ನವದೆಹಲಿ: ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್(Paris Olympics 2024) ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿರುವ ಭಾರತದ ಕ್ರೀಡಾಳುಗಳ ಪಟ್ಟಿಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಈಗಾಗಲೇ ಬಿಡುಗಡೆ ಮಾಡಿದೆ. ಈ ಬಾರಿ 117 ಕ್ರೀಡಾಪಟುಗಳು ಪದಕ ನಿರೀಕ್ಷೆಯೊಂದಿಗೆ ಸ್ಪರ್ಧಿಸಲಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ 119 ಮಂದಿ ಕ್ರೀಡಾಪಟುಗಳು ಪ್ರತಿನಿಧಿಸಿದ್ದರು.
ಅಥ್ಲೆಟಿಕ್ಸ್ನಲ್ಲಿ 29 ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. 18 ಪುರುಷರು ಹಾಗೂ 11 ಮಹಿಳೆಯರು ಸೇರಿದ್ದಾರೆ. ಆರಂಭದಲ್ಲಿ ಅಥ್ಲೀಟ್ಗಳ ಸಂಖ್ಯೆ 30 ಇತ್ತು. ಆದರೆ ವನಿತಾ ಶಾಟ್‌ಪುಟರ್ ಅಭಾ ಖತುವಾ ಗೈರಿನಿಂದ 29ಕ್ಕೆ ಇಳಿಯಿತು. ಆದರೆ ಅವರನ್ನು ಕೈಬಿಟ್ಟ ಬಗ್ಗೆ ಯಾವುದೇ ಕಾರಣ ಅಥವಾ ವಿವರಣೆ ನೀಡಲಾಗಿಲ್ಲ. 29 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ.
ಶೂಟಿಂಗ್ನಲ್ಲಿ ಒಟ್ಟು 21 ಮಂದಿ ಸ್ಥಾನ ಪಡೆದಿದ್ದಾರೆ. 10 ಮಂದಿ ಪುರುಷರು ಹಾಗೂ 11 ಮಂದಿ ಮಹಿಳಾ ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ಹಾಕಿ ತಂಡದಲ್ಲಿ 19 ಆಟಗಾರರಿದ್ದಾರೆ. ಟೇಬಲ್ ಟೆನಿಸ್‌ನಲ್ಲಿ 8 ಮಂದಿ ಆಟಗಾರರು, ಬ್ಯಾಡ್ಮಿಂಟನ್ನಲ್ಲಿ 7 ಮಂದಿ ಕಣಕ್ಕಿಳಿಯಲಿದ್ದಾರೆ. ಅವಳಿ ಒಲಿಂಪಿಕ್ ಪದಕ ಗೆದ್ದ ಪಿ.ವಿ. ಸಿಂಧು ಮೇಲೆ ಹ್ಯಾಟ್ರಿಕ್ ಪದಕವೊಂದನ್ನು ನಿರೀಕ್ಷೆ ಮಾಡಲಾಗಿದೆ. ಉಳಿದಂತೆ ಕುಸ್ತಿ, ಆರ್ಚರಿ ಮತ್ತು ಬಾಕ್ಸಿಂಗ್‌ನಲ್ಲಿ ತಲಾ 6 ಮಂದಿ ಸ್ಪರ್ಧಿಸಲಿದ್ದಾರೆ.
ಗಾಲ್ಫ್ನಲ್ಲಿ 4, ಟೆನಿಸ್‌ನಲ್ಲಿ 3, ಈಜು ಮತ್ತು ಹಾಯಿದೋಣಿಯಲ್ಲಿ ತಲಾ ಇಬ್ಬರು ಕಣಕ್ಕಿಳಿಯಲಿದ್ದಾರೆ. ಈಕ್ವೇಸ್ಟ್ರಿಯನ್(ಕುದುರೆ ಸವಾರಿ), ಜೂಡೋ, ರೋಯಿಂಗ್ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ಒಬ್ಬರಷ್ಟೇ ಸ್ಪರ್ಧಿಸಲಿದ್ದಾರೆ. ಪಿ.ವಿ.ಸಿಂಧು(PV Sindhu) ಮತ್ತು ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್(Sharath Kamal) ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ.
ಇದನ್ನೂ ಓದಿ Paris Olympics: ಪ್ಯಾರಿಸ್ ಒಲಿಂಪಿಕ್ಸ್ ಭದ್ರತಾ ಕಾರ್ಯದಲ್ಲಿ ಭಾರತದ ಶ್ವಾನದಳ; ಬೆಂಗಳೂರಿನಲ್ಲಿ ತರಬೇತಿ
ಅತ್ಯಧಿಕ 18 ಮಂದಿ ಸಹಾಯಕ ಸಿಬಂದಿಯನ್ನು ಶೂಟಿಂಗ್ ತಂಡಕ್ಕೆ ಒದಗಿಸಲಾಗಿದೆ. ಕುಸ್ತಿಗೆ 12, ಬಾಕ್ಸಿಂಗ್‌ಗೆ 11, ಹಾಕಿಗೆ 10, ಟಿಟಿ ಮತ್ತು ಬ್ಯಾಡ್ಮಿಂಟನ್‌ಗೆ 9, ಗಾಲ್ಫ್ಗೆ 5, ಆರ್ಚರಿ, ಹಾಯಿದೋಣಿ ಮತ್ತು ವೇಟ್‌ಲಿಫ್ಟಿಂಗ್‌ಗೆ
4, ಟೆನಿಸ್‌ಗೆ 3, ಈಜಿಗೆ 2 ಹಾಗೂ ಜೂಡೋಗೆ ಒಬ್ಬರು ಸಹಾಯಕ ಸಿಬ್ಬಂದಿ ನೀಡಲಾಗಿದೆ. ಒಟ್ಟು 140 ಮಂದಿ ಅಧಿಕಾರಿಗಳು ಹಾಗೂ ಸಹಾಯಕ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ. 2