Site icon Vistara News

Paris Olympics 2024: 2ನೇ ಸುತ್ತಿನಲ್ಲಿ ಜೊಕೊ-ನಡಾಲ್ ಮುಖಾಮುಖಿ ಸಾಧ್ಯತೆ

Paris Olympics 2024: Djokovic vs Nadal potential second-round clash

ಪ್ಯಾರಿಸ್‌: ಪ್ಯಾರಿಸ್​ ಒಲಿಂಪಿಕ್ಸ್​(Paris 2024 Olympics) ಟೆನಿಸ್‌ ಸ್ಪರ್ಧೆಯ ಡ್ರಾ ಪ್ರಕಟಗೊಂಡಿದೆ. ವಿಶ್ವದ ಶ್ರೇಷ್ಠ ಟೆನಿಸ್​ ಆಟಗಾರರಾದ ಸರ್ಬಿಯಾದ ನೊವಾಕ್‌ ಜೊಕೊವಿಚ್(Novak Djokovic) ಹಾಗೂ ಸ್ಪೇನ್​ನ ರಫೇಲ್‌ ನಡಾಲ್‌(rafael nadal) ಅವರು ಎರಡನೇ ಸುತ್ತಿನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಹೀಗಾಗಿ ಅಭಿಮಾನಿಗಳಲ್ಲಿ ಟೂರ್ನಿ ಆರಂಭಕ್ಕೂ ಮುನ್ನವೇ ಭಾರೀ ಕುತೂಹಲ ಕೆರಳಿಸುವಂತೆ ಮಾಡಿದೆ.

ಜೊಕೊವಿಚ್‌ ಅವರು ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಎದುರು ಕಣಕ್ಕಿಳಿದರೆ, ನಡಾಲ್‌ ಹಂಗೇರಿಯ ಮಾರ್ಟನ್‌ ಫುಕ್ಸೊವಿಕ್ಸ್‌ ಸವಾಲು ಎದುರಿಸಲಿದ್ದಾರೆ. ಈ ಪಂದ್ಯ ಜುಲೈ 27ರಂದು ನಡೆಯಲಿದೆ. ಸ್ನಾಯು ಸೆಳೆತದಿಂದ ಬರೋಬ್ಬರಿ ಒಂದು ವರ್ಷದಿಂದ ಬಳಲುತ್ತಿರುವ ನಡಾಲ್​ಗೆ ದೇಹ ಯಾವ ರೀತಿ​ ಸ್ಪಂದಿಸಲಿದೆ ಎನ್ನುವುದು ಕೂಡ ಮುಖ್ಯವಾಗಿದೆ. ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಕೆ ಕಾಣದಿದ್ದರೂ ಕೂಡ ತಮ್ಮ ದೇಶಕ್ಕಾಗಿ ಒಲಿಂಪಿಕ್ಸ್​ ಆಡುವುದಾಗಿ ಹೇಳಿದ್ದರು.

ಕಳೆದ ವಾರ ಮುಕ್ತಾಯ ಕಂಡಿದ್ದ ವಿಂಬಲ್ಡನ್‌ ಟೂರ್ನಿಯಲ್ಲಿ ಜೋಕೊವಿಕ್​ ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌(carlos alcaraz) ಅವರು ಹ್ಯಾಡಿ ಹಬೀಬ್‌ ಎದುರು ಮೊದಲ ಸುತ್ತಿನಲ್ಲಿ ಆಡಲಿದ್ದಾರೆ. ಡಬಲ್ಸ್​ನಲ್ಲಿ ಕಾರ್ಲೋಸ್ ಅಲ್ಕರಾಜ್ ಅವರು ದಿಗ್ಗಜ ನಡಾಲ್‌ ಜತೆಗೂಡಿ ಆಡಲಿದ್ದಾರೆ.

2008ರಲ್ಲಿ ಬೀಜಿಂಗ್‌ನಲ್ಲಿ ನಡೆದಿದ್ದ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ನಡಾಲ್‌ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿ‌ದ್ದರು. 2016ರ ರಿಯೊ ಡಿ ಜನೈರೊ ಒಲಿಂಪಿಕ್‌ನಲ್ಲಿ ಮಾರ್ಕ್‌ ಲೊಪೇಜ್‌ ಅವರೊಂದಿಗೆ ಡಬಲ್ಸ್‌ನಲ್ಲೂ ‘ಬಂಗಾರ’ ಗೆದ್ದಿದ್ದರು. ಈ ಬಾರಿಯೂ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ Paris Olympics: ಈ ಬಾರಿ ಪದಕದ ನಿರೀಕ್ಷೆ ಮೂಡಿಸಿದ ಭಾರತೀಯ ಅಥ್ಲೀಟ್‌ಗಳು ಇವರು…

ಕೊಕೊ ಗಾಫ್ ಅಮೆರಿಕದ ಧ್ವಜಧಾರಿ

ಯುವ ಮಹಿಳಾ ಟೆನಿಸ್ ಆಟಗಾರ್ತಿ ಕೊಕೊ ಗಾಫ್(Coco Gauff) ಅವರು ಪ್ಯಾರಿಸ್​ ಒಲಿಂಪಿಕ್ಸ್‌ನ(Paris Olympics) ಉದ್ಘಾಟನಾ ಸಮಾರಂಭದಲ್ಲಿ(Paris Olympics Opening Ceremony) ಅಮರಿಕದ ಮಹಿಳಾ ಧ್ವಜಧಾರಿಯಾಗಲಿದ್ದಾರೆ(US Flag Bearer). ಶುಕ್ರವಾರ(ಜುಲೈ 26) ನಡೆಯುವ ಉದ್ಘಾಟನ ಸಮಾರಂಭದಲ್ಲಿ ಯುಎಸ್ ಧ್ವಜವನ್ನು ಹೊತ್ತೊಯ್ಯಲಿದ್ದಾರೆ. ಈ ಗೌರವವನ್ನು ಪಡೆದ ಅತ್ಯಂತ ಕಿರಿಯ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜತೆಗೆ ಉದ್ಘಾಟನಾ ಅಥವಾ ಸಮಾರೋಪ ಸಮಾರಂಭದಲ್ಲಿ ಅಮೆರಿಕದ ಧ್ವಜಧಾರಿಯಾಗಿ ಸೇವೆ ಸಲ್ಲಿಸಿದ ಮೊದಲ ಟೆನಿಸ್ ಆಟಗಾರ್ತಿ ಎಂದೆನಿಸಿಕೊಳ್ಳಲಿದ್ದಾರೆ. 

ಪ್ಯಾರಿಸ್‌ ಆತಿಥ್ಯದಲ್ಲಿ ನಡೆಯುತ್ತಿರುವ 3ನೇ ಒಲಿಂಪಿಕ್ಸ್‌ ಕೀಡಾಕೂಟ ಇದಾಗಿದೆ. ಮೊದಲ ಒಲಿಂಪಿಕ್ಸ್‌ ನಡೆದದ್ದು 1900ರಲ್ಲಿ. ಇದಾದ ಬಳಿಕ 1924ರಲ್ಲಿ ಆತಿಥ್ಯ ವಹಿಸಿತ್ತು. ಇದೀಗ ಬರೋಬ್ಬರಿ 100 ವರ್ಷಗಳ ಬಳಿಕ ಇಲ್ಲಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ನಡೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್​ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

Exit mobile version