ನವದೆಹಲಿ: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್(Paris Olympics 2024) ಕ್ರೀಡಾಕೂಡ ಆರಂಭಕ್ಕೆ ಇನ್ನು ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಹಲವು ಭಾರತೀಯ ಕ್ರೀಡಾಪಟುಗಳು ಈ ಟೂರ್ನಿಗೆ ಅರ್ಹತೆ ಪಡೆದಿದ್ದು ಪದಕ ಗೆಲ್ಲಲು ಪೂರ್ವ ತಯಾರಿ ಮಾಡುತ್ತಿದ್ದಾರೆ. ಇದೀಗ ಭಾರತದ 9 ಅಥ್ಲೀಟ್ಗಳು ವಿಶ್ವ ಶ್ರೇಯಾಂಕದ ಆಧಾರದಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಪೈಕಿ 100 ಮೀ. ಹರ್ಡಲ್ಸ್ನಲ್ಲಿ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ ಜ್ಯೋತಿ ಯರಾಜಿ(JYOTHI YARRAJI) ಈ ಸಾಧನೆ ಮಾಡಿದ ಮೊದಲ ಭಾರತೀಯರೆನಿಸಿದ್ದಾರೆ.
ಶಾಟ್ಪುಟ್ ಪಟುಗಳಾದ ಅಭಾ ಖತುವಾ, ತಜಿಂದರ್ಪಾಲ್ ಸಿಂಗ್, ಜಾವೆಲಿನ್ ಥ್ರೋಪಟು ಅನ್ನುರಾಣಿ, ಟ್ರಿಪಲ್ಜಂಪ್ ಪಟುಗಳಾದ ಪರ್ವೀನ್ ಚಿತ್ರವೇಲ್, ಅಬ್ದುಲ್ ಅಬೂಬಕರ್, ಹೈಜಂಪ್ ಪಟು ಸರ್ವೇಶ್ ಕುಶಾರೆ, 5,000 ಮೀ. ಓಟಗಾರ್ತಿ ಪಾರುಲ್ ಚೌಧರಿ, ನಡಿಗೆ ಸ್ಪರ್ಧಿ ಸೂರಜ್ ಪನ್ವರ್ ರ್ಯಾಂಕಿಂಗ್ ಆಧಾರದಲ್ಲಿ ಒಲಿಂಪಿಕ್ಸ್ ಅರ್ಹತೆ ಪಡೆದ ಇತರರು. ಅರ್ಹತೆ ಪಡೆದಿರುವ 9 ಮಂದಿ ಅಥ್ಲೀಟ್ಗಳನ್ನು ಕೂಡ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟವು (ಎಎಐ) ಒಲಿಂಪಿಕ್ಸ್ಗೆ ಕಳುಹಿಸಬೇಕೆಂದಿಲ್ಲ. ಅಂತಿಮ ಆಯ್ಕೆಯು ಎಎಫ್ಐನದ್ದೇ ಆಗಿರುತ್ತದೆ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.
ಇದನ್ನೂ ಓದಿ Paris Olympics 2024 : ಒಲಿಂಪಿಕ್ಸ್ ಸ್ಮರಣೆಗಾಗಿ ಜೆಎಸ್ಡಬ್ಲ್ಯುನಿಂದ ಪ್ಯಾರಿಸ್ನಲ್ಲಿ ವಿಶೇಷ ಪ್ರದರ್ಶನ
ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗುವ ಭಾರತದ ಆ್ಯತ್ಲೀಟ್‌ಗಳಿಗೆ ಮನೆಯ ತಾವರಣವನ್ನು ಕಲ್ಪಿಸಲು ಇದರ ಉದ್ದೇಶದಿಂದ ರಿಲಯನ್ಸ್ ಸಂಸ್ಥೆ “ಇಂಡಿಯಾ ಹೌಸ್”(India House) ಎಂಬ ವಿಶೇಷ ವ್ಯವಸ್ಥೆಯೊಂದನ್ನು ಮಾಡಿದೆ. ಭಾರತೀಯ ಕ್ರೀಡಾಪಟುಗಳು ಇದರಲ್ಲೇ ಉಳಿದುಕೊಳ್ಳಲಿದ್ದಾರೆ.
ಇಂಡಿಯಾ ಹೌಸ್ಗೆ ಎಲ್ಲ ದೇಶಗಳ ಪತ್ರಕರ್ತರಿಗೆ ಮುಕ್ತ ಪ್ರವೇಶವಿದೆ ಎಂದು ನೀತಾ ಅಂಬಾನಿ(Nita Ambani) ಹೇಳಿದ್ದಾರೆ. ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ (ಐಒಸಿ.) ಸದಸ್ಯೆಯಾಗಿದ್ದಾರೆ. ಅಮೆರಿಕಾದ ಲಾಸ್ ಏಂಜಲಿಸ್ನಲ್ಲಿ 2028ರಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಳ್ಳುವಲ್ಲಿ ನೀತಾ ಅಂಬಾನಿ ಅವರ ಪಾತ್ರವೂ ಪ್ರಮುಖವಾಗಿತ್ತು. ಕಳೆದ ವರ್ಷ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನ(International Olympic Committee Session) ಮುಂಬೈಯಲ್ಲಿ ನಡೆದ ವೇಳೆಯೂ ನೀತಾ ಅಂಬಾನಿ ಈ ಸಭೆಯ ವಕಾಲತ್ತು ವಹಿಸಿದ್ದರು.