ಪ್ಯಾರಿಸ್: ಭಾರತದ ಬಾಕ್ಸರ್ ನಿಶಾಂತ್ ದೇವ್(Nishant Dev) ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ(Paris Olympics Boxing) ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇನ್ನೊಂದು ಗೆಲುವು ಸಾಧಿಸಿದರೆ ಪದಕವೊಂದು ಖಾತ್ರಿಯಾಗಲಿದೆ. ಬುಧವಾರ ತಡರಾತ್ರಿ ನಡೆದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೋಸ್ ಗೇಬ್ರಿಯಲ್ ರೊಡ್ರಿಗಸ್ ಟೆನೊರಿಯೊ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟರು. ಮುಂದಿನ ಪಂದ್ಯದಲ್ಲಿ ನಿಶಾಂತ್, ಮೊಜಾಂಬಿಕ್‌ನ ಟಿ ಮುಕ್ಸಾಂಗಾ ಮತ್ತು ಮೆಕ್ಸಿಕೊದ ಎಂಎ ವರ್ಡೆ ಅಲ್ವಾರೆಜ್ ನಡುವಣ ವಿಜೇತರನ್ನು ಎದುರಿಸಲಿದೆ.
ತೀವ್ರ ಪೈಪೋಟಿಯಿಂದ ಸಾಗಿದ ಈ ಪಂದ್ಯದಲ್ಲು ಉಭಯ ಬಾಕ್ಸರ್ಗಳು ಬಲಿಷ್ಠ ಪಂಚ್ಗಳ ಮೂಲಕ ಗೆಲುವಿಗಾಗಿ ಹೋರಾಟ ನಡೆಸಿದರು. ಕೊನೆಗೂ ನಿಶಾಂತ್ ದೇವ್ 7ನೇ ಶ್ರೇಯಾಂಕದ ಆಟಗಾರರನ್ನು ಕೇವಲ 1(3-2) ಅಂಕದ ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಸದ್ಯ ಬಾಕ್ಸಿಂಗ್ನಲ್ಲಿ ಭಾರತ 2 ಪದಕ ನಿರೀಕ್ಷೆ ಮಾಡಿದೆ. ಇದಕ್ಕೂ ಮುನ್ನ ನಡೆದಿದ್ದ 75 ಕೆ.ಜಿ ಮಹಿಳಾ ವಿಭಾಗದ 16ರ ಸುತ್ತಿನ ಬಾಕ್ಸಿಂಗ್ ಹೋರಾಟದಲ್ಲಿ ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್(Lovlina Borgohain) ಅವರು ನಾರ್ವೆಯ ಸನ್ನಿವಾ ಹೊಫ್‌ಸ್ತಾಡ್ ಅವರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲೀನಾ ಅವರು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ.
ಶ್ರೀಜಾ ಅಕುಲಾ ಒಲಿಂಪಿಕ್ಸ್ ಅಭಿಯಾನ ಅಂತ್ಯ
ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನ ಟೇಬಲ್ ಟೆನಿಸ್ನಲ್ಲಿ ಭಾರೀ ಸಂಚಲನ ಮೂಡಿಸಿದ್ದ ಭಾರತದ ಅಗ್ರ ಶ್ರೇಯಾಂಕದ ಟೇಬಲ್ ಟೆನಿಸ್ ಆಟಗಾರ್ತಿ ಶ್ರೀಜಾ ಅಕುಲಾ(Sreeja Akula) ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಅವರ ಒಲಿಂಪಿಕ್ಸ್ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.
ಇದನ್ನೂ ಓದಿ Paris Olympics 2024 Day 6: ಇಂದಿನಿಂದ ಅಥ್ಲೆಟಿಕ್ಸ್ ಆರಂಭ; ಭಾರತದ ಕ್ರೀಡಾ ಸ್ಪರ್ಧೆಗಳ ವಿವರ ಹೀಗಿದೆ
ಒಲಿಂಪಿಕ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಪ್ರಿ-ಕ್ವಾರ್ಟರ್‌ಗೆ ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ 26 ವರ್ಷದ ಅಕುಲಾ ಬುಧವಾರ ತಡರಾತ್ರಿ ನಡೆದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ. 1 ಮತ್ತು ಅಗ್ರ ಶ್ರೇಯಾಂಕದ ಚೀನಾದ ಪ್ಯಾಡ್ಲರ್ ಸನ್ ಯಿಂಗ್ಶಾ(Sun Yingsha) ವಿರುದ್ದ 4-0(9-11, 12-10, 11-4, 11-5, 10-12, 12-10) ಅಂತರದಿಂದ ಸೋತು ನಿರಾಸೆ ಮೂಡಿಸಿದರು. ಆರಂಭಿಕ 2 ಗೇಮ್ಗಳಲ್ಲಿ ಭಾರೀ ಮುನ್ನಡೆ ಸಾಧಿಸಿದರೂ ಗೆಲುವು ಮಾತ್ರ ಒಲಿಯಲಿಲ್ಲ. ಆ ಬಳಿಕದ 2 ಗೇಮ್ನಲ್ಲಿ ಸಂಪೂರ್ಣ ಶರಣಾದರು. ಇವರ ಸೋಲಿನೊಂದಿಗೆ ಟೆಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತದ ಅಭಿಯಾನ ಅಂತ್ಯ ಕಂಡಿದೆ. ಇದಕ್ಕೂ ಮುನ್ನ ನಡೆದಿದ್ದ ಮತ್ತೊಂದು ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಣಿಕಾ ಬಾತ್ರ ಕೂಡ ಸೋಲು ಕಂಡಿದ್ದರು.