Site icon Vistara News

Paralympic 2024: ಒತ್ತಡಕ್ಕೆ ಒಳಗಾಗಬೇಡಿ; ಭಾರತದ ಕ್ರೀಡಾಳುಗಳಿಗೆ ಪ್ರಧಾನಿ ಮೋದಿ ಸಲಹೆ

Paralympic 2024

Paralympic 2024: PM Modi wishes luck to Indian contingent for Paris Paralympics

ನವದೆಹಲಿ: ಇದೇ ತಿಂಗಳು ಆಗಸ್ಟ್​ 28ರಿಂದ ಪ್ಯಾರಿಸ್​ನಲ್ಲಿ(Paralympic 2024) ಆರಂಭಗೊಳ್ಳಲಿರುವ ಪ್ಯಾರಾಲಿಂಪಿಕ್ಸ್(Paris Paralympics)​ ಕ್ರೀಡಾಕೂಟದಲ್ಲಿ ಈ ಬಾರಿ ಭಾರತದಿಂದ ದಾಖಲೆಯ 84 ಮಂದಿ ಪ್ಯಾರಾ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಕಳೆದ ಶುಕ್ರವಾರ ಭಾರತ ಪ್ಯಾರಾಲಿಂಪಿಕ್‌ ಸಮಿತಿ (ಪಿಸಿಐ) ಮತ್ತು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಎಲ್ಲ ಕ್ರೀಡಾಪಟುಗಳಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಭಾರತದ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ. ಜತೆಗೆ ಆತ್ಮ ವಿಶ್ವಾಸ ತುಂಬಿದ್ದಾರೆ.

ಸೋಮವಾರ ರಾತ್ರಿ ನಡೆದಿದ್ದ ವರ್ಚುವಲ್‌ ಸಂವಾದದಲ್ಲಿ ಮೋದಿ ಅವರು ಅಥ್ಲೀಟ್​ಗಳ ಜತೆ ಸಂವಾದ ನಡೆಸಿದ್ದರು. ಇದೇ ವೇಳೆ ಹಲವು ಕ್ರೀಡಾಪಟುಗಳು ತಮ್ಮ ತಯಾರಿಯ ಬಗ್ಗೆ ಮತ್ತು ಈ ಬಾರಿ ಪದಕ ಗೆಲ್ಲುವ ವಿಶ್ವಾಸವನ್ನು ಮೋದಿ ಜತೆ ಹಂಚಿಕೊಂಡರು. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜಾವೆಲಿನ್‌ ತ್ರೋವರ್‌ ಸುಮಿತ್‌ ಅಂಟಿಲ್‌ ಈ ಬಾರಿಯೂ ಚಿನ್ನ ಗೆಲ್ಲುವುದಾಗಿ ಮೋದಿಗೆ ಭರವಸೆ ನೀಡಿದರು. ಸುಮಿತ್‌ ಅಂಟಿಲ್‌ ಪ್ಯಾರಾಲಿಂಪಿಕ್ಸ್‌ ಉದ್ಘಾಟನ ಸಮಾರಂಭದಲ್ಲಿ ಶಾಟ್‌ಪುಟರ್‌ ಭಾಗ್ಯಶ್ರೀ ಜಾಧವ್‌ ಅವರೊಂದಿಗೆ ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಒತ್ತಡಕ್ಕೆ ಒಳಗಾಗಬೇಡಿ


ಅಥ್ಲೀಟ್‌ಗಳ ಜತೆ ಮುಕ್ತವಾಗಿ ಮಾತನಾಡಿದ ಮೋದಿ, ಯಾವುದೇ ಒತ್ತಡಕ್ಕೊಳಗಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ‘ನಿಮ್ಮ ಪಯಣ ನಿಮಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮುಖ್ಯವಾದದ್ದು. ನೀವು ಮಾಡಿದ ಸಾಧನೆಯಿಂದ ಭಾರತೀಯರು ಹೆಮ್ಮೆ ಪಡುತ್ತಾರೆ. ಇಡೀ ದೇಶವೇ ನಿಮ್ಮ ಬೆಂಬಲಕ್ಕಿದೆ. 140 ಕೋಟಿ ಭಾರತೀಯರ ಆಶೀರ್ವಾದ ನಿಮ್ಮ ಮೇಲಿದೆ. ನಿಮ್ಮ ಇಷ್ಟು ವರ್ಷದ ಪರಿಶ್ರಮಕ್ಕೆ ಪ್ಯಾರಿಸ್​ನಲ್ಲಿ ಉತ್ತಮ ಪ್ರತಿಫಲ ಸಿಗುವಂತಾಗಲಿ” ಎಂದು ಮೋದಿ ಹಾರೈಸಿದ್ದಾರೆ.

ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ 19 ಪದಕ ಗೆದ್ದ ಭಾರತ, ಈ ಬಾರಿ 25 ಪದಕ ಗೆಲ್ಲುವ ಗುರಿಯೊಂದಿಗೆ ಪ್ಯಾರಿಸ್​ಗೆ ಪ್ರಯಾಣ ಬೆಳೆಸಿದೆ. ಈ ಬಾರಿ ದಾಖಲೆಯ 84 ಮಂದಿ ಪ್ಯಾರಾ ಕ್ರೀಡಾಪಟುಗಳು ವಿವಿಧ 12 ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ 24 ಮಂದಿ ಸ್ಪರ್ಧಿಸಿದ್ದರು.

ಇದನ್ನೂ ಓದಿ Paralympics 2024: ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗ್ಯಶ್ರೀ, ಸುಮಿತ್ ತ್ರಿವರ್ಣ ಧ್ವಜಧಾರಿಗಳು

ಭಾರತದ ಸ್ಪರ್ಧಿಗಳು– ಆರ್ಚರಿ, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಕೆನೊಯಿಂಗ್‌, ಸೈಕ್ಲಿಂಗ್‌, ಅಂಧರ ಜುಡೊ, ಪವರ್‌ಲಿಫ್ಟಿಂಗ್‌, ರೋಯಿಂಗ್‌, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ದೇಶದ ಅಥ್ಲೀಟ್​ಗಳು ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವ ವಿಶ್ವಾಸ ನನಗಿದೆ ಎಂದು ಭಾರತ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ದೇವೇಂದ್ರ ಝಜಾರಿಯಾ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ವರ್ಷ ಹಾಂಗ್‌ಝೌನ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲೂ ಭಾರತದ ಪ್ಯಾರಾಲಿಂಪಿಕ್ಸ್‌ ತಂಡ 111 ಪದಕಗಳನ್ನು ಜಯಿಸಿ, ಉತ್ತಮ ಸಾಧನೆ ಮೆರೆದಿತ್ತು. ಹೀಗಾಗಿ ಈ ಬಾರಿ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ.

Exit mobile version