ನವದೆಹಲಿ: ಟೀಮ್ ಇಂಡಿಯಾದ ಕ್ರಿಕೆಟ್ ಸಹೋದರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃಣಾಲ್ ಪಾಂಡ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಈ ವಿಚಾರವನ್ನು ಹಾರ್ದಿಕ್ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಹಿರಂಗ ಪಡಿಸಿದ್ದಾರೆ.
ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸುತ್ತಿರುವ ಫೋಟೊವನ್ನು ಶನಿವಾರ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಕೇಂದ್ರ ಗೃಹ ಸಚಿವರೊಂದಿಗೆ ಅಮೂಲ್ಯ ಸಮಯವನ್ನು ಕಳೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. “ಅಮಿತ್ ಶಾ ಅವರನ್ನು ಭೇಟಿಯಾಗಿದ್ದು ನಮ್ಮ ಪಾಲಿನ ಸೌಭಾಗ್ಯ” ಎಂದು ಪಾಂಡ್ಯ ಹೇಳಿದ್ದಾರೆ.
ಅಮಿತ್ ಶಾ ಭೇಟಿಯ ಬಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಹಾರ್ದಿಕ್ ಪಾಂಡ್ಯ, “ನಮ್ಮನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ, ನಮ್ಮೊಂದಿಗೆ ಅಮೂಲ್ಯ ಕ್ಷಣಗಳನ್ನು ಕಳೆದ ಗೃಹಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು. ನಿಮ್ಮನ್ನು ಭೇಟಿಯಾಗಿದ್ದು ನಮ್ಮ ಸೌಭಾಗ್ಯ ಹಾಗೂ ಗೌರವದ ವಿಚಾರ ಎಂದು ಹೇಳಿದ್ದಾರೆ.
ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಪಾಂಡ್ಯ ಬ್ರದರ್ಸ್!
ಅಮಿತ್ ಶಾ ಮತ್ತು ಪಾಂಡ್ಯ ಬ್ರದರ್ಸ್ ಗುಜರಾತ್ ಮೂಲದವರಾಗಿರುವುದರಿಂದ ಈ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಇವರ ಭೇಟಿಯನ್ನು ಕೆಲವರು ರಾಜಕೀಯ ಕ್ಷೇತ್ರಕ್ಕೆ ಹೋಲಿಕೆ ಮಾಡಿದ್ದಾರೆ. ಅದರಂತೆ ಪಾಂಡ್ಯ ಬ್ರದರ್ಸ್ ಶೀಘ್ರವಾಗಿ ರಾಜಕೀಯಕ್ಕೆ ಎಂಟ್ರಿಕೊಡಲಿದ್ದಾರೆ ಎಂದು ಹೇಳಲಾರಂಭಿಸಿದ್ದಾರೆ.
ಹಾರ್ದಿಕ್ ಪಾಂಡ್ಯ, ಶ್ರೀಲಂಕಾ ವಿರುದ್ಧ ಜನವರಿ 3ರಿಂದ ಆರಂಭವಾಗಲಿರುವ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಮುನ್ನಡೆಲಿದ್ದಾರೆ. ಅಲ್ಲದೇ ಸದ್ಯದಲ್ಲೇ ಹಾರ್ದಿಕ್ ಪಾಂಡ್ಯ ಟಿ20 ತಂಡದ ಪೂರ್ಣಪ್ರಮಾಣದ ನಾಯಕನಾಗಿ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ | BCCI Meeting | ಹೊಸ ವರ್ಷಕ್ಕೆ ಸಭೆ ಕರೆದ ಬಿಸಿಸಿಐ; ಕೋಚ್ ದ್ರಾವಿಡ್, ನಾಯಕ ರೋಹಿತ್ಗೆ ನಡುಕ!