ನೋಮಿ(ಜಪಾನ್): ಭಾರತದ 20 ಕಿಮೀ. ರೇಸ್ವಾಕರ್ಗಳಾದ ವಿಕಾಸ್ ಸಿಂಗ್(Vikash Singh) ಮತ್ತು ಪರಮ್‌ಜೀತ್ ಸಿಂಗ್ ಬಿಸ್ಟ್(Paramjeet Bisht) ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್(Paris Olympics 2024) ಮತ್ತು ಈ ವರ್ಷದ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಿದ್ದಾರೆ.
ಪುರುಷರ ಓಪನ್ ವಿಭಾಗದ ಏಷ್ಯನ್ ಚಾಂಪಿಯನ್‌ಶಿಪ್‌ನ ಸ್ಪರ್ಧೆಯಲ್ಲಿ ವಿಕಾಸ್ ಮತ್ತು ಪರಮ್‌ಜೀತ್ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ವಿಕಾಸ್ 1 ತಾಸು 20 ನಿಮಿಷ 5 ಸೆಕೆಂಡುಗಳಲ್ಲಿ ಗುರಿ ತಲುಪಿದರೆ, ಪರಮ್‌ಜೀತ್ 1 ತಾಸು 20 ನಿ. 8 ಸೆ.ಗಳಲ್ಲಿ ಗುರಿ ತಲುಪಿದರು. ಚೀನಾದ ಕಿಯಾನ್ ಹೈಫೆಂಗ್
(1 ತಾಸು 19.09 ನಿ.) ಅಗ್ರಸ್ಥಾನ ಗಳಿಸಿದರು.
ಇದನ್ನೂ ಓದಿ 20km Race Walk: ಚಿನ್ನ ಗೆದ್ದ ಪ್ರಿಯಾಂಕಾ, ಅಕ್ಷದೀಪ್‌ಗೆ ಒಲಿಂಪಿಕ್ಸ್ ಟಿಕೆಟ್
ಈಗಾಗಲೇ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಿರುವ ಭಾರತದ ಅಕ್ಷದೀಪ್ ಸಿಂಗ್ ಅವರು ಈ ಟೂರ್ನಿಯಲ್ಲಿ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಅವರು ಈ ರೇಸ್ ಕ್ರಮಿಸಲು 1 ತಾಸು 20 ನಿ. 57ಸೆ. ಪಡೆದರು. ಮಹಿಳೆಯರ ಓಪನ್ ವಿಭಾಗದಲ್ಲಿ ಪ್ರಿಯಾಂಕಾ ಗೋಸ್ವಾಮಿ ಇಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. ಇವರು ಕೂಡ ಈಗಾಗಲೇ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಳಿಸಿದ್ದಾರೆ. ಆದರೆ ಮುನಿತಾ ಪ್ರಜಾಪತಿ ಮತ್ತು ಭಾವನಾ ಜಾಟ್ ಅವರು ಅರ್ಹತೆ ಪಡೆಯುವಲ್ಲಿ ವಿಫಲರಾದರು.