Site icon Vistara News

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜತೆಯಾಗಿ ಆಡಲಿದ್ದಾರೆ ನಡಾಲ್-ಅಲ್ಕರಾಜ್‌

Paris Olympics 2024

Paris Olympics 2024: Rafael Nadal to play doubles with Carlos Alcaraz for Spain

ಪ್ಯಾರಿಸ್​: ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(Paris Olympics 2024) ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ರಾಫೆಲ್ ನಡಾಲ್(Rafael Nadal) ಮತ್ತು ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್(Carlos Alcaraz) ಜತೆಯಾಗಿ ಕಣಕ್ಕಿಳಿಯಲಿದ್ದಾರೆ. ನಡಾಲ್ ಸಿಂಗಲ್ಸ್ ಮತ್ತು ಡಬಲ್ಸ್‌ ಎರಡೂ ವಿಭಾಗದಲ್ಲಿಯೂ ಆಡಲಿದ್ದಾರೆ.

ಕಾರ್ಲೋಸ್ ಅಲ್ಕರಾಜ್ ಮತ್ತು ರಾಫೆಲ್ ನಡಾಲ್ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ 15 ರೋಲ್ಯಾಂಡ್ ಗ್ಯಾರೋಸ್(Roland Garros) ಪ್ರಶಸ್ತಿಗಳೊಂದಿಗೆ ಉತ್ತಮ ಪ್ರಾಬಲ್ಯ ಹೊಂದಿದ್ದಾರೆ. ಮುಂಬರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಟೆನಿಸ್ ಸ್ಪರ್ಧೆಯನ್ನು ಪ್ಯಾರಿಸ್‌ನ ಕ್ಲೇ ಕೋರ್ಟ್‌ನಲ್ಲಿ ಆಡಲಾಗುತ್ತದೆ. ಕ್ಲೇ ಕೋರ್ಟ್‌ ಕಿಂಗ್​ ಎನಿಸಿಕೊಂಡಿರುವ ನಡಾಲ್​ಗೆ ಪ್ರಶಸ್ತಿ ಗೆಲ್ಲಲು ಇದು ಉತ್ತಮ ಅವಕಾಶವಾಗಿದೆ.

ಸ್ನಾಯು ಸೆಳೆತದಿಂದ ಬರೋಬ್ಬರಿ ಒಂದು ವರ್ಷ ಟೆನಿಸ್​ನಿಂದ ದೂರ ಉಳಿದಿದ್ದ ನಡಾಲ್​ ಇದೇ ವರ್ಷಾರಂಭದಲ್ಲಿ ನಡೆದಿದ್ದ ಬ್ರಿಸ್ಬೇನ್‌ ಇಂಟರ್‌ನ್ಶಾಶನಲ್‌ ಕಣಕ್ಕಿಳಿದಿದ್ದರು. ಆದರೆ ಮತ್ತೆ ಗಾಯಕ್ಕೆ ತುತ್ತಾಗಿ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಕೂಟದಿಂದ ಹಿಂದೆ ಸರಿದಿದ್ದರು. ಗಾಯದಿಂದ ಚೇತರಿಕೊಂಡು ಈ ಬಾರಿಯ ಫ್ರೆಂಚ್​ ಓಪನ್​ನಲ್ಲಿ ಆಡಿದ್ದ ನಡಾಲ್​ ಮೊದಲ ಸುತ್ತಿನಲ್ಲಿ ಸೋತು ಆಘಾತ ಎದುರಿಸಿದ್ದರು.

ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಕೆ ಕಾಣದಿದ್ದರೂ ಕೂಡ ತಮ್ಮ ದೇಶಕ್ಕಾಗಿ ಒಲಿಂಪಿಕ್ಸ್​ ಆಡುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ ಅವರು ಈ ಬಾರಿ ತವರಿನ ಅಭಿಮಾನಿಗಳ ಸಮ್ಮುಖದಲ್ಲೇ ಒಲಿಂಪಿಕ್ಸ್​ ಆಡಲಿದ್ದಾರೆ. “ಎರಡು ವರ್ಷಗಳಿಂದ ನನ್ನ ದೇಹವು ಸರಿಯಾಗಿ ಸ್ಪಂದಿಸುತ್ತಿಲ್ಲ. ಆದರೆ, ಒಲಿಂಪಿಕ್ಸ್​ ಆಡಲು ಸಿದ್ಧನಿದ್ದೇನೆ ಎಂದು ಭಾವಿಸಿದ್ದೇನೆ” ಎಂದು ನಡಾಲ್​ ಹೇಳಿದ್ದಾರೆ.

ಇದನ್ನೂ ಓದಿ Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಕನ್ನಡಿಗ ಬೋಪಣ್ಣ, ಸುಮಿತ್‌ ನಾಗಲ್‌

‘ಮುಂದೆ ಏನಾಗಬಹುದೆಂದು ಈಗಲೇ ಹೇಳಲು ಸಾಧ್ಯವಿಲ್ಲ. ನಾನೇ ನನಗೊಂದು ಅವಕಾಶ ನೀಡಬೇಕಿದೆ. ಹಿಂದೆಯೂ ಅನೇಕ ಸಲ ಗಾಯದಿಂದ ತೇಚರಿಸಿ ಟೆನಿಸ್​ ಅಂಗಳಕ್ಕೆ ಮರಳಿ ಟ್ರೋಫಿ ಗೆದ್ದಿದ್ದೇನೆ. ದೈಹಿಕವಾಗಿ ನಾನು ಗಟ್ಟಿಯಾಗಿದ್ದು ಆಡುವ ಮನಸ್ಸು ಇದ್ದಾಗ ನಾನೇಕೆ ಈಗಲೇ ನಿವೃತ್ತಿಗೆ ಕಾಲ ನಿಗದಿಪಡಿಸಲಿ” ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸದ್ಯಕ್ಕಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರು. ಆದರೆ ಅವರನ್ನು ಗಾಯ ಬೆನ್ನು ಬಿಡುವಂತೆ ತೋರುತ್ತಿಲ್ಲ ಹೀಗಾಗಿ ಅವರು ಮುಂದಿನ ದಿನಗಳಲ್ಲಿ ವಿದಾಯ ಘೋಷಿಸಿದರೂ ಅಚ್ಚರಿಯಿಲ್ಲ.

ಭಾನುವಾರ ನಡೆದಿದ್ದ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ನ ಪುರುಷರ ಸಿಂಗಲ್ಸ್‌ ಫೈನಲ್‌ ಹೋರಾಟದಲ್ಲಿ ಅಲ್ಕರಾಜ್‌ ಅವರು 6-3, 2-6, 5-7, 6-1, 6-2 ಸೆಟ್‌ಗಳಿಂದ ಜರ್ಮನಿಯ ಅಲೆಕ್ಸಾಂಡರ್‌ ಜ್ವರೇವ್‌ ಅವರನ್ನು ಮಣಿಸಿ ಚೊಚ್ಚಲ ಫ್ರೆಂಚ್‌ ಓಪನ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಮೊದಲ ಸೆಟ್‌ ಜಯಿಸಿದ್ದ ಅಲ್ಕರಾಜ್‌ ಆಬಳಿಕ ಎರಡು ಮತ್ತು ಮೂರನೇ ಸೆಟ್‌ನಲ್ಲಿ ಸೋತಿದ್ದರು. ಆದರೆ ಆಬಳಿಕ ಎರಡು ಸೆಟ್‌ಗಳಲ್ಲಿ ಅಮೋಘವಾಗಿ ಆಡಿ ಗೆದ್ದ ಅವರು ಪ್ರಶಸ್ತಿಗೆ ಮುತ್ತಿಕ್ಕಿದ್ದರು.

Exit mobile version