ಪ್ಯಾರಿಸ್: ಎರಡು ಬಾರಿಯ ವಿಶ್ವ ಚಾಂಪಿಯನ್, ಬಾಕ್ಸರ್ ನಿಖತ್ ಜರೀನ್(Nikhat Zareen) ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅಧಿಕಾರಯುತ ಗೆಲುವು ಸಾಧಿಸಿ ಶುಭಾರಂಭ ಕಂಡಿದ್ದಾರೆ. ಮಹಿಳೆಯರ 50 ಕೆಜಿ ಬಾಕ್ಸಿಂಗ್(Paris Olympics boxing) ವಿಭಾಗದ 32ರ ಘಟ್ಟದ ಪಂದ್ಯದಲ್ಲಿ ಜರ್ಮನಿಯ ಮ್ಯಾಕ್ಸಿ ಕ್ಯಾರಿನಾ ಕ್ಲೋಟ್ಜರ್ ಅವರನ್ನು 5-0 ಅಂತರದಿಂದ ಮಣಿಸಿ ಅಂತಿಮ 16ರ ಸುತ್ತಿಗೇರಿದ್ದಾರೆ. ಆದರೆ ಈ ಸುತ್ತಿನಲ್ಲಿ ಅವರಿಗೆ ಅಗ್ರ ಶ್ರೇಯಾಂಕದ, ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಚೀನಾದ ವು ಯು( Chinese Wu Yu) ಅವರ ಕಠಿಣ ಸವಾಲು ಎದುರಾಗಿದೆ. ಈ ಪಂದ್ಯ ಗುರುವಾರ ನಡೆಯಲಿದೆ.
ನಿಖತ್ ಅವರು 16ರ ಘಟ್ಟದ ಪಂದ್ಯದಲ್ಲಿ ಚೀನಿ ಬಾಕ್ಸರ್ ಸವಾಲು ಮೆಟ್ಟಿ ನಿಂತರೆ ಕ್ವಾರ್ಟರ್-ಫೈನಲ್‌ನಲ್ಲಿ ಥಾಯ್ಲೆಂಡ್‌ನ ಚುತಾಮತ್ ರಕ್ಸತ್ ಅಥವಾ ಉಜ್ಬೇಕಿಸ್ತಾನ್‌ನ ಸಬೀನಾ ಬೊಬೊಕುಲೋವಾ ಅವರನ್ನು ಎದುರಿಸಬಹುದು. ಇಂದು ನಡೆದ 32ರ ಘಟ್ಟದ ಪಂದ್ಯದಲ್ಲಿ ನಿಖರ್ ಅವರ ಆಕ್ರಮಣಕಾರಿ ಹೋರಾಟ ಮತ್ತು ಅಚಲವಾದ ಆತ್ಮವಿಶ್ವಾಸವನ್ನು ನೋಡುವಾಗ ಅವರು ಮುಂದಿನ ಪಂದ್ಯದಲ್ಲಿಯೂ ಗೆಲ್ಲುವ ಸೂಚನೆ ಲಭಿಸಿದೆ.
ಶನಿವಾರ ತಡರಾತ್ರಿ ನಡೆದಿದ್ದ ಮಹಿಳೆಯರ 54 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ(Paris Olympics boxing) ಭಾರತದ ಬಾಕ್ಸರ್ ಪ್ರೀತಿ ಪವಾರ್(Preeti Pawar) ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಪ್ರೀತಿ ಕೂಡ ವಿಯೆಟ್ನಾಂನ ಪ್ರತಿಸ್ಪರ್ಧಿ ವೋ ಥಿ ಕಿಮ್ ಅನ್ಹ್(Vo Thi Kim Anh) ವಿರುದ್ಧ 5-0 ಅಂತರದ ಗೆಲುವು ಸಾಧಿಸಿದ್ದರು.
ಚೊಚ್ಚಲ ಬಾರಿಗೆ ಒಲಿಂಪಿಕ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಪ್ರೀತಿ ತಮ್ಮ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದ್ದಾರೆ. ಕಳೆದ ಏಷ್ಯನ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ತೋರಿದ್ದರು. ಹರಿಯಾಣದ 20 ವರ್ಷದ ಈ ಬಾಕ್ಸರ್ ಮಂಗಳವಾರ ನಡೆಯುವ 16ನೇ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾದ ಮಾರ್ಕೆಲಾ ಯೆನಿ ವಿರುದ್ಧ ಸೆಣಸಲಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಮುನ್ನ ಪ್ರೀತಿ ಅನಾರೋಗ್ಯಕ್ಕೊಳಗಾಗಿದ್ದರು. ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದರೂ ಕೂಡ ಮೊದಲ ಸುತ್ತಿನಲ್ಲಿ ಅವರು ನಡೆಸಿದ ಹೋರಾಟ ಮತ್ತು ಅಸಾಧಾರಣ ಧೈರ್ಯವನ್ನು ಮೆಚ್ಚಲೇ ಬೇಕು. ಎದುರಾಳಿಗೆ ಒಂದಕ್ಕವನ್ನು ಕೂಡ ಬಿಟ್ಟುಕೊಡದೆ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಅಧಿಕಾರಯುತ ಗೆಲುವು ತಮ್ಮದಾಗಿಸಿಕೊಂಡರು.
ಇದನ್ನೂ ಓದಿ Paris Olympics Shooting: ಭಾರತಕ್ಕೆ ಒಲಿಯಿತು ಮೊದಲ ಪದಕ; ಕಂಚು ಗೆದ್ದ ಶೂಟರ್ ಮನು ಭಾಕರ್
ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಬಾಲರಾಜ್
ಭಾನುವಾರ ಬೆಳಗ್ಗೆ ನಡೆದಿದ್ದ ರೋಯಿಂಗ್ ಸ್ಪರ್ಧೆಯಲ್ಲಿ(Paris Olympics 2024) ಭಾರತದ ಏಕೈಕ ಭರವಸೆ ಎನಿಸಿಕೊಂಡಿರುವ ಬಾಲರಾಜ್ ಪನ್ವರ್(Rower Balraj Panwar) ಇಂದು ನಡೆದ ಪುರುಷರ ಸಿಂಗಲ್ಸ್ ಸ್ಕಲ್ಸ್ ವಿಭಾಗದ ರಿಪಿಚೇಜ್ ಸುತ್ತಿನಲ್ಲಿ 7 ನಿಮಿಷ 12.41 ಸೆಂಕಡ್ನಲ್ಲಿ ಗುರಿ ಮುಟ್ಟಿ 2ನೇ ಸ್ಥಾನ ಪಡೆಯುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಪದಕದಾಸೆಯನ್ನು ಜೀವಂತವಿರಿಸಿದ್ದಾರೆ. ರಿಪಿಚೇಜ್ ಸುತ್ತಿನಲ್ಲಿ ಅಗ್ರ 2 ಸ್ಥಾನ ಪಡೆದ ಆಟಗಾರರಿಗೆ ಕ್ವಾರ್ಟರ್ ಫೈನಲ್ ಅರ್ಹತೆ ಲಭಿಸುತ್ತದೆ.
7 ನಿಮಿಷ 10 ಸೆಂಕಡ್ನಲ್ಲಿ ಗುರಿ ಮುಟ್ಟಿದ ಮೊನಕೊ ದೇಶದ ಕ್ವೆಂಟಿನ್ ಆಂಟೊಗ್ನೆಲ್ಲಿ ಮೊದಲ ಸ್ಥಾನ ಪಡೆದರು. ಕೇವಲ 2 ಸೆಂಕಡ್ಗಳ ಅಂತರದಲ್ಲಿ ಭಾರತದ ನಾವಿಕ ಬಾಲರಾಜ್ ಮೊದಲ ಸ್ಥಾನದಿಂದ ವಂಚಿತರದಾದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದರೆ ಐತಿಹಾಸಿಕ ಪದಕವೊಂದು ಖಾತ್ರಿಯಾಗಲಿದೆ.