂತದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಜಯ ಸಾಧಿಸಿತ್ತು.
ಮೊಹಮ್ಮದ್ ನವಾಜ್ ಭಾರತ ಏಳು ವಿಕೆಟ್‌ಗೆ ೧೮೧ ರನ್ ಬಾರಿಸಿದ ಹೊರತಾಗಿಯೂ ೪ ಓವರ್‌ಗಳ ಸ್ಪೆಲ್‌ನಲ್ಲಿ ೨೫ ರನ್ ನೀಡಿ ೧ ವಿಕೆಟ್ ಪಡೆದು ಮಿಂಚಿದ್ದರು. ಅಂತೆಯೇ ಅವರು ಬ್ಯಾಟಿಂಗ್‌ನಲ್ಲಿಯೂ ಭರ್ಜರಿ ಪ್ರದರ್ಶನ ನೀಡಿದ್ದರು. ಮೊಹಮ್ಮದ್ ನವಾಜ್ ಪಾಕಿಸ್ತಾನ ತಂಡದ ಎಂಟನೇ ಕ್ರಮಾಂಕದ ಬ್ಯಾಟರ್. ಗುಂಪು ಹಂತದಲ್ಲಿ ಭಾರತ ವಿರುದ್ಧ ಅವರು ೩ ಎಸೆತಗಳಲ್ಲಿ ಕೇವಲ ಒಂದು ರನ್ ಮಾತ್ರ ಮಾಡಿದ್ದರು.
ಭಾನುವಾರ ಪಂದ್ಯದಲ್ಲಿ ನಾಯಕ ಬಾಬರ್ ಅಜಮ್ (೧೪) ಮತ್ತು ಫಖರ್ ಜಮಾನ್ (೧೫) ವಿಕೆಟ್ ಉರುಳಿದಾಗ ಪಾಕಿಸ್ತಾನ ತಂಡದ ರನ್ ೮.೪ ಓವರ್‌ಗಳಲ್ಲಿ ೬೩ ಆಗಿತ್ತು. ಭಾರತ ತಂಡದ ನಾಯಕ ರೋಹಿತ್ ಶರ್ಮ ಈ ವೇಳೆ ಲೆಗ್ ಸ್ಪಿನ್ನರ್‌ಗಳಾದ ಯಜ್ವೇಂದ್ರ ಚಹಲ್ ಹಾಗೂ ರವಿ ಬಿಷ್ಣೋಯಿ ಅವರಿಂದ ದಾಳಿ ಆರಂಭಿಸಿದ್ದರು. ಈ ಲೆಗ್ ಸ್ಪಿನ್ನರ್‌ಗಳಿಗೆ ಉತ್ತರ ಕೊಡುವ ಉದ್ದೇಶದಿಂದ ಪಾಕಿಸ್ತಾನ ತಂಡದ ಹೆಡ್ ಕೊಚ್ ಸಕ್ಲೈನ್ ಮುಷ್ತಾಕ್ ಮತ್ತು ನಾಯಕ ಬಾಬರ್ ಅಜಮ್ ಅವರು ನವಾಜ್ ಅವರಿಗೆ ಬಡ್ತಿ ನೀಡಿದ್ದಾರೆ. ಈ ವೇಳೆ ಪಾಕ್ ತಂಡಕ್ಕೆ ೬೮ ಎಸೆತಗಳಿಗೆ ೧೧೯ ರನ್ ಬೇಕಾಗಿತ್ತು.
ನಾಯಕ ಹಾಗೂ ಕೋಚ್ ವಿಶ್ವಾಸಕ್ಕೆ ತಕ್ಕುದಾಗಿ ಆಡಿದ ನವಾಜ್, ೬ ಫೋರ್ ಹಾಗೂ ೨ ಸಿಕ್ಸರ್‌ಗಳ ಸಮೇತ ೪೨ ರನ್ ಬಾರಿಸಿ ಪಂದ್ಯದ ಗತಿ ಬದಲಿಸಿದರು. ಅಲ್ಲದೆ, ಮೊಹಮ್ಮದ್ ರಿಜ್ವಾನ್ ಅವರೊಂದಿಗೆ ೭೩ ರನ್ ಜತೆಯಾಟ ನೀಡಿದರು. ಅಂತಿಮವಾಗಿ ಅವರು ಇನಿಂಗ್ಸ್‌ನ ೧೬ನೇ ಓವರ್ ಎಸೆದ ಭುವನೇಶ್ವರ್ ಕುಮಾರ್ ಅವರಿಗೆ ವಿಕೆಟ್ ಒಪ್ಪಿಸಿದಾಗ ಪಾಕ್ ತಂಡಕ್ಕೆ ೨೭ ಎಸೆತಗಳಲ್ಲಿ ೪೬ ರನ್ ಬೇಕಾಗಿತ್ತು. ಹೀಗಾಗಿ ನವಾಜ್ ಅವರ ಇನಿಂಗ್ಸ್ ಪಂದ್ಯದ ತಿರುವು ಎನಿಸಿಕೊಂಡಿತು.
ಜಡೇಜಾ ತಂತ್ರ
ಗುಂಪು ಹಂತದ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರನ್ನೂ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮ ಇದೇ ರೀತಿ ಬಡ್ತಿ ಕೊಟ್ಟು ಬ್ಯಾಟಿಂಗ್‌ಗೆ ಕಳುಹಿಸಿದ್ದರು. ಅವರೂ ೨೭ ಎಸೆತಗಳಲ್ಲಿ ೩೫ ರನ್ ಬಾರಿಸಿ ಭಾರತ ಗೆಲುವಿಗೆ ನೆರವು ಕೊಟ್ಟಿದ್ದರು.
ಇದನ್ನೂ ಓದಿ | Team India | ಸೋಲಿನ ನಡುವೆಯೂ ರೋಹಿತ್- ರಾಹುಲ್‌ಗೆ ಖುಷಿ ತರುವ ವಿಷಯ ಇಲ್ಲಿದೆ ನೋಡಿ