Site icon Vistara News

Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ

Paris Olympics 2024

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​​ ನಲ್ಲಿ 2024ರಲ್ಲಿ (Paris Olympics 2024) ಭಾರತವನ್ನು ಪ್ರತಿನಿಧಿಸುತ್ತಿರುವ ಒಂಬತ್ತು ಮಂದಿ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಜೂರು ಮಾಡಿದ್ದಾರೆ. ಕರ್ನಾಟಕ ಒಲಿಂಪಿಕ್​ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ಡಾ.ಕೆ.ಗೋವಿಂದರಾಜು ಪ್ರೋತ್ಸಾಹದನ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹಣ ಮಂಜೂರು ಮಾಡಿದ್ದಾರೆ.

ಜುಲೈ 26 ರಿಂದ ಆಗಸ್ಟ್ 11ರ ವರೆಗೆ ಪ್ಯಾರೀಸ್ ನಲ್ಲಿ ಒಲಂಪಿಕ್ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ರಾಜ್ಯದ ಪರವಾಗಿ ಮಹಿಳಾ ಡಬಲ್ಸ್ ಬ್ಯಾಡ್ಮಿಂಟನ್ ನಲ್ಲಿ ಕುಮಾರಿ ಅಶ್ವಿನಿ ಪೊನ್ನಪ್ಪ, ಮಹಿಳಾ ಗಾಲ್ಫ್ ನಲ್ಲಿ ಕುಮಾರಿ ಅದಿತಿ ಅಶೋಕ್, ಮಹಿಳಾ ಫ್ರೀಸ್ಟೈಲ್ ಈಜು ಸ್ಫರ್ಧೆಯಲ್ಲಿ ಕುಮಾರಿ ಧಿನಿಧಿ ದೇಸಿಂಘು , ಮಿಕ್ಸೆಡ್ ರಿಲೇ ಓಟದಲ್ಲಿ ಎಂ.ಆರ್.ಪೂವಮ್ಮ, ಟೇಬಲ್ ಟೆನ್ನಿಸ್ ನಲ್ಲಿ ಕುಮಾರಿ ಅರ್ಚನಾ ಕಾಮತ್, ಪುರುಷರ ಈಜು ಸ್ಫರ್ಧೆಯಲ್ಲಿ ಶ್ರೀಹರಿ ನಟರಾಜ್, ಪುರುಷರ ಟೆನ್ನಿಸ್ ಡಬಲ್ಸ್ ನಲ್ಲಿ ರೋಹನ್ ಭೋಪಣ್ಣ, ಪುರುಷರ 71 ಕೆಜಿ ಬಾಕ್ಸಿಂಗ್ ನಲ್ಲಿ ನಿಶಾಂತ್ ದೇವ್, ಮಿಕ್ಸೆಡ್ ರಿಲೇ ಓಟದಲ್ಲಿ ಮಿಜೋ ಚಾಕೋ ಅವರುಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಇದನ್ನೂ ಓದಿ: Paris Olympic 2024 : ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್​ ಕರ್ಣಂ ಮಲ್ಲೇಶ್ವರಿ ಸಾಧನೆಯ ವಿವರ ಇಲ್ಲಿದೆ

ಈ ಒಂಬತ್ತು ಮಂದಿಗೆ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ನಿಂದ ಪ್ರತ್ಯೇಕ ನೆರವು ದೊರೆಯಲಿದೆ ಎಂದು ತಿಳಿಸಿರುವ ಡಾ.ಕೆ.ಗೋವಿಂದರಾಜು ಅವರು ಕ್ರೀಡಾಪಟುಗಳಿಗೆ ಸರ್ಕಾರದ ನೆರವು ದೊರಕಿಸಿಕೊಟ್ಟು ಪ್ರೋತ್ಸಾಹಿಸಿದ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಟ್ರ್ಯಾಕ್‌ & ಫೀಲ್ಡ್ ವಿಭಾಗದಲ್ಲಿ ಚಿನ್ನ ಗೆದ್ದರೆ ಅಥ್ಲೀಟ್​ಗಳಿಗೆ ಸಿಗಲಿದೆ ಭಾರೀ ಮೊತ್ತದ ನಗದು ಬಹುಮಾನ

ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್(Paris Olympics)​ ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಒಲಿಂಪಿಕ್ ಕೂಟದಲ್ಲಿ ನಗದು ಪ್ರಶಸ್ತಿ ನೀಡಲಾಗುತ್ತಿದೆ. ಟ್ರ್ಯಾಕ್ ಮತ್ತು ಫೀಲ್ಡ್(track & field gold medallists) ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡಲು ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ತೀರ್ಮಾನಿಸಿದೆ.

ಟೋಕಿಯೊ ಒಲಿಂಪಿಕ್​ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್​ ಚೋಪ್ರಾ ಅವರು ಈ ಬಾರಿ ಚೆನ್ನ ಗೆದ್ದರೆ ಅವರಿಗೆ 50,000 ಅಮೆರಿಕನ್‌ ಡಾಲರ್‌ ಬಹುಮಾನ ದೊರೆಯಲಿದೆ. ನೀರಜ್​ ಅವರು ಟ್ರ್ಯಾಕ್‌ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಹೊಂದಿದ್ದು ಈ ಬಾರಿಯೂ ಅವರು ಚಿನ್ನದ ಪದಕ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ.

ಈ ಬಾರಿ ಚಿನ್ನ ಗೆದ್ದ ಅಥ್ಲೀಟ್​ಗಳಿಗೆ ಮಾತ್ರ ನಗುದು ಬಹುಮಾನ ದೊರಕಲಿದೆ. 2028ರಲ್ಲಿ ಲಾಸ್‌ ಏಂಜಲಿಸ್​ನಲ್ಲಿ ನಡೆಯುವ ಒಲಿಂಪಿಕ್ ಕೂಟದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಎಲ್ಲರಿಗೂ ನಗದು ಪ್ರಶಸ್ತಿ ನೀಡುವುದಾಗಿವಿಶ್ವ ಅಥ್ಲೆಟಿಕ್ ಸಂಸ್ಥೆ ಘೋಷಿಸಿದೆ. ಡೈಮಂಡ್ ಲೀಗ್, ಕಾಂಟಿನೆಂಟಲ್ ಕಪ್‌ಗಳಲ್ಲಿ ಪದಕ ಗೆದ್ದಾಗ ನಗದು ಬಹುಮಾನ ನೀಡಲಾಗುತ್ತಿತ್ತು. ಆದರೆ ಒಲಿಂಪಿಕ್ಸ್​ ಬಹುಮಾನದಲ್ಲಿ ಈ ಸೌಕರ್ಯ ಇರಲಿಲ್ಲ. ಇದೀಗ ಒಲಿಂಪಿಕ್ಸ್​ನಲ್ಲಿಯೂ ಈ ನಿಯಮ ಬಂದಿರುವುದು ಸಂತಸ ತಂದಿದೆ ಎಂದು ಡಬ್ಲ್ಯುಎ ಅಧ್ಯಕ್ಷ ಸೆಬಾಸ್ಟಿಯನ್ ಕೊ ಹೇಳಿದ್ದಾರೆ.

Exit mobile version