Site icon Vistara News

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಕನ್ನಡಿಗ ಬೋಪಣ್ಣ, ಸುಮಿತ್‌ ನಾಗಲ್‌

Paris Olympics 2024

Paris Olympics 2024: Rohan Bopanna, Sumit Nagal secure Paris Olympics 2024 Quotas For India

ನವದೆಹಲಿ: ಭಾರತದ ಹಿರಿಯ ಟೆನಿಸ್​ ಆಟಗಾರ ರೋಹನ್‌ ಬೋಪಣ್ಣ(Rohan Bopanna) ಮತ್ತು ಸುಮಿತ್‌ ನಾಗಲ್‌(Sumit Nagal) ಮುಂದಿನ ತಿಂಗಳು ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ಗೆ(Paris Olympics 2024) ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ನೂತನ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಸುಮಿತ್‌ 18 ಸ್ಥಾನ ಮೇಲೇರಿ 77ನೇ ರ್‍ಯಾಂಕಿಂಗ್‌ ಪಡೆದ ಕಾರಣ ಅವರಿಗೆ ಒಲಿಂಪಿಕ್ಸ್‌ ಅರ್ಹತೆ ಲಭಿಸಿತು.

ಭಾನುವಾರ ಜರ್ಮನಿಯಲ್ಲಿ ನಡೆದ ಹೀಲ್‌ಬ್ರಾನ್ ನೆಕರ್‌ಕಪ್‌ ಚಾಲೆಂಜರ್‌ ಫೈನಲ್​ನಲ್ಲಿ ಸುಮಿತ್‌ ಅವರು ಸ್ವಿಜರ್ಲೆಂಡ್‌ನ‌ ಅಲೆಕ್ಸಾಂಡರ್‌ ರಿಚರ್ಡ್ಸ್‌ ವಿರುದ್ಧ 6 -1, 6-7 (5), 6-3 ಅಂತರದ ಜಯ ಗಳಿಸಿ ಚಾಂಪಿಯನ್‌ ಆಗಿ ಮಿಂಚಿದ್ದರು. ಈ ಗೆಲುವಿನಿಂದಾಗಿ ಸುಮಿತ್‌ ರ್‍ಯಾಂಕಿಂಗ್‌ನಲ್ಲಿ ಭಾರೀ ಪ್ರಗತಿ ಕಂಡುಬಂದಿತ್ತು. ಇದೀಗ ಒಲಿಂಪಿಕ್ಸ್​ ಟಿಕೆಟ್​ ಕೂಡ ಪಡೆದಿದ್ದಾರೆ. ಸುಮಿತ್‌ ನಾಗಲ್‌ 2012ರ ಬಳಿಕ ಒಲಿಂಪಿಕ್ಸ್‌ ಟೆನಿಸ್‌ ಸಿಂಗಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 2012ರಲ್ಲಿ ಸೋಮದೇವ್‌ ದೇವವರ್ಮನ್‌ ಆಡಿದ್ದರು.

ಇದನ್ನೂ ಓದಿ Paris Olympics 2024: ಕೊನೆಗೂ ಪ್ಯಾರಿಸ್​ ಒಲಿಂಪಿಕ್ಸ್​ ಟಿಕೆಟ್​ ಪಡೆದ ಬಾಕ್ಸರ್​ ಅಮಿತ್‌ ಪಂಘಲ್‌

ವಯಸ್ಸು 40 ದಾಟಿದರೂ ಕೂಡ ಯುವ ಆಟಗಾರರು ಕೂಡ ನಾಚುವಂತ ಪ್ರದರ್ಶನ ತೋರುತ್ತಿರುವ ಕನ್ನಡಿಗ ಬೋಪಣ್ಣ ಕೂಡ ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಪುರುಷರ ಡಬಲ್ಸ್​ನಲ್ಲಿ ಅವರು ಸ್ಪರ್ಧಿಸಲಿದ್ದಾರೆ. ಅವರು ವಿಶ್ವ ಶ್ರೇಯಾಂಕದ 67ನೇ ಶ್ರೇಯಾಂಕದ ಶ್ರೀರಾಮ್ ಬಾಲಾಜಿ ಅವರನ್ನು ಒಲಿಂಪಿಕ್ಸ್‌ನಲ್ಲಿ ತಮ್ಮ ಜತೆಗಾರನಾಗಿ ಆಯ್ಕೆ ಮಾಡುವ ನಿರೀಕ್ಷೆಯಿದೆ.

44 ವರ್ಷದ ಬೋಪಣ್ಣ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಗೆದ್ದು ಕಳೆದ ವಾರ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದರು. ಬೋಪಣ್ಣ ಲಂಡನ್ 2012 ಗೇಮ್ಸ್ ಮತ್ತು ರಿಯೊ 2016 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಕಳೆದುಕೊಂಡಿದ್ದರು.

ಜುಲೈ 26ಕ್ಕೆ ಒಲಿಂಪಿಕ್ಸ್​ ಆರಂಭ

ಮಹತ್ವದ ಕ್ರೀಡಾಕೂಡವಾದ ಪ್ಯಾರಿಸ್ ಒಲಿಂಪಿಕ್ಸ್‌ನ(Paris Olympics 2024) ಉದ್ಘಾಟನಾ ಸಮಾರಂಭಕ್ಕೆ(paris olympics 2024 opening ceremony) ದಿನಾಂಕ ನಿಗದಿಯಾಗಿದೆ. ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮ ನೆರವೇರಲಿದೆ.

ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಚಿನ್ನ ಗೆದ್ದ ಬಾಕ್ಸರ್​ಗಳಿಗೆ ಭಾರೀ ನಗದು ಪ್ರಶಸ್ತಿ ಘೋಷಣೆ


ಕೆಲವು ತಿಂಗಳ ಹಿಂದೆ ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ಟ್ರ್ಯಾಕ್ ಮತ್ತು ಫೀಲ್ಡ್(track & field gold medallists) ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡುವುದಾಗಿ ಪ್ರಕಟಿಸಿತ್ತು. ಇದೀಗ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (International Boxing Association) ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದು, ಚಿನ್ನ ಗೆಲ್ಲುವ ಪ್ರತಿಯೊಬ್ಬ ಬಾಕ್ಸರ್​ಗಳಿಗೆ 41.68 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಜತೆಗೆ ಕೋಚ್‌, ರಾಷ್ಟ್ರೀಯ ತಂಡಗಳಿಗೆ 10 ಲಕ್ಷ ನೀಡುವುದಾಗಿಯೂ ಪ್ರಕಟಿಸಿದೆ. ಆದರೆ, 2020ರ ಟೋಕಿಯೊ ಒಲಿಂಪಿಕ್ಸ್‌ ಬಾಕ್ಸಿಂಗ್ ಸ್ಪರ್ಧೆಗಳನ್ನು ಐಬಿಎ(IBA) ನೆರವಿಲ್ಲದೇ ಐಒಸಿಯೇ ಸಂಘಟಿಸಿತ್ತು. ಕ್ರೀಡಾ ಸಂಸ್ಥೆಗಳು ನೀಡುವ ಬಹುಮಾನ ಹಣಕ್ಕೂ ಐಒಸಿ ಸಮ್ಮತಿ ನೀಡಿಲ್ಲ.

Exit mobile version