ಪ್ಯಾರಿಸ್: ಒಲಿಂಪಿಕ್ ಕ್ರೀಡಾಕೂಟದಲ್ಲಿ ಶನಿವಾರ ತಡರಾತ್ರಿ ನಡೆದಿದ್ದ ಮಹಿಳೆಯರ 54 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ(Paris Olympics boxing) ಭಾರತದ ಬಾಕ್ಸರ್ ಪ್ರೀತಿ ಪವಾರ್(Preeti Pawar) ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪ್ರೀತಿ ಅವರ ಪವರ್ ಪಂಚ್ಗಳಿಗೆ ತಡೆಯೊಡ್ಡುವಲ್ಲಿ ಸಂಪೂರ್ಣ ವಿಫಲರಾದ ವಿಯೆಟ್ನಾಂನ ಪ್ರತಿಸ್ಪರ್ಧಿ ವೋ ಥಿ ಕಿಮ್ ಅನ್ಹ್(Vo Thi Kim Anh) 0-5 ಅಂತರದ ಸೋಲು ಕಂಡರು.
ಚೊಚ್ಚಲ ಬಾರಿಗೆ ಒಲಿಂಪಿಕ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಪ್ರೀತಿ ತಮ್ಮ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದ್ದಾರೆ. ಕಳೆದ ಏಷ್ಯನ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ತೋರಿದ್ದರು. ಹರಿಯಾಣದ 20 ವರ್ಷದ ಈ ಬಾಕ್ಸರ್ ಮಂಗಳವಾರ ನಡೆಯುವ 16ನೇ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾದ ಮಾರ್ಕೆಲಾ ಯೆನಿ ವಿರುದ್ಧ ಸೆಣಸಲಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಮುನ್ನ ಪ್ರೀತಿ ಅನಾರೋಗ್ಯಕ್ಕೊಳಗಾಗಿದ್ದರು. ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದರೂ ಕೂಡ ಮೊದಲ ಸುತ್ತಿನಲ್ಲಿ ಅವರು ನಡೆಸಿದ ಹೋರಾಟ ಮತ್ತು ಅಸಾಧಾರಣ ಧೈರ್ಯವನ್ನು ಮೆಚ್ಚಲೇ ಬೇಕು. ಎದುರಾಳಿಗೆ ಒಂದಕ್ಕವನ್ನು ಕೂಡ ಬಿಟ್ಟುಕೊಡದೆ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಅಧಿಕಾರಯುತ ಗೆಲುವು ತಮ್ಮದಾಗಿಸಿಕೊಂಡರು.
ಇಂದು ನಡೆಯುವ ಮಹಿಳೆಯರ 50 ಕೆಜಿ ವಿಭಾಗದ 32ರ ಘಟ್ಟದ ಪಂದ್ಯದಲ್ಲಿ ನಿಖತ್ ಜರೀನ್ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯ ಮಧ್ಯಾಹ್ನ 3.50ಕ್ಕೆ ನಡೆಯಲಿದೆ. ಆರ್ಚರಿ ಮತ್ತು ಶೂಟಿಂಗ್ನಲ್ಲಿ ಭಾರತ ಇಂದು ಐತಿಹಾಸಿಕ ಪದಕ ನಿರೀಕ್ಷೆಯೊಂದನ್ನು ಕೂಡ ಇಟ್ಟುಕೊಂಡಿದೆ.
ಇದನ್ನೂ ಓದಿ Paris Olympics 2024 Day 2: ನೀಗಲಿ 36 ವರ್ಷಗಳ ಪದಕ ಬರ; ಚಿನ್ನಕ್ಕೆ ಗುರಿ ಇರಿಸಲಿ ಭಾರತೀಯ ಮಹಿಳಾ ಆರ್ಚರಿ ತಂಡ
ಇಂದು ನಡೆಯುವ(Paris Olympics 2024 Day 2) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ದೀಪಿಕಾ ಕುಮಾರಿ(Deepika Kumari), ಅಂಕಿತಾ ಭಕತ್(Ankita Bhakat), ಭಜನ್ ಕೌರ್(Bhajan Kaur) ಅವರನ್ನೊಳಗೊಂಡ ತಂಡ ಕಣಕ್ಕಿಳಿಯಲಿದೆ. ಫ್ರಾನ್ಸ್ ಅಥವಾ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಭಾರತ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು.
1988ರಲ್ಲಿ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಸ್ಪರ್ಧೆಯನ್ನು ಆಯೋಜಿಸಿದ ಬಳಿಕ ಭಾರತಕ್ಕೆ ಇನ್ನೂ ಪದಕಕ್ಕೆ ಗುರಿ ಇರಿಸಲಾಗಲಿಲ್ಲ. 2000ದ ಸಿಡ್ನಿ ಕೂಟಕ್ಕೆ ಅರ್ಹತೆಯೇ ಲಭಿಸಿರಲಿಲ್ಲ. ಪ್ರತೀ ಸಲವೂ ಪದಕದ ನಿರೀಕ್ಷೆ ಮಾಡಿದರೂ ಕೂಡ ಯಶಸ್ಸು ಮಾತ್ರ ಮರೀಚಿಕೆಯೇ ಆಗುಳಿದಿದೆ. ಇದುವರೆಗೂ ಕ್ವಾರ್ಟರ್ ಫೈನಲ್‌ನಾಚೆ ದಾಟಿಲ್ಲ. ಈ ಬಾರಿ ಐತಿಹಾಸಿಕ ಪದಕವೊಂದರ ಭರವಸೆ ಇರಿಸಲಾಗಿದೆ. ಗೆದ್ದರೆ 36 ವರ್ಷಗಳ ಪದಕ ಬರ ನೀಗಲಿದೆ. ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಇಂದೇ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 5.45ಕ್ಕೆ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ. ಇಲ್ಲಿ ಗೆದ್ದರೆ ಸೆಮಿಫೈನಲ್ ಪಂದ್ಯ ರಾತ್ರಿ 8.41ಕ್ಕೆ ನಡೆಯಲಿದೆ. ಕಂಚಿನ ಸ್ಪರ್ಧೆಯ ಪಂದ್ಯ ರಾತ್ರಿ 8.18ಕ್ಕೆ, ಫೈನಲ್ ಪಂದ್ಯ ರಾತ್ರಿ 8.41ಕ್ಕೆ ನಡೆಯಲಿದೆ.
10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಫೈನಲ್ ಪಂದ್ಯದಲ್ಲಿ ಮನು ಭಾಕರ್ ಸ್ಪರ್ಧಿಸಲಿದ್ದಾರೆ. ಇವರ ಮೇಲೂ ಪದಕ ನಿರೀಕ್ಷೆ ಮಾಡಲಾಗಿದೆ. 22ರ ಹರೆಯದ ಭಾಕರ್ ನಿನ್ನೆ(ಶನಿವಾರ) ನಡೆದಿದ್ದ ಅರ್ಹತಾ ಸುತ್ತಿನಲ್ಲಿ 580 ಅಂಕ ಗಳಿಸಿ ಮೂರನೇ ಸ್ಥಾನಿಯಾಗಿ ಫೈನಲ್‌ಗೆ ಅರ್ಹತೆ ಪಡೆದಿದ್ದರು.