ಮುಂಬಯಿ : ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಗುಂಪು ಹಂತದ ಗೆಲುವಿನ ರೂವಾರಿ ಹಾರ್ದಿಕ್ ಪಾಂಡ್ಯ, ಬೌಲಿಂಗ್‌ನಲ್ಲಿ ೨೫ ರನ್ ವೆಚ್ಚದಲ್ಲಿ ೩ ವಿಕೆಟ್ ಕಬಳಿಸಿದ್ದಲ್ಲದೆ, ನಿರ್ಣಾಯಕ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ೧೭ ಎಸೆತಗಳಲ್ಲಿ ೩೩ ರನ್ ಬಾರಿಸಿದ್ದರು. ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ವಿರುದ್ಧ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಮ್‌ನಲ್ಲಿ ಮತ್ತೊಂದು ಸೋಲು ತಪ್ಪಿಸಿದ್ದೇ ಅವರು. ಆದರೆ, ಈ ಸಾಧನೆ ಹಿಂದೆ ಹಾರ್ದಿಕ್ ಪಾಂಡ್ಯ ಅವರ ನೋವಿನ ಕತೆಯೂ ಇದೆ.
೨೦೧೮ರ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಅದೇ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿತ್ತು. ಆ ಹಣಾಹಣಿಯಲ್ಲಿ ಬೌಲಿಂಗ್ ಮಾಡುವಾಗ ಹಾರ್ದಿಕ್ ಪಾಂಡ್ಯ ಅವರು ಕೆಳ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಅದು ತೀವ್ರ ಸ್ವರೂಪದ ಗಾಯ. ಒಂದು ಬಾರಿ ಕುಸಿದು ಬಿದ್ದ ಅವರಿಗೆ ಎದ್ದು ನಿಲ್ಲಲೂ ಆಗಲಿಲ್ಲ. ಸ್ಟ್ರೆಚರ್ ಮೇಲೆ ಮಲಗಿಸಿ ಅವರನ್ನು ಮೈದಾನದಿಂದ ಸೀದಾ ಆಸ್ಪತ್ರೆ ಸೇರಿಸಲಾಗಿತ್ತು. ತಿಂಗಳಾನುಗಟ್ಟಲೆ ಪರೀಕ್ಷೆ, ಔಷಧವೆಂದು ಭಯಂಕರ ನೋವು ತಿಂದಿದ್ದರು. ಅವರು ಗಾಯಗೊಂಡಿದ್ದು ಸೆಪ್ಟೆಂಬರ್‌ನಲ್ಲಿ. ಅಲ್ಲಿಂದ ಒಂದು ವರ್ಷಗಳ ಕಾಲ ನಾನಾ ರೀತಿಯಲ್ಲಿ ಪುನಶ್ಚೇನಕ್ಕೆ ಒಳಗಾದರೂ ನೋವು ಕಡಿಮೆಯಾಗಲಿಲ್ಲ. ಆಡುವುದು ಬಿಡಿ, ನಡೆಯವುದೂ ಕಷ್ಟವಾಗಿತ್ತು. ಕೊನೆಯಲ್ಲಿ ೨೦೧೯ರ ಅಕ್ಟೋಬರ್‌ನಲ್ಲಿ ಲಂಡನ್‌ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಆ ನಂತರವೂ ಸಾಕಷ್ಟು ಕಾಲ ಔಷಧದ ನೆರವಿನಿಂದಲೇ ಜೀವನ ಮಾಡಿದ್ದರು. ಅವರು ಊರುಗೋಲಿನ ನೆರವಿನಿಂದ ನಡೆಯುತ್ತಿರುವ ಚಿತ್ರ ಈಗಲೂ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.
ಸುಧಾರಣೆ ಕಷ್ಟ ಎಂದಿದ್ದರು
ಹಾರ್ದಿಕ್ ಪಾಂಡ್ಯ ಆರೋಗ್ಯ ಪರಿಸ್ಥಿತಿ ನೋಡಿದ ಸಾಕಷ್ಟು ಮಂದಿ ಅವರು ಬೆನ್ನು ನೋವಿನ ಸಮಸ್ಯೆಯಿಂದ ಹೊರಗೆ ಬರುವುದು ಕಷ್ಟ ಎಂದು ಹೇಳಿದ್ದರು. ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ಬದುಕು ಮುಗಿದು ಹೋಯಿತು ಎಂದು ಅಂದುಕೊಂಡವರೇ ಹೆಚ್ಚು. ಗಾಯದ ಸಮಸ್ಯೆಯಿಂದ ಮುಕ್ತಿ ಪಡೆದ ಅವರು ಫಾರ್ಮ್ ಕಂಡುಕೊಳ್ಳುವುದಕ್ಕೂ ಸ್ವಲ್ಪ ತ್ರಾಸ ಪಟ್ಟಿದ್ದರು. ಕೆಲವೊಂದು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಭಾರತ ತಂಡದಲ್ಲಿ ಅವಕಾಶವೇ ಕಳೆದುಕೊಂಡರು. ವೆಂಕಟೇಶ್ ಅಯ್ಯರ್ ಅವರನ್ನು ಹಾರ್ದಿಕ್‌ಗೆ ಪರ್ಯಾಯ ಎಂದು ಬಿಂಬಿಸಲಾಯಿತು. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಆಯ್ಕೆಗಾರರು ಅವರನ್ನು ತಂಡಕ್ಕೆ ಪರಿಗಣಿಸಲಿಲ್ಲ.
ಐಪಿಎಲ್‌ನಲ್ಲಿ ಮಿಂಚು
ಐಪಿಎಲ್ ೧೫ನೇ ಆವೃತ್ತಿಯಲ್ಲಿ ಮುಂಬಯಿ ಇಂಡಿಯನ್ಸ್ ತಂಡದಿಂದ ಬಿಡುಗಡೆಗೊಂಡ ಹಾರ್ದಿಕ್ ಪಾಂಡ್ಯಗೆ ಹೊಸ ತಂಡ ಗುಜರಾತ್ ಟೈಟನ್ಸ್ ಮಣೆ ಹಾಕಿತಲ್ಲದೆ, ನಾಯಕನ ಪಟ್ಟವನ್ನೇ ಕಟ್ಟಿತು. ಅಲ್ಲಿಂದ ಪಾಂಡ್ಯ ಪ್ರಭಾವಳಿ ಹೆಚ್ಚಾಯಿತು. ಚೊಚ್ಚಲ ಆವೃತ್ತಿಯಲ್ಲೇ ಗುಜರಾತ್ ತಂಡಕ್ಕೆ ಟ್ರೋಫಿ ತಂದುಕೊಟ್ಟರು. ನಾಯಕತ್ವದ ಸಾಧನೆ ಮಾತ್ರವಲ್ಲ, ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲೂ ಅವರು ಮಿಂಚಿದರು. ೧೫ ಪಂದ್ಯದಲ್ಲಿ ೪೮೭ ರನ್ ಪೇರಿಸುವ ಜತೆಗೆ ೮ ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡರು. ಅವರ ಪ್ರದರ್ಶನಕ್ಕೆ ಕ್ರಿಕೆಟ್ ಪ್ರೇಮಿಗಳು ಬೆಕ್ಕಸಬೆರಗಾದರು. ಜತೆಗೆ ಅವರ ನಾಯಕತ್ವದ ಗುಣವನ್ನು ಆಯ್ಕೆಗಾರರು ಪರಿಗಣಿಸಿ, ಐರ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ನೇತೃತ್ವ ವಹಿಸಿಕೊಂಡರು. ಆ ಸರಣಿಯನ್ನು ಭಾರತ ೨-೦ ಅಂತರದಿಂದ ಗೆದ್ದಿತು. ಹೀಗಾಗಿ ಪಾಂಡ್ಯ ಅವರನ್ನು ಭವಿಷ್ಯದ ನಾಯಕ ಎಂದೇ ಬಿಂಬಿಸಲಾಗುತ್ತಿದೆ.
ಮ್ಯಾಚ್ ವಿನ್ನರ್
ಕಳೆದ ಟಿ೨೦ ವಿಶ್ವ ಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ೧೦ ವಿಕೆಟ್‌ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಆ ಸೋಲು ದುಬೈ ಕ್ರೀಡಾಂಗಣದಲ್ಲೇ ಎದುರಾಗಿತ್ತು. ಹೀಗಾಗಿ ಮತ್ತೇ ಅಲ್ಲೇ ಏಷ್ಯಾ ಕಪ್ ಪಂದ್ಯ ಆಯೋಜನೆಗೊಂಡಿದ್ದ ಕಾರಣ ಭಾರತ ತಂಡ ಒತ್ತಡಕ್ಕೆ ಸಿಲುಕಿತ್ತು. ಪಂದ್ಯವೂ ಅಂತೆಯೇ ನಡೆಯಿತು. ಪಾಕಿಸ್ತಾನವನ್ನು ೧೪೭ ರನ್‌ಗಳಿಗೆ ಕಟ್ಟಿ ಹಾಕಿದ ಹೊರತಾಗಿಯೂ ಟೀಮ್ ಇಂಡಿಯಾದ ಬ್ಯಾಟಿಂಗ್ ಆರಂಭ ಆಶಾದಾಯಕವಾಗಿರಲಿಲ್ಲ. ಪಾಂಡ್ಯ ಕ್ರೀಸ್‌ಗೆ ಬರುವಾಗ ೧೪.೨ ಓವರ್‌ಗಳಲ್ಲಿ ಭಾರತ ೮೯ ರನ್ ಮಾತ್ರ ಪೇರಿಸಿತ್ತು. ಉಳಿದ ೪೦ ಎಸೆತಗಳಲ್ಲಿ ಭಾರತಕ್ಕೆ ೬೩ ರನ್ ಬೇಕಾಗಿತ್ತು. ಬೌಲಿಂಗ್ ತಿರುವು ಪಡೆಯುತ್ತಿದ್ದ ಆ ಪಿಚ್‌ನಲ್ಲಿ ಅದು ಸುಲಭದ ರನ್ ಆಗಿರಲಿಲ್ಲ. ಆದರೆ, ಪಾಂಡ್ಯ ಪರಿಸ್ಥಿತಿಯನ್ನೇ ಬದಲಾಯಿಸಿಬಿಟ್ಟರು. ಕೊನೆಯಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಈ ಮೂಲಕ ಅವರು ಮ್ಯಾಚ್ ವಿನ್ನರ್ ಎನಿಸಿಕೊಂಡರು.
ಪತ್ನಿಯೇ ಪ್ರೇರಣೆಯಂತೆ
ಗಾಯದ ಸಮಸ್ಯೆ, ಪ್ರದರ್ಶನ ವೈಫಲ್ಯ ಸೇರಿದಂತೆ ಎಲ್ಲ ಸಮಸ್ಯೆಗಳಿಂದ ಹೊರ ಬರಲು ಹಾರ್ದಿಕ್‌ಗೆ ಪತ್ನಿ ನತಾಶಾ ಸ್ಟಾಂಕೊವಿಕ್ ಪ್ರೇರಣೆಯಂತೆ. ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ. ತಾವೆದುರಿಸಿದ ಹಲವು ಸಮಸ್ಯೆಗಳನ್ನು ಬಗೆಹರಿಸಿದವರು ಪತ್ನಿ ಎಂಬುದಾಗಿ ಯಶಸ್ಸಿನ ಕ್ರೆಡಿಟ್ ಕೊಟ್ಟಿದ್ದಾರೆ.
ಟ್ವೀಟ್ ಶೇರ್
ತಾವು ಗೆಲವಿನವ ರೂವಾರಿಯಾಗುವ ಮೊದಲು ಅನುಭವಿಸಿದ ಹಾದಿಯನ್ನು ಪಾಂಡ್ಯ ಮರೆತಿಲ್ಲ. ಅಂಥದ್ದೊಂದು ಚಿತ್ರವನ್ನು ಸೋಮವಾರ ಟ್ವೀಟ್ ಮಾಡಿ “ಹಿನ್ನಡೆ ಅನುಭವಿಸುವುದಕ್ಕಿಂತ ಸುಧಾರಣೆ ಕಾಣುವುದೇ ಒಳ್ಳೆಯದು ,” ಎಂದು ಬರೆದುಕೊಂಡಿದ್ದಾರೆ.