ನವದೆಹಲಿ: ಮುಂದಿನ ತಿಂಗಳು ಆರಂಭಗೊಳ್ಳಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ(Paris Olympics 2024) ಭಾರತದ 16 ಸದಸ್ಯರ ಹಾಕಿ ತಂಡವನ್ನು(Indian Men’s Hockey Team) ಪ್ರಕಟಿಸಲಾಗಿದೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ತಂಡವನ್ನು ಮುನ್ನಡೆಸಿ ಕಂಚಿನ ಪದಕ ಗೆಲ್ಲಿಸಿಕೊಟ್ಟಿದ್ದ ಹರ್ಮನ್‌ಪ್ರೀತ್ ಸಿಂಗ್(Harmanpreet Singh) ಅವರೇ ಈ ಬಾರಿಯೂ ತಂಡದ ನಾಯಕನಾಗಿದ್ದಾರೆ. ಕೇರಳ ಮೂಲಕ ಶ್ರೀಜೇಶ್ ಪ್ರಧಾನ ಗೋಲ್‌ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಇದು ಅವರಿಗೆ 4ನೇ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ.
ಕಳೆದ ಬಾರಿ ಕಂಚಿನ ಪದಕ ಜಯಿಸಿದ್ದ ಭಾರತ ತಂಡ ಈ ಬಾರಿ ಹಾಲಿ ಚಾಂಪಿಯನ್ ಬೆಲ್ಜಿಯಂ, ಆಸ್ಟ್ರೇಲಿಯಾ, ಅರ್ಜೆಂಟೀನಾ, ನ್ಯೂಜಿಲ್ಯಾಂಡ್ ಹಾಗೂ ಐರ್ಲೆಂಡ್ ಜತೆ ‘ಬಿ’ ಗುಂಪಿನಲ್ಲಿದೆ. ಜುಲೈ 27ರಂದು ಕಿವೀಸ್ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಒಲಿಂಪಿಕ್ಸ್ ಇತಿಹಾಸವನ್ನೊಮ್ಮೆ ಕೆದಕಿದರೆ ಪುರುಷರ ಹಾಕಿಯಲ್ಲಿ 8 ಬಾರಿ ಸ್ವರ್ಣ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆ ಭಾರತ ಉಳಿಸಿಕೊಂಡಿದೆ.
ಭಾರತ ತಂಡ ಜುಲೈ 29ರಂದು ಅರ್ಜೆಂಟೀನಾ, 30ರಂದು ಐರ್ಲೆಂಡ್, ಆಗಸ್ಟ್ 1ರಂದು ಬೆಲ್ಜಿಯಂ, ಆಗಸ್ಟ್ 2ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಕಳೆದ ಬಾರಿ ಕಂಚು ಗೆದ್ದ ಭಾರತ ಈ ಬಾರಿ ಚಿನ್ನದ ಪದಕ್ಕೆ ಕೊರಳೊಡ್ಡಲಿ ಎನ್ನುವುದು ಭಾರತೀಯರ ಆಶಯ. ‘ಎ’ ಗುಂಪಿನಲ್ಲಿ ನೆದರ್ಲೆಂಡ್ಸ್, ಸ್ಪೇನ್, ಜರ್ಮನಿ, ಫ್ರಾನ್ಸ್, ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಕ್ವಾರ್ಟರ್‌ಫೈನಲ್ ಪಂದ್ಯಗಳು ಆಗಸ್ಟ್ 4ರಂದು ಮತ್ತು ಸೆಮಿಫೈನಲ್ ಪಂದ್ಯಗಳು ಆಗಸ್ಟ್ 6 ರಂದು ನಡೆಯಲಿವೆ. ಕಂಚಿನ ಪದಕದ ಮತ್ತು ಫೈನಲ್ ಪಂದ್ಯ ಆಗಸ್ಟ್ 8ರಂದು ನಡೆಯಲಿವೆ.
ಇದನ್ನೂ ಓದಿ Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕರ್ನಾಟಕದ ಅದಿತಿ ಅಶೋಕ್
ತಂಡ
ಗೋಲ್‌ಕೀಪರ್: ಪಿ.ಆರ್. ಶ್ರೀಜೇಶ್
ಡಿಫೆಂಡರ್‌ಗಳು: ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೊಹಿದಾಸ್, ಹರ್ಮನ್‌ಪ್ರೀತ್ ಸಿಂಗ್, ಸುಮಿತ್, ಸಂಜಯ್
ಮಿಡ್‌ಫೀಲ್ಡರ್‌ಗಳು: ರಾಜ್‌ಕುಮಾರ್ ಪಾಲ್, ಶಮ್‌ಶೇರ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್
ಫಾರ್ವರ್ಡ್: ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್
ಬದಲಿ ಆಟಗಾರರು: ನೀಲಕಂಠ ಶರ್ಮಾ, ಜುಗರಾಜ್ ಸಿಂಗ್, ಕೃಷ್ಣ ಬಹದ್ದೂರ್ ಪಾಠಕ್.
ಒಲಿಂಪಿಕ್ಸ್ ಆರಂಭ ಯಾವಾಗ?
2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಅತಿ ದೊಡ್ಡ ಮತ್ತು ಮಹತ್ವದ ಕ್ರೀಡಾಕೂಟವಾಗಿದೆ. ಸುಮಾರು 200 ದೇಶಗಳ 10,000 ಕ್ರೀಡಾಪಟುಗಳು ಒಲಿಂಪಿಕ್ ವೈಭವಕ್ಕಾಗಿ ಸ್ಪರ್ಧಿಸಲಿದ್ದಾರೆ. ಪ್ಯಾರಿಸ್ ತನ್ನ ಮೂರನೇ ಬಾರಿಗೆ ಆತಿಥೇಯ ನಗರವಾಗಿ (1900 ಮತ್ತು 1924 ರ ನಂತರ) ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲಿದೆ. ಜುಲೈ 26 ರಿಂದ ಆಗಸ್ಟ್ 11ರ ತನಕ ಟೂರ್ನಿ ನಡೆಯಲಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.
ಅರ್ಹತೆ ಪಡೆಯದ ಮಹಿಳಾ ತಂಡ
ಟೋಕಿಯೊ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತೀಯ ಮಹಿಳಾ ಹಾಕಿ ತಂಡವು ಮುಂದಿನ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನೇ ಪಡೆಯದಿರುವುದು ವಿಪರ್ಯಾಸ. 2012ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್ನಲ್ಲಿ ಅವಕಾಶ ಪಡೆಯಲು ವಿಫಲಗೊಂಡಿದೆ.
1980ರ ಮಾಸ್ಕೋದಲ್ಲಿ ಮಹಿಳಾ ಹಾಕಿ ಸೇರ್ಪಡೆಯಾದ ಬಳಿಕ ಭಾರತ ಮಹಿಳಾ ತಂಡ ಒಲಿಂಪಿಕ್ಸ್ನಲ್ಲಿ ಕೇವಲ ಮೂರು ಬಾರಿ ಆಡಿದೆ. ಮೊದಲ ನಾಲ್ಕು ಆವೃತ್ತಿಯಲ್ಲಿ ಅರ್ಹತೆ ಪಡೆಯದ ಭಾರತ ರಿಯೋ 2016ರಲ್ಲಿ ಅವಕಾಶ ಗಿಟ್ಟಿಸಿತು. ಆ ಸಮಯದಲ್ಲಿ 12ನೇ ಸ್ಥಾನ ಪಡೆದುಕೊಂಡಿತ್ತು. ನಂತರ ಟೋಕಿಯೊ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿತ್ತು.