Site icon Vistara News

Paris Olympics 2024: ಒಲಿಂಪಿಕ್ಸ್‌ಗೆ‌ ಅರ್ಹತೆ ಪಡೆದ ಬಾಕ್ಸರ್ ನಿಶಾಂತ್ ದೇವ್

Paris Olympics 2024

Paris Olympics 2024: India’s Nishant Dev qualifies for Paris 2024 Olympics

ನವದೆಹಲಿ: ಭಾರತದ ಬಾಕ್ಸರ್ ನಿಶಾಂತ್ ದೇವ್ ಅವರು ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಬಾಕ್ಸಿಂಗ್ ಒಲಿಂಪಿಕ್ಸ್‌ ಅರ್ಹತಾ ಪಂದ್ಯದಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ 2024ರ ಪ್ಯಾರಿಸ್(Paris Olympics 2024) ಕ್ರೀಡಾಕೂಟಕ್ಕೆ ಟಿಕೆಟ್‌ ಪಡೆದುಕೊಂಡಿದ್ದಾರೆ. ನಿಶಾಂತ್‌ ದೇವ್‌(Nishant Dev) ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಪುರುಷ ಬಾಕ್ಸರ್​ ಆಗಿದ್ದಾರೆ. ಒಟ್ಟಾರೆಯಾಗಿ 4ನೇ ಬಾಕ್ಸರ್ ಆಗಿದ್ದಾರೆ. ಮಹಿಳಾ ಬಾಕ್ಸರ್‌ಗಳಾದ ನಿಖತ್ ಜರೀನ್ (50 ಕೆಜಿ), ಪ್ರೀತ್ ಪವಾರ್ (54 ಕೆಜಿ) ಮತ್ತು ಲೊವ್ಲಿನಾ ಬೊರ್ಗೊಹೈನ್ (75 ಕೆಜಿ) ಈಗಾಗಲೇ ಪ್ಯಾರಿಸ್‌ಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಏಕಪಕ್ಷಿಯವಾಗಿ ಸಾಗಿದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಭಾರತೀಯ ಬಾಕ್ಸರ್​ನ ಬಲಿಷ್ಠ ಪಂಚ್​ಗಳಿಗೆ ತಡೆಯೊಡ್ಡುವಲ್ಲಿ ಮೊಲ್ಡೊವಾದ ವಸಿಲೆ ಸೆಬೊಟಾರಿ ಸಂಪೂರ್ಣವಾಗಿ ವಿಫಲರಾದರು. ಗೆಲುವಿನ ಅಂತರ 5-0. ಮತ್ತೊಂದೆಡೆ ಮಹಿಳೆಯರ 60 ಕೆಜಿ ವಿಭಾಗದಲ್ಲಿ ಮಾಜಿ ಯೂತ್ ವರ್ಲ್ಡ್ ಚಾಂಪಿಯನ್ ಭಾರತದ ಅಂಕುಶಿತಾ ಬೊರೊ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಸ್ವೀಡನ್‌ನ ಮಾಜಿ ಯುರೋಪಿಯನ್‌ ಗೇಮ್ಸ್‌ ಕಂಚಿನ ಪದಕ ವಿಜೇತೆ ಆಗ್ನೆಸ್ ಅಲೆಕ್ಸಿಸ್ಸನ್ ವಿರುದ್ಧ 2-3 ಅಂಕಗಳ ಅಂತರದ ಸೋಲು ಕಾಣುವ ಒಲಿಂಪಿಕ್ಸ್​ ಟಿಕೆಟ್​ ಪಡೆಯುವಲ್ಲಿ ವಿಫಲವಾದರು. ಪ್ಯಾರಿಸ್ ಒಲಿಂಪಿಕ್ಸ್(Paris Olympics)​ ಕ್ರೀಡಾಕೂಟ ಜುಲೈ 26ರಿಂದ ಆರಂಭಗೊಳ್ಳಲಿದೆ.

ಚಿನ್ನ ಗೆದ್ದ ಬಾಕ್ಸರ್​ಗಳಿಗೆ ಸಿಗಲಿದೆ ಭಾರೀ ನಗದು ಬಹುಮಾನ


ಕೆಲವು ತಿಂಗಳ ಹಿಂದೆ ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ಟ್ರ್ಯಾಕ್ ಮತ್ತು ಫೀಲ್ಡ್(track & field gold medallists) ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿತ್ತು. ಇದೀಗ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (International Boxing Association) ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದು, ಚಿನ್ನ ಗೆಲ್ಲುವ ಪ್ರತಿಯೊಬ್ಬ ಬಾಕ್ಸರ್​ಗಳಿಗೆ 41.68 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಜತೆಗೆ ಕೋಚ್‌, ರಾಷ್ಟ್ರೀಯ ತಂಡಗಳಿಗೆ 10 ಲಕ್ಷ ನೀಡುವುದಾಗಿಯೂ ಪ್ರಕಟಿಸಿದೆ.

ಇಲ್ಲಿ ಗಮನಿಸಬೇಕದ ವಿಚಾರವೆಂದರೆ ಹಣಕಾಸು ವಿಷಯದಲ್ಲಿ ಪಾರದರ್ಶಕತೆ ಕಾಪಾಡದ ಕಾರಣಕ್ಕೆ ಐಒಸಿ, ಬಾಕ್ಸಿಂಗ್ ಸಂಸ್ಥೆಯನ್ನು ನಿರ್ಬಂಧಿಸಿದೆ. 2020ರ ಟೋಕಿಯೊ ಒಲಿಂಪಿಕ್ಸ್‌ ಬಾಕ್ಸಿಂಗ್ ಸ್ಪರ್ಧೆಗಳನ್ನು ಐಬಿಎ(IBA) ನೆರವಿಲ್ಲದೇ ಐಒಸಿಯೇ ಸಂಘಟಿಸಿತ್ತು. ಕ್ರೀಡಾ ಸಂಸ್ಥೆಗಳು ನೀಡುವ ಬಹುಮಾನ ಹಣಕ್ಕೂ ಐಒಸಿ ಸಮ್ಮತಿ ನೀಡಿಲ್ಲ.

ಇದನ್ನೂ ಓದಿ Paris Olympics 2024: ಚಿನ್ನ ಗೆದ್ದ ಬಾಕ್ಸರ್​ಗಳಿಗೆ ಸಿಗಲಿದೆ ಭಾರೀ ನಗದು ಬಹುಮಾನ; ಮಹತ್ವದ ನಿರ್ಧಾರ ಕೈಗೊಂಡ ಐಬಿಎ

ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ಪ್ಯಾರಿಸ್​ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಾಗುವುದು. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಕ್ರೀಡಾಕೂಟದ ಆಯೋಜಕರು ಮಾಡಿದ್ದಾರೆ. ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್‌ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.

ಬೋಟ್‌ಗಳಲ್ಲೇ ಪರೇಡ್

ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

Exit mobile version