ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್(Paris Olympics) ಪುರುಷರ 57 ಕೆ.ಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಭಾರತದ ಅಮನ್ ಸೆಹ್ರಾವತ್(Aman Sehrawat) ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದು ಪದಕ ಗೆಲ್ಲುವ ಆಸೆ ಜೀವಂತವಿರಿಸಿದ್ದಾರೆ. ಗುರುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ 21 ವರ್ಷದ ಅಮನ್ ನಾರ್ತ್ ಮ್ಯಾಸೆಡೋನಿಯಾದ ವ್ಲಾಡಿಮಿರ್ ಎಗೊರೊವ್ ವಿರುದ್ಧ 10-0 ಅಂತರದ ಭರ್ಜರಿ ಗೆಲುವು ದಾಖಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಇಂದೇ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಲ್ಬೆನಿಯಾದ ಝೆಲಿಮ್ಖಾನ್ ಅಬಕರೋವ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಮಹಿಳಾ ವಿಭಾಗದ 57 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಅಂಶು ಮಲಿಕ್ ಸೋತು ನಿರಾಸೆ ಮೂಡಿಸಿದ್ದಾರೆ.
ಮಹಿಳೆಯರ 100 ಮೀ. ಹರ್ಡಲ್ಸ್‌ನ ರೆಪೆಷಾಜ್ ಸುತ್ತಿನಲ್ಲಿ ಜ್ಯೋತಿ ಯರ್ರಾಜಿ ವಿಫಲರಾಗಿದ್ದಾರೆ. 13.17 ಸೆಕೆಂಡುಗಳಲ್ಲಿ ನಾಲ್ಕನೇಯವರಾಗಿ ಜ್ಯೋತಿ ಗುರಿ ಮುಟ್ಟಿದರು. ಆ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ.
ಕೆಲವೇ ಗಂಟೆಗಳಲ್ಲಿ ಹಾಕಿ ಪಂದ್ಯ
44 ವರ್ಷಗಳ ಬಳಿಕ ಒಲಿಂಪಿಕ್ಸ್(Paris Olympics) ಹಾಕಿಯಲ್ಲಿ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡ ಭಾರತ ಪುರುಷರ ಹಾಕಿ ತಂಡ ಇಂದು ನಡೆಯುವ ಕಂಚಿನ ಪದಕದ ಸ್ಪರ್ಧೆಯಲ್ಲಿ ಸ್ಪೇನ್(india vs spain) ವಿರುದ್ಧ ಸೆಣಸಾಡಲಿದೆ. ಪಂದ್ಯ ಸಂಜೆ 5.30ಕ್ಕೆ ಆರಂಭಗೊಳ್ಳಲಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಕಂಚಿನ ಪದಕ ಗೆದ್ದು 41 ವರ್ಷಗಳ ಬಳಿಕ ಪದಕದ ಬರ ನೀಗಿಸಿತ್ತು. ಈ ಬಾರಿಯೂ ಕಂಚಿಗೆ ತೃಪ್ತಿಪಡಬೇಕಾದ ಸ್ಥಿತಿ ಎದುರಾಗಿದೆ. ಅದು ಕೂಡ ಇಂದು ಗೆದ್ದರೆ ಮಾತ್ರ.
ಈ ಬಾರಿಯ ಕೂಟದಲ್ಲಿ ಭಾರತ ಕ್ವಾರ್ಟರ್ ಫೈನಲ್ ತನಕ ತೋರಿದ್ದ ಪ್ರದರ್ಶನವನ್ನು ಕಂಡಾಗ ಭಾರತ ನಿಶ್ಚಿತವಾಗಿ ಚಿನ್ನ ಗೆಲ್ಲಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅಲ್ಲದೆ ಕಳೆದ ಬಾರಿಯ ಚಾಂಪಿಯನ್ ಮತ್ತು ರನ್ನರ್ ಅಪ್ಗಳು ಕೂಡ ಕ್ವಾರ್ಟರ್ ಫೈನಲ್ನಲ್ಲಿಯೇ ಮುಗ್ಗರಿಸಿತ್ತು. ಹೀಗಾಗಿ ಭಾರತಕ್ಕೆ ಚಿನ್ನ ಗೆಲ್ಲುವ ಉತ್ತಮ ಅವಕಾಶ ಕೂಡ ಇತ್ತು. ಆದರೆ, ಸೆಮಿಫೈನಲ್ನಲ್ಲಿ ತನಗಿಂತ ಬಲಿಷ್ಟವಲ್ಲದ ಜರ್ಮನಿ ವಿರುದ್ಧ ಹಲವು ತಪ್ಪುಗಳನ್ನು ಮಾಡಿದ ಕಾರಣ 3-2 ಗೋಲುಗಳ ಅಂತರದಿಂದ ಆಘಾತಕಾರಿ ಸೋಲು ಕಂಡು ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು.