ಮುಂಬಯಿ : ಕಾರು ಅವಘಡದಲ್ಲಿ ಪವಾಡಸದೃಶ ಪಾರಾಗಿ ಆಸ್ಪತ್ರೆ ಸೇರಿರುವ ಟೀಮ್ ಇಂಡಿಯಾದ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ ಅವರು ಅಲ್ಲಿ ಬೆಂಕಿ ತಾಗಿ ಸುಟ್ಟು ಹೋಗಿರುವ ಬೆನ್ನಿಗೆ ಪ್ಲಾಸ್ಟಿಕ್ ಸರ್ಜರಿ ಹಾಗೂ ಮಂಡಿ ಮೂಳೆ ಮುರಿತಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ಕ್ರಿಕೆಟಿಗನಿಗೆ ಈ ಸ್ಥಿತಿ ಬಂದಿರುವುದಕ್ಕೆ ಅವರ ಅಭಿಮಾನಿಗಳು ಬೇಸರದಲ್ಲಿದ್ದಾರೆ. ಅದರೆ, ರಿಷಭ್ ಅವರ ಮಾಜಿ ಪ್ರೇಯಸಿ ಎನ್ನಲಾದ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಇದೇ ತಕ್ಕ ಸಂದರ್ಭವೆಂದು ಮಂಗನಾಟ ಮಾಡುತ್ತಿದ್ದಾರೆ. ಅವಘಡ ನಡೆದ ದಿನ ನಾಗಿಣಿ ವೇಷದಲ್ಲಿ ರಿಷಭ್ಗಾಗಿ ಪ್ರಾರ್ಥಿಸುತ್ತಿರುವ ಚಿತ್ರವನ್ನು ಹಾಕಿದ್ದ ಅವರೀಗ, ಕೋಕಿಲಾ ಬೆನ್ ಆಸ್ಪತ್ರೆಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಊರ್ವಶಿಯ ಈ ನಡತೆ ಪಂತ್ ಅಭಿಮಾನಿಗಳಿಗೆ ಹಿತಕರ ಎನಿಸಿಲ್ಲ. ಸಮಯ ಸಂದರ್ಭ ನೋಡದೆ ನಟಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎಂಬ ಭಾವನೆ ಸೃಷ್ಟಿಯಾಗಿದ್ದಾರೆ. ಎಲ್ಲರೂ ಸೇರಿಕೊಂಡು ಒಟ್ಟಿಗೆ ಊರ್ವಶಿ ಮೇಲೆ ಮುಗಿ ಬಿದ್ದಿದ್ದಾರೆ. ಇಂಥ ಕುಹುಕಗಳನ್ನು ಮಾಡಬೇಡಿ ಎಂದು ಹಿಗ್ಗಾಮುಗ್ಗ ಜಾಡಿಸಿದ್ದಾರೆ.
ಪದೇಪದೇ ಒಬ್ಬ ವ್ಯಕ್ತಿಯನ್ನು ಕುಹಕ ಮಾಡುವುದು ಸರಿಯಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುವುದಕ್ಕೆ ಕಳಪೆ ದರ್ಜೆಯ ತಂತ್ರಗಳನ್ನು ಬಳಸಬಾರದು. ಇದೇ ತಂತ್ರವನ್ನು ಒಂದು ಹುಡುಗ, ಹುಡುಗಿಯ ಮೇಲೆ ಪ್ರಯೋಗಿಸಿದ್ದರೆ ಆತ ಜೈಲಿನಲ್ಲಿ ಇರುತ್ತಿದ್ದ ಅಥವಾ ನೆಟ್ಫ್ಲಿಕ್ಸ್ ವೆಬ್ಸ್ಟೋರಿಗೆ ಕತೆಯಾಗುತ್ತಿದ್ದ ಎಂದೆಲ್ಲ ಊರ್ವಶಿಯನ್ನು ಪಂತ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ | Rishabh Pant | ಪಂತ್ ಜತೆಯೇ ಇದ್ದಾರಾ ಊರ್ವಶಿ? ಕುತೂಹಲ ಹುಟ್ಟಿಸಿದ ಇನ್‌ಸ್ಟಾಗ್ರಾಂ ಸ್ಟೋರಿ!