ಪ್ಯಾರಿಸ್: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ(Paris Olympics) ಭಾಗಿಯಾಗಿರುವ ಭಾರತದ ಏಕೈಕ ಪುರುಷ ಕುಸ್ತಿಪಟು, 21 ವರ್ಷದ ಅಮನ್ ಸೆಹ್ರಾವತ್(Aman Sehrawat) ಇಂದು ನಡೆಯುವ ಕಂಚಿನ ಪದಕದ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಎದುರಾಳಿ ಡೇರಿಯನ್ ಕ್ರೂಜ್. ಈ ಪಂದ್ಯ ರಾತ್ರಿ 10.45ಕ್ಕೆ ನಡೆಯಲಿದೆ. ನಿನ್ನೆ(ಗುರುವಾರ) ನಡೆದಿದ್ದ ಪ್ರೀ ಕ್ವಾರ್ಟರ್ ಮತ್ತು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಗೆಲುವು ಸಾಧಿಸಿದ್ದ ಅಮನ್ ಬಳಿಕ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ನ ರೀ ಹಿಗುಚಿ ವಿರುದ್ಧ ಸೋಲು ಕಂಡಿದ್ದರು. ಹಿಗುಚಿ ರಿಯೊ ಒಲಿಂಪಿಕ್ಸ್‌ನಲ್ಲಿ (2016) ಬೆಳ್ಳಿ ಗೆದ್ದ ಸಾಧಕನಾಗಿದ್ದರು.
ಗುರುವಾರ ನಡೆದಿದ್ದ ಪ್ರಿ-ಕಾರ್ಟರ್ ಫೈನಲ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ತಾಂತ್ರಿಕ ಮೇಲುಗೈ ಸಾಧಿಸುವ ಮೂಲಕ ಜಯ ಸಾಧಿಸಿದ್ದ ಅಮನ್, ಸೆಮಿಫೈನಲ್‌ನಲ್ಲಿ ತಾಂತ್ರಿಕ ಹಿನ್ನಡೆಯಿಂದಲೇ ಸೋಲನುಭವಿಸಿದ್ದರು. 57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಕಳೆದ ಟೋಕಿಯೊ ಬೆಳ್ಳಿ ಪದಕ ಗೆದ್ದಿದ್ದ ರವಿ ದಹಿಯಾ ಅವರನ್ನು ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಮಣಿಸುವ ಮೂಲಕ ಅಮನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಇದೀಗ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಕಂಚಿನ ಪದಕ ನಿರೀಕ್ಷೆಯಲ್ಲಿದ್ದಾರೆ.
ಇಂದಿನ ವೇಳಾಪಟ್ಟಿ
ಮಧ್ಯಾಹ್ನ 12:30: ಗಾಲ್ಫ್ – ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್ 2 ರಲ್ಲಿ ದೀಕ್ಷಾ ದಾಗರ್ ಮತ್ತು ಅದಿತಿ ಅಶೋಕ್.
ಮಧ್ಯಾಹ್ನ 2:10: ಅಥ್ಲೆಟಿಕ್ಸ್ – ಮಹಿಳೆಯರ 4×400 ಮೀಟರ್ ರಿಲೇ ಹೀಟ್ಸ್.
ಭಾರತದ ಜ್ಯೋತಿಕಾ ಶ್ರೀ ದಂಡಿ, ಕಿರಣ್ ಪಹಲ್, ಎಂ.ಪೂವಮ್ಮ ರಾಜು ಮತ್ತು ವಿಠ್ಠಲ ರಾಮರಾಜ್ ಕಣಕ್ಕಿಳಿಯಲಿದ್ದಾರೆ.
ಮಧ್ಯಾಹ್ನ 2:35: ಅಥ್ಲೆಟಿಕ್ಸ್ – ಪುರುಷರ 4×400 ಮೀಟರ್ ರಿಲೇ ಹೀಟ್ಸ್.
ಅಮೋಜ್ ಜಾಕೋಬ್, ರಾಜೇಶ್ ರಮೇಶ್, ಸಂತೋಷ್ ಕುಮಾರ್ ತಮಿಳರಸನ್ ಮತ್ತು ಮುಹಮ್ಮದ್ ಅಜ್ಮಲ್ ವರಿಯತೋಡಿ ಸೆಮಿಫೈನಲ್ ಗೆ ಅರ್ಹತೆ ಪಡೆಯುವ ಗುರಿ ಹೊಂದಿದ್ದಾರೆ.
ಮಧ್ಯಾಹ್ನ 2:30: ಮಹಿಳೆಯರ 57 ಕೆ.ಜಿ ಫ್ರೀಸ್ಟೈಲ್ನಲ್ಲಿ ಕುಸ್ತಿಯಲ್ಲಿ ಅನ್ಶು ಮಲಿಕ್ . ಅನ್ಶು ಅವರ ಅದೃಷ್ಟ ಮಾಜಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಹೆಲೆನ್ ಮರೌಲಿಸ್ ಅವರ ವಿರುದ್ಧ ಗೆಲ್ಲುವ ಮೂಲಕ ನಿರ್ಧಾರವಾಗಲಿದೆ.
ರಾತ್ರಿ 11:10: ಪುರುಷರ 57 ಕೆ.ಜಿ ಫ್ರೀಸ್ಟೈಲ್ ಕಂಚಿನ ಅಥವಾ ಚಿನ್ನದ ಪದಕ ಪಂದ್ಯದಲ್ಲಿ (ಪದಕ ಸ್ಪರ್ಧೆಗಳು) ಅಮನ್ ಸೆಹ್ರಾವತ್.
5 ಪದಕ ಗೆದ್ದ ಭಾರತ
ಭಾರತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಸದ್ಯ 5 ಪದಕ ಗೆದ್ದು ಪದಕ ಪಟ್ಟಿಯಲ್ಲಿ 64ನೇ ಸ್ಥಾನದಲ್ಲಿದೆ. 1, ಬೆಳ್ಳಿ ಮತ್ತು 4 ಕಂಚುಗಳು ಒಳಗೊಂಡಿದೆ. ಇಂದು ನಡೆಯುವ ಪುರುಷರ ಕುಸ್ತಿಯಲ್ಲಿ ಅಮನ್ ಕಂಚು ಗೆದ್ದರೆ ಪದಕದ ಸಂಖ್ಯೆ 6ಕ್ಕೆ ಏರಲಿದೆ.