ನವದೆಹಲಿ: ಇದೇ 28ರಿಂದ ಸೆಪ್ಟೆಂಬರ್ 8ರವರೆಗೆ ನಡೆಯುವ ಪ್ಯಾರಿಸ್ ಪ್ಯಾರಾಲಿಂಪಿಕ್(Paralympics 2024) ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶಾಟ್‌ಪುಟ್ ತಾರೆ ಭಾಗ್ಯಶ್ರೀ ಜಾಧವ್(Bhagyashree Jadhav) ಮತ್ತು ಸ್ಟಾರ್ ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್(Sumit Antil) ಭಾರತದ ಧ್ವಜಧಾರಿಗಳಾಗಿ(flag bearers for Paralympics) ಆಯ್ಕೆಯಾಗಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ 84 ಸದಸ್ಯರ ತಂಡವನ್ನು ಭಾಗ್ಯಶ್ರೀ ಮತ್ತು ಸುಮಿತ್ ಪರೇಡ್ ಆಫ್ ನೇಷನ್‌ನಲ್ಲಿ ಮುನ್ನಡೆಸಲಿದ್ದಾರೆ ಎಂದು ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿ ಶುಕ್ರವಾರ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
ಭಾಗ್ಯಶ್ರೀ ಜಾಧವ್
ಮಹಾರಾಷ್ಟ್ರದ ಮೂಲದ ಭಾಗ್ಯಶ್ರೀ ಜಾಧವ್ ಕಳೆದ ಕೆಲ ವರ್ಷಗಳಿಂದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಅವರು 2022 ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಶಾಟ್‌ಪುಟ್ F34 ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದಿದ್ದರು. ಮತ್ತು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಏಳನೇ ಸ್ಥಾನ ಪಡೆದಿದ್ದರು. ಫೆಜಾ ವಿಶ್ವಕಪ್ ಮತ್ತು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗೇಮ್ಸ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಗೆದ್ದು ತಮ್ಮ ಛಾಪು ಮೂಡಿಸಿದ್ದಾರೆ.
ಸುಮಿತ್ ಆಂಟಿಲ್
ಟೋಕಿಯೊ ಪ್ಯಾರಾಲಿಂಪಿಕ್ಸ್ 2020 ರಲ್ಲಿ ವಿಶ್ವ ದಾಖಲೆಯ 68.55 ಮೀ. ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ಗೆದ್ದ ಸುಮಿತ್ ಆಂಟಿಲ್ ಪುರುಷರ ವಿಭಾಗದ ಧ್ವಜಧಾರಿಯಾಗಿದ್ದಾರೆ. ಎಫ್64 ವಿಭಾಗದಲ್ಲಿ ಪ್ರಸ್ತುತ ವಿಶ್ವ ದಾಖಲೆ ಹೊಂದಿರುವ ಸುಮಿತ್ ಆಂಟಿಲ್ ಈ ಬಾರಿಯು ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 2022ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 73.29 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದರು.
ಇದನ್ನೂ ಓದಿ Paris Paralympics : ಪ್ಯಾರಾಲಿಂಪಿಕ್ಸ್‌ನಲ್ಲಿ 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ ಭಾರತ
25 ಪದಕ ನಿರೀಕ್ಷೆ
ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 84 ಕ್ರೀಡಾಪಟುಗಳ ದೊಡ್ಡ ದಂಡು ಪಾಲ್ಗೊಳ್ಳಲಿದೆ. ಈ ಕೂಟದಲ್ಲಿ 25ಕ್ಕೂ ಅಧಿಕ ಪದಕಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಭಾರತ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ದೇವೇಂದ್ರ ಝಜಾರಿಯಾ ಹೇಳಿದ್ದಾರೆ. ಕಳೆದ ಟೋಕಿಯೊದಲ್ಲಿ 19 ಪದಕಗಳನ್ನು ಗೆದ್ದಿದೆ. ಕಳೆದ ವರ್ಷ ಹಾಂಗ್‌ಝೌನ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲೂ 111 ಪದಕಗಳನ್ನು ಜಯಿಸಿ, ಉತ್ತಮ ಸಾಧನೆ ಮೆರೆದಿತ್ತು.
ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕೆನೊಯಿಂಗ್, ಸೈಕ್ಲಿಂಗ್, ಬ್ಲೈಂಡ್ ಜುಡೊ, ಪವರ್ ಲಿಫ್ಟಿಂಗ್, ರೋಯಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ ಸೇರಿದಂತೆ 12 ಕ್ರೀಡೆಗಳಲ್ಲಿ ಭಾರತ ಕ್ರೀಡಾಪಟುಗಳು ಕಣಕ್ಕೆ ಇಳಿಯಲಿದ್ದಾರೆ.