Site icon Vistara News

Paris Olympics 2024: ಒಲಿಂಪಿಕ್ಸ್​ಗೆ ಅರ್ಹತೆ ಪಡೆದ​ ರಾಜ್ಯದ ಇಬ್ಬರು ಸ್ವಿಮ್ಮರ್​ಗಳು

Paris Olympics 2024

Paris Olympics 2024: Srihari Nataraj and Dhinidhi Desinghu selected to represent India via Universality Quota

ಬೆಂಗಳೂರು: ಕರ್ನಾಟಕದ ಸ್ವಿಮ್ಮರ್​ಗಳಾದ ಶ್ರೀಹರಿ ನಟರಾಜನ್‌(Srihari Nataraj) ಹಾಗೂ ಧಿನಿಧಿ ದೇಸಿಂಘು(Dhinidhi Desinghu) ಮುಂದಿನ ತಿಂಗಳು ಆರಂಭಗೊಳ್ಳಲಿರುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(Paris Olympics 2024) ಭಾರತವನ್ನು ಪ್ರತಿನಿಧಿಸಲಿದ್ದಾರೆ. ಶ್ರೀಹರಿಗೆ ಇದು ಸತತ 2ನೇ ಒಲಿಂಪಿಕ್ಸ್​ ಕ್ರೀಡಾಕೂಡವಾಗಿದೆ. 14 ವರ್ಷದ ಧಿನಿಧಿ ಇದೇ ಮೊದಲ ಒಲಿಂಪಿಕ್ಸ್ ಸ್ಫರ್ದೆಯಾಗಿದೆ. ಈ ಇಬ್ಬರಿಗೂ ಒಲಿಂಪಿಕ್ಸ್​ ಅರ್ಹತೆ ಸಿಕ್ಕಿರುವ ವಿಚಾರವನ್ನು ಭಾರತೀಯ ಈಜು ಫೆಡರೇಶನ್ (ಎಸ್ ಎಫ್‌ಐ) ಬುಧವಾರ ಖಚಿತಪಡಿಸಿದೆ. ಯುನಿವರ್ಸಲಿಟಿ ಕೋಟಾದಲ್ಲಿ ಇವರಿಗೆ ಈ ಅರ್ಹತೆ ಲಭಿಸಿದೆ.

2021ರ ಟೋಕಿಯೊ ಒಲಿಂಪಿಕ್ಸ್‌ ಶ್ರೀಹರಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಮೊದಲ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ಇದೀಗ ದ್ವಿತೀಯ ಪ್ರಯತ್ನದಲ್ಲಿ ಐತಿಹಾಸಿಕ ಪದಕವೊಂದನ್ನು ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ. ‘ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವುದು ಸಂತಸ ತಂದಿದೆ‘ ಎಂದು 23 ವರ್ಷದ ಶ್ರೀಹರಿ ಹೇಳಿದರು. ಅವರು 100 ಮೀ, ಬ್ಯಾಕ್‌ಸ್ಟೋಕ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಆಯ್ಕೆಯಾದ ಕಿರಿಯ ಈಜುಪಟು ಎನಿಸಿಕೊಂಡಿರುವ ಧಿನಿಧಿ 200 ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಒಲಿಂಕ್ಸ್​ನಲ್ಲಿ ದೇಶವನ್ನು ಪ್ರತಿನಿಧಿಸುವುದು ಜೀವಮಾನ ಶ್ರೇಷ್ಠ ಅನುಭವ ಎಂದು ಧಿನಿಧಿ ಹೇಳಿದರು.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕರ್ನಾಟಕದ ಅದಿತಿ ಅಶೋಕ್

ಕಳೆದ ವರ್ಷ ಚೀನಾದ ಹ್ಯಾಂಗ್ ಝೂ ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಪದಕ ಗೆದ್ದ ಕರ್ನಾಟಕದ ಗಾಲ್ಫರ್ ಅದಿತಿ ಅಶೋಕ್(Aditi Ashok) ಅವರು ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ಗೆ(Paris Olympics 2024) ಅರ್ಹತೆ ಪಡೆದಿದ್ದಾರೆ. ಇವರ ಜತೆಗೆ ದೀಕ್ಷಾ ದಾಗರ್(Diksha Dagar) ಕೂಡ ಅರ್ಹತೆ ಪಡೆದಿದ್ದಾರೆ. ವಿಶ್ವ ರ್‍ಯಾಂಕಿಂಗ್ ಮೂಲಕ ಉಭಯ ಆಟಗಾರ್ತಿಯರಿಗೆ ಒಲಿಂಪಿಕ್ಸ್‌ ಟಿಕೆಟ್​ ಲಭಿಸಿದೆ.

ನಾಲ್ಕು ಮಂದಿಯ ಭಾರತದ ಗಾಲ್ಫ್​ ತಂಡದಲ್ಲಿ 24ನೇ ರ್‍ಯಾಂಕ್‌ನೊಡನೆ ಅದಿತಿ ಅರ್ಹತೆ ಪಡೆದರೆ, ದೀಕ್ಷಾ 40ನೇ ರ್‍ಯಾಂಕ್‌ನೊಡನೆ ಅವಕಾಶ ಪಡೆದರು. ಪುರುಷರ ವಿಭಾಗದಲ್ಲಿ ಅಗ್ರಮಾನ್ಯ ಗಾಲ್ಫರ್ ಶುಭಂಕರ್ ಶರ್ಮಾ ಮತ್ತು ಗಗನ್‌ಜೀತ್‌ ಭುಲ್ಲರ್ ಈಗಾಗಲೇ ಅರ್ಹತೆ ಪಡೆದಿದ್ದಾರೆ.

ಇದನ್ನೂ ಓದಿ Paris Olympics 2024: ಒಲಿಂಪಿಕ್ಸ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಹಾಕಿ ಇಂಡಿಯಾ

ಬೆಂಗಳೂರಿನ ಅದಿತಿ ಅಶೋಕ್ ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ಈ ಕ್ರೀಡಾಕೂಟದ ಗಾಲ್ಫ್ ಕ್ರೀಡೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದರು. ಮುಂದಿನ ತಿಂಗಳು ನಡೆಯುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ ಅವರು ಐತಿಹಾಸಿಕ ಚಿನ್ನ ಗೆಲ್ಲುವಂತಾಗಲಿ ಎನ್ನುವುದು ಭಾರತೀಯರ ಮತ್ತು ಕನ್ನಡಿಗ ಹಾರೈಕೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೂ ಅದಿತಿ ಅಮೋಘ ಪ್ರದರ್ಶನ ತೋರಿ 4 ನೇ ಸ್ಥಾನ ಗಳಿಸಿ ದೇಶದ ಗಮನ ಸೆಳೆದಿದ್ದರು. 27 ವರ್ಷ ವಯಸ್ಸಿನ ಶರ್ಮಾ ಮತ್ತು 36 ವರ್ಷ ವಯಸ್ಸಿನ ಭುಲ್ಲರ್ ಅವರಿಗೆ ಇದು ಮೊದಲ ಒಲಿಂಪಿಕ್ಸ್‌ ಆಗಿದೆ.

Exit mobile version