Site icon Vistara News

Paris 2024 Olympics Athletics: ವಿಶ್ವ ರ್‍ಯಾಂಕಿಂಗ್‌ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಜೆಸ್ವಿನ್‌, ಅಂಕಿತಾ ಧ್ಯಾನಿ

Paris 2024 Olympics athletics: Jeswin Aldrin, Ankita Dhyani make the cut via world rankings

ನವದೆಹಲಿ: ಲಾಂಗ್‌ ಜಂಪ್‌ ಪಟು ಜೆಸ್ವಿನ್‌ ಆಲ್ಡ್ರಿನ್‌(Jeswin Aldrin) ಹಾಗೂ 5000 ಮೀ. ಓಟಗಾರ್ತಿ ಅಂಕಿತಾ ಧ್ಯಾನಿ(Ankita Dhyani) ವಿಶ್ವ ರ್‍ಯಾಂಕಿಂಗ್‌(world rankings) ಆಧಾರದ ಮೇಲೆ ಪ್ಯಾರಿಸ್​ ಒಲಿಂಪಿಕ್ಸ್‌ನಲ್ಲಿ(Paris Olympics 2024) ಸ್ಪರ್ಧಿಸಲು ಅರ್ಹತೆ ಗಿಟ್ಟಿಸಿಕೊಳ್ಳುವ ಮೂಲಕ ಒಲಿಂಪಿಕ್ಸ್​ನ ಅಥ್ಲೆಟಿಕ್ಸ್‌ನಲ್ಲಿ(Paris 2024 Olympics Athletics) ಪಾಲ್ಗೊಳ್ಳಲಿರುವ ಭಾರತೀಯರ ಅಥ್ಲೀಟ್​ಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಆಗಸ್ಟ್‌ 1ರಿಂದ ಅಥ್ಲೆಟಿಕ್ಸ್‌ ಶುರುವಾಗಲಿದೆ.

ಕಳೆದ ವಾರ ಭಾರತದ 9 ಅಥ್ಲೀಟ್​ಗಳು ವಿಶ್ವ ಶ್ರೇಯಾಂಕದ ಆಧಾರದಲ್ಲಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದರು. ಈ ವೇಳೆ ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಒಟ್ಟು 28 ಸ್ಪರ್ಧಿಗಳ ಹೆಸರು ಪ್ರಕಟಿಸಿತ್ತು. ಇದೀಗ ಮತ್ತೆ ಇಬ್ಬರ ಹೆಸರನ್ನು ಸೇರ್ಪಡೆಗೊಳಿಸಿದೆ. 30 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ

22 ವರ್ಷದ 5000 ಮೀ. ಓಟಗಾರ್ತಿ ಅಂಕಿತಾ ಕಳೆದ 2023ರ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು. ಲಾಂಗ್‌ ಜಂಪ್‌ ಪಟು ಜೆಸ್ವಿನ್‌ ಇತ್ತೀಚೆಗಷ್ಟೇ ರಾಷ್ಟ್ರೀಯ ಅಂತರ್-ರಾಜ್ಯ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಇದನ್ನೂ ಓದಿ Paris Olympics 2024: ಒಲಿಂಪಿಕ್ಸ್‌ಗೆ ಭಾರತದ ಎಲ್ಲ ಕ್ರೀಡಾಪಟುಗಳು ಫಿಟ್‌ ಎಂದ ಐಒಎ

ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳಿಗೆ ಮನೆಯ ವಾತಾವರಣವನ್ನು ಕಲ್ಪಿಸುವ ಉದ್ದೇಶದಿಂದ ರಿಲಯನ್ಸ್‌ ಸಂಸ್ಥೆ “ಇಂಡಿಯಾ ಹೌಸ್​”(India House)​ ಎಂಬ ವಿಶೇಷ ವ್ಯವಸ್ಥೆಯೊಂದನ್ನು ಮಾಡಿದೆ. ಭಾರತೀಯ ಕ್ರೀಡಾಪಟುಗಳು ಇದರಲ್ಲೇ ಉಳಿದುಕೊಳ್ಳಲಿದ್ದಾರೆ. ಇಂಡಿಯಾ ಹೌಸ್​ಗೆ ಎಲ್ಲ ದೇಶಗಳ ಪತ್ರಕರ್ತರಿಗೆ ಮುಕ್ತ ಪ್ರವೇಶವಿದೆ ಎಂದು ನೀತಾ ಅಂಬಾನಿ(Nita Ambani) ಹೇಳಿದ್ದಾರೆ. ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ (ಐಒಸಿ.) ಸದಸ್ಯೆಯಾಗಿದ್ದಾರೆ.

ಕ್ರೀಡಾಪಟುಗಳ ಮೇಲೆ ಮೋದಿ ಪದಕ ವಿಶ್ವಾಸ


ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಹೆಮ್ಮೆ ತರುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ಯಾರಿಸ್‌ಗೆ ತೆರಳಲಿರುವ ಹಲವು ಅಥ್ಲೀಟ್‌ಗಳ ಜತೆ ಸಂವಾದ ನಡೆಸಿದ ಬಳಿಕ ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

‘ಒಲಿಂಪಿಕ್ಸ್‌ಗಾಗಿ ಪ್ಯಾರಿಸ್‌ಗೆ ತೆರಳಲಿರುವ ನಮ್ಮ ಅಥ್ಲೀಟ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿ ಭಾರತವೇ ಹೆಮ್ಮೆ ಪಡುವಂತೆ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರ ಮೇಲೆ 140 ಕೋಟಿ ಭಾರತೀಯರು ಭರವಸೆ ಇಟ್ಟಿದ್ದಾರೆ’ ಎಂದು ಮೋದಿ ಬರೆದುಕೊಂಡಿದ್ದರು.

Exit mobile version