ಪ್ಯಾರಿಸ್: ಶೂಟಿಂಗ್ ವಿಭಾಗದಲ್ಲಿ((PARIS 2024 OLYMPICS)) ಭಾರತಕ್ಕೆ ಮತ್ತೆ ಹಿನ್ನಡೆಯಾಗಿದೆ. ಬೆಳಗ್ಗೆ ನಡೆದಿದ್ದ 10 ಮೀ. ಏರ್ ರೈಫಲ್ ಮಿಶ್ರ ತಂಡ ಸೋಲು ಕಂಡ ಬೆನ್ನಲ್ಲೇ ಇದೀಗ ಪುರುಷರ 10 ಮೀಟರ್ ಏರ್ ಪಿಸ್ತೂಲ್(Men’s 10m air pistol qualification) ವಿಭಾಗದಲ್ಲಿ ಭಾರತೀಯ ಶೂಟರ್ಗಳಾದ ಸರಬ್ಜೋತ್ ಸಿಂಗ್(9ನೇ) ಮತ್ತು ಅರ್ಜುನ್ ಸಿಂಗ್ ಚಿಮಾ(18) ಅಗ್ರ 8ರೊಳಗೆ ಸ್ಥಾನ ಪಡೆಯುವಲ್ಲಿ ವಿಫಲರಾಗಿ ಕೂಟದಿಂದ ಹೊರಬಿದ್ದರು.
ಸರಬ್ಜೋತ್ ಸಿಂಗ್ ಒಟ್ಟು ಆರು ಸುತ್ತಿನ ಪಂದ್ಯದಲ್ಲಿ 577 ಅಂಕ ಗಳಿಸಿ 9ನೇ ಸ್ಥಾನ ಪಡೆದರೆ, ಅರ್ಜುನ್ ಸಿಂಗ್(ARJUN CHEEMA) 574 ಅಂಕ ಗಳಿಸಿದರು. ಸರಬ್ಜೋತ್ ಸಿಂಗ್(Sarabjot Singh) ನಾಲ್ಕನೇ ಸುತ್ತಿನಲ್ಲಿ 100ಕ್ಕೆ 100 ಅಂಕ ಗಳಿಸಿ ಮೂರನೇ ಸ್ಥಾನಕ್ಕೇರಿದ್ದರು. ಈ ವೇಳೆ ಅವರು ಫೈನಲ್ ಪ್ರವೇಶ ಪಡೆಯುವುದು ಖಚಿತ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ಬಳಿಕದ ಪ್ರಧಾನ 2 ಸುತ್ತುಗಳಲ್ಲಿ ಹಿನ್ನಡೆ ಅನುಭವಿಸಿ 9ನೇ ಸ್ಥಾನ ಪಡೆದು ಕೂದಲೆಳೆ ಅಂತರದಲ್ಲಿ ಫೈನಲ್ಗೆರುವ ಅರ್ಹತೆಯಿಂದ ವಂಚಿತರಾದರು. ಅಗ್ರ 8 ಸ್ಥಾನ ಪಡೆದ ಶೂಟರ್ಗಳು ನೇರವಾಗಿ ಫೈನಲ್ಗೆ ಲಗ್ಗೆಯಿಟ್ಟರು.
ಇದಕ್ಕೂ ಮುನ್ನ ನಡೆದಿದ್ದ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಭಾರತ ಸೋಲು ಕಂಡು ಪದಕ ಸುತ್ತಿಗೇರುವಲ್ಲಿ ವಿಫಲವಾಗಿತ್ತು. ಸಂದೀಪ್ ಸಿಂಗ್-ಇಲವೆನಿಲ್ ವಲರಿವನ್ ಜೋಡಿ 12ನೇ ಸ್ಥಾನ ಪಡೆದರೆ, ಅರ್ಜುನ್ ಬಬುಟ-ರಮಿತಾ ಜಿಂದಾಲ್ ಜೋಡಿ 6ನೇ ಸ್ಥಾನ ಪಡೆಯಿತು. ಈ ಜೋಡಿ ಒಟ್ಟು 628.7 ಅಂಕಗಳಿಸಿದರೆ, ಸಂದೀಪ್ ಸಿಂಗ್-ಇಲವೆನಿಲ್ ಜೋಡಿ 626.3 ಅಂಕ ಗಳಿಸಿತು. ಇದರೊಂದಿಗೆ 10 ಮೀ. ಏರ್ ರೈಫಲ್ ಮಿಶ್ರ ಸ್ಪರ್ಧೆಯಲ್ಲಿ ಭಾರತದ ಎರಡೂ ತಂಡಗಳು ಕೂಡ ಪದಕ ಸುತ್ತಿಗೇರುವಲ್ಲಿ ವಿಫಲವಾಯಿತು. ಚೀನಾ, ಕೊರಿಯಾ, ಜರ್ಮನಿ ಮತ್ತು ಕಝಾಕಿಸ್ತಾನ್ ಪದಕ ಸುತ್ತಿಗೆ ಪ್ರವೇಶಿಸಿತು.
ಇದನ್ನೂ ಓದಿ Paris Olympics: ಶುಭಾರಂಭದ ನಿರೀಕ್ಷೆಯಲ್ಲಿ ಪುರುಷರ ಹಾಕಿ ತಂಡ; ಕಿವೀಸ್ ಎದುರಾಳಿ
ರೋಯಿಂಗ್ನಲ್ಲಿ ಮುನ್ನಡೆ ಸಾಧಿಸಿದ ಬಾಲರಾಜ್
ಸದ್ಯ ಭಾರತಕ್ಕೆ ಶನಿವಾರ ಶುಭ ಸುದ್ದಿ ಲಭಿಸಿದ್ದು ರೋಯಿಂಗ್ ವಿಭಾಗದಲ್ಲಿ ಮಾತ್ರ. ಪುರುಷರ ಸಿಂಗಲ್ ಸ್ಕಲ್ಸ್ ಹೀಟ್ಸ್ನಲ್ಲಿ ಕಣಕ್ಕಿಳಿದ್ದ ಬಾಲರಾಜ್ ಪನ್ವಾರ್ ನಾಲ್ಕನೇ ಸ್ಥಾನಿಯಾಗಿ ರೆಪೆಚೇಜ್ ರೌಂಡ್ಗೆ ಅರ್ಹತೆ ಪಡೆದಿದ್ದಾರೆ. ಈ ಪಂದ್ಯ ನಾಳೆ(ಭಾನುವಾ) ನಡೆಯಲಿದೆ.