ನವದೆಹಲಿ: ಇದೇ ತಿಂಗಳು ಆಗಸ್ಟ್ 28ರಿಂದ ಪ್ಯಾರಿಸ್ನಲ್ಲಿ(Paralympic 2024) ಆರಂಭಗೊಳ್ಳಲಿರುವ ಪ್ಯಾರಾಲಿಂಪಿಕ್ಸ್(Paris Paralympics) ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಜಾವೆಲಿನ್ ತಾರೆ ಸುಮಿತ್ ಅಂಟಿಲ್ ಅವರನ್ನು ಒಳಗೊಂಡ ಭಾರತದ ಅಥ್ಲೀಟುಗಳ ಮೊದಲ ತಂಡ ಪ್ಯಾರಿಸ್ಗೆ ಪ್ರಯಾಣ ಬೆಳೆಸಿದೆ. ಪ್ಯಾರಿಸ್ ಹವಾಮಾನಕ್ಕೆ ಒಗ್ಗಿಕೊಳ್ಳುವ ಉದ್ದೇಶದಿಂದ ಅಥ್ಲೀಟ್ಗಳು ಒಂದು ವಾರ ಮೊದಲೇ ಫ್ರಾನ್ಸ್ ರಾಜಧಾನಿಗೆ ತೆರಳಿತು.
16 ಅಥ್ಲೀಟ್ಗಳ ತಂಡ ಪ್ಯಾರಿಸ್‌ನ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಲಿದ್ದು, ಕ್ರೀಡೆಗಳ ಉದ್ಘಾಟನಾ ಸಮಾರಂಭಕ್ಕೆ ಮೂರು ದಿವಸ ಮೊದಲು ಕ್ರೀಡಾ ಗ್ರಾಮಕ್ಕೆ ತೆರಳಲಿದೆ. ಈ ಬಾರಿ ಅಥ್ಲೀಟ್ಗಳ ತಂಡ ಐದು ಚಿನ್ನ ಸೇರಿ ಡಜನ್ ಪದಕಗಳ ಮೇಲೆ ಕಣ್ಣಿಟ್ಟಿದೆ.
2021ರ ಟೋಕಿಯೊ ಪ್ಯಾರಾ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳು ದಾಖಲೆಯ 19 ಪದಕಗಳನ್ನು (5 ಚಿನ್ನ, 8 ಬೆಳ್ಳಿ ಮತ್ತು 6 ಕಂಚು) ಗೆದ್ದುಕೊಂಡು ಗಮನ ಸೆಳೆದಿದ್ದರು. ಈ ಬಾರಿ ಭಾರತ 12 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವ 84 ಅಥ್ಲೀಟ್ಗಳ ತಂಡವನ್ನು ಕಳುಹಿಸುತ್ತಿದೆ. ಇದು ಪ್ಯಾರಾಲಿಂಪಿಕ್ಸ್ ಕ್ರೀಡೆಗಳಲ್ಲಿ ಭಾರತ ಕಳುಹಿಸುತ್ತಿರುವ ಅತಿ ದೊಡ್ಡ ತಂಡವೆನಿಸಿದೆ. ಈಗಾಗಲೇ ಪ್ರಧಾನಿ ಮೋದಿ ಭಾರತದ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ. ಜತೆಗೆ ಆತ್ಮ ವಿಶ್ವಾಸ ತುಂಬಿದ್ದಾರೆ.
ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜಾವೆಲಿನ್ ತ್ರೋವರ್ ಸುಮಿತ್ ಅಂಟಿಲ್ ಈ ಬಾರಿಯೂ ಚಿನ್ನ ಗೆಲ್ಲುವುದಾಗಿ ಮೋದಿಗೆ ಭರವಸೆ ನೀಡಿದ್ದಾರೆ. ಸುಮಿತ್ ಅಂಟಿಲ್ ಪ್ಯಾರಾಲಿಂಪಿಕ್ಸ್ ಉದ್ಘಾಟನ ಸಮಾರಂಭದಲ್ಲಿ ಶಾಟ್‌ಪುಟರ್ ಭಾಗ್ಯಶ್ರೀ ಜಾಧವ್ ಅವರೊಂದಿಗೆ ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸುಮಿತ್ ಅಂಟಿಲ್ ಮತ್ತು ಕೆಲವು ಪ್ಯಾರಾ ಅಥ್ಲೀಟುಗಳು ನೆಲ್ಸನ್ ಮಂಡೇಲಾ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ತರಬೇತಿ ಪಡೆದುಕೊಳ್ಳಲಿದ್ದಾರೆ. ನಂತರ ಕ್ರೀಡಾ ಗ್ರಾಮಕ್ಕೆ ವಾಸ್ತವ್ಯ ಬದಲಾಯಿಸಲಿದ್ದಾರೆ.
ಪ್ಯಾರಾ ಅಥ್ಲೆಟಿಕ್ಸ್ ತಂಡದಿಂದ ನಾವು ಐದು ಚಿನ್ನದ ಪದಕ ಮತ್ತು ಒಟ್ಟು 12 ಪದಕಗಳನ್ನು ಗೆಲ್ಲುವ ಗುರಿಹೊಂದಿದ್ದೇವೆ. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಅತ್ಯುತ್ತಮ ಸಾಧನೆಯಾಗಲಿದೆ ಎಂದು ಪ್ಯಾರಾ ಅಥ್ಲೆಟಿಕ್ಸ್ ಹೆಡ್ ಕೋಚ್ ಸತ್ಯನಾರಾಯಣ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಭಾರತದ ಸ್ಪರ್ಧಿಗಳು– ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕೆನೊಯಿಂಗ್, ಸೈಕ್ಲಿಂಗ್, ಅಂಧರ ಜುಡೊ, ಪವರ್‌ಲಿಫ್ಟಿಂಗ್, ರೋಯಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ Indian Paralympic Team: ಪದಕ ಬೇಟೆಗೆ ಹೊರಟ ಭಾರತೀಯ ಪ್ಯಾರಾಲಿಂಪಿಕ್ಸ್ ತಂಡಕ್ಕೆ ಬೀಳ್ಕೊಡುಗೆ
“ದೇಶದ ಅಥ್ಲೀಟ್ಗಳು ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವ ವಿಶ್ವಾಸ ನನಗಿದೆ. ನಾನು ನಿರೀಕ್ಷೆ ಮಾಡಿದಂತೆ ಈ ಬಾರಿ 25 ಪದಕ ಒಲಿಯಲಿದೆ” ಎಂದು ಭಾರತ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ದೇವೇಂದ್ರ ಝಜಾರಿಯಾ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ವರ್ಷ ಹಾಂಗ್‌ಝೌನ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲೂ ಭಾರತದ ಪ್ಯಾರಾಲಿಂಪಿಕ್ಸ್ ತಂಡ 111 ಪದಕಗಳನ್ನು ಜಯಿಸಿ, ಉತ್ತಮ ಸಾಧನೆ ಮೆರೆದಿತ್ತು. ಹೀಗಾಗಿ ಈ ಬಾರಿ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ. ಜಪಾನ್‌ನ ಕೋಬೆಯಲ್ಲಿ ಈ ವರ್ಷದ ಮೇ ತಿಂಗಳಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತದ ಅಥ್ಲೀಟ್ಗಳು ಆರು ಚಿನ್ನ, ಐದು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು. ಪದಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದು ಇದುವರೆಗಿನ ಭಾರತದ ಸರ್ವಶ್ರೇಷ್ಠ ಸಾಧನೆಯಾಗಿತ್ತು.