Site icon Vistara News

Paris Olympics 2024 : ಭಾರತಕ್ಕೆ ಒಲಿಂಪಿಕ್ ಕ್ರೀಡಾಕೂಟ ತರುವ ದಿನ ದೂರವಿಲ್ಲ; ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ನೀತಾ ಅಂಬಾನಿ

Paris Olympics 2024

ಮುಂಬೈ/ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ (Paris Olympics 2024) ಅದ್ಧೂರಿಯಾಗಿ ಉದ್ಘಾಟನೆಯಾದ ಒಂದು ದಿನದ ನಂತರ, ಭಾರತವು ಮೊದಲ ಬಾರಿಗೆ ‘ಇಂಡಿಯಾ ಹೌಸ್’ ಅನ್ನು ಪ್ಯಾರಿಸ್‌ನಲ್ಲಿ ಉದ್ಘಾಟಿಸಿತು. ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಎಂ. ಅಂಬಾನಿ ಅವರು ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲಿ ದೀಪ ಬೆಳಗಿಸುವ ಮೂಲಕ ಇಂಡಿಯಾ ಹೌಸ್ ಅನ್ನು ಉದ್ಘಾಟಿಸಿದರು.

ಭಾರತ ಮತ್ತು ವಿದೇಶಗಳ ಅತಿಥಿಗಳು, ಐಒಸಿ ಅಧಿಕಾರಿಗಳು ಮತ್ತು ಭಾರತದ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಐಒಸಿ ಸಮಿತಿ ಸದಸ್ಯ ಸೆರ್ ಮಿಯಾಂಗ್ ಎನ್ ಜಿ, ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಪಿ.ಟಿ. ಉಷಾ, ಫ್ರಾನ್ಸ್‌ನಲ್ಲಿರುವ ಭಾರತದ ರಾಯಭಾರಿ ಜಾವೇದ್ ಅಶ್ರಫ್, ಬಿಸಿಸಿಐನ ಜಯ್ ಶಾ ಮತ್ತು ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಸೇರಿ ಹಲವರಿದ್ದರು.

ಈ ಸಂದರ್ಭದಲ್ಲಿ ಐಒಸಿ ಸದಸ್ಯೆ ನೀತಾ ಅಂಬಾನಿ ಅವರು ಭಾರತಕ್ಕೆ ಒಲಿಂಪಿಕ್ಸ್ ತರುವುದು ಖಚಿತ ಎಂದು ಘೋಷಿಸಿದರು. “ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ನಿರ್ಮಿಸಲಾದ ಇಂಡಿಯಾ ಹೌಸ್‌ಗೆ ಸ್ವಾಗತ. ಇಂದು ನಾವು 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಹೊಸ ಕನಸನ್ನು ಕಾಣುತ್ತಿದ್ದೇವೆ. 140 ಕೋಟಿ ಭಾರತೀಯರ ಕನಸು ಸಹ ಆಗಿದೆ. ಭಾರತಕ್ಕೆ ಒಲಿಂಪಿಕ್ ಅನ್ನು ತರುವುದು ಸಾಮಾನ್ಯ ಕನಸಾಗಿದೆ. ಅಥೆನ್ಸ್‌ನಲ್ಲಿ ಮೊದಲ ಬಾರಿಗೆ ಒಲಂಪಿಕ್ಸ್ ಜ್ಯೋತಿಯನ್ನು ಬೆಳಗಿಸಿದ್ದು, ಆ ಜ್ಯೋತಿಯನ್ನು ನಮ್ಮ ಪ್ರಾಚೀನ ಭಾರತದ ಮಣ್ಣಿಗೆ ತರುವ ದಿನ ದೂರವಿಲ್ಲ, ನಮ್ಮ ದೇಶವು ಒಲಿಂಪಿಕ್ ಆತಿಥ್ಯ ವಹಿಸುವ ದಿನ ದೂರವಿಲ್ಲ. ಇಂಡಿಯಾ ಹೌಸ್ ಉದ್ಘಾಟನೆಯಲ್ಲಿ ಇದು ನಮ್ಮ ಸಾಮೂಹಿಕ ಸಂಕಲ್ಪವಾಗಿದೆ,” ಎಂದರು.

“ಇಂಡಿಯಾ ಹೌಸ್ ಅನ್ನು ಭಾರತದ ಒಲಿಂಪಿಕ್ ಆಕಾಂಕ್ಷೆಗಳ ಸಂಕೇತವಾಗಿ ನೋಡಲಾಗುತ್ತದೆ. ಇದು ನಮ್ಮ ಕ್ರೀಡಾಪಟುಗಳಿಗೆ ಮನೆಯಿಂದ ದೂರವಿರುವಂಥ ಮತ್ತೊಂದು ಮನೆಯಾಗಲಿದೆ ಎಂದು ನಾವು ಭಾವಿಸುತ್ತೇವೆ. ನಾವು ಅವರ ಆತ್ಮಶಕ್ತಿಯನ್ನು ಗೌರವಿಸುವ ಮತ್ತು ಅವರ ಸಾಧನೆಗಳನ್ನು ಆಚರಿಸುವ ಸ್ಥಳವಾಗಿದೆ. ಇಂಡಿಯಾ ಹೌಸ್ ಅಂತ್ಯವಲ್ಲ, ಇದು ಭಾರತಕ್ಕೆ ಹೊಸ ಆರಂಭವಾಗಿದೆ. ಸೌಂದರ್ಯ, ವೈವಿಧ್ಯ ಮತ್ತು ಶ್ರೀಮಂತ ಪರಂಪರೆಯನ್ನು ಅನುಭವಕ್ಕೆ ಪಡೆಯುವುದಕ್ಕೆ ನಾವು ಜಗತ್ತನ್ನು ಸ್ವಾಗತಿಸುತ್ತೇವೆ,” ಎಂದರು.

ಇದನ್ನೂ ಓದಿ: Paris Olympics 2024 : ಷಟ್ಲರ್​ಗಳ ಪರಾಕ್ರಮ ಆರಂಭ; ಸಿಂಗಲ್ಸ್​ನಲ್ಲಿ ಲಕ್ಷ್ಯ ಸೇನ್​, ಡಬಲ್ಸ್​ನಲ್ಲಿ ಸಾತ್ವಿಕ್​- ಚಿರಾಗ್ ಜೋಡಿಗೆ ಗೆಲುವು

ಇಂಡಿಯಾ ಹೌಸ್ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ಗಾಯಕ ಶಾನ್ ತಮ್ಮ ಗಾಯನದ ಮೂಲಕ ಕಳೆ ತುಂಬಿದರು. ಅವರ ಬಾಲಿವುಡ್ ಹಾಡುಗಳಿಗೆ ಪ್ರೇಕ್ಷಕರು ಮುಕ್ತವಾಗಿ ನೃತ್ಯ ಮಾಡಿದರು. ಡೊಳ್ಳು ಬಾರಿಸುವ ಮೂಲಕ ಪ್ರವಾಸಿಗರನ್ನು ಸ್ವಾಗತಿಸಲಾಯಿತು. ಇದಾದ ಬಳಿಕ ಮುಂಬೈನ ಅಂಧ ಮಕ್ಕಳು ಭಾರತೀಯ ಸಾಂಪ್ರದಾಯಿಕ ಆಟ ಮಲ್ಲಕಂಬದ ಅದ್ಭುತ ಪ್ರದರ್ಶನ ನೀಡಿದರು. ಇಂಡಿಯಾ ಹೌಸ್ ಪಾರ್ಕ್ ಆಫ್ ನೇಷನ್ಸ್‌ನಲ್ಲಿರುವ ಪಾರ್ಕ್ ಡೆ ಲಾ ವಿಲೆಟ್‌ನಲ್ಲಿದೆ ಮತ್ತು ಜುಲೈ 27 ರಿಂದ ಆಗಸ್ಟ್ 11ರ ವರೆಗಿನ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಥಳೀಯ ಸಮಯ ಬೆಳಿಗ್ಗೆ 11 ರಿಂದ ರಾತ್ರಿ 11 ರವರೆಗೆ ಸಂದರ್ಶಕರಿಗೆ ತೆರೆದಿರುತ್ತದೆ.

Exit mobile version