Site icon Vistara News

Paris Olympics: ಪ್ಯಾರಿಸ್​ ಒಲಿಂಪಿಕ್ಸ್‌ ಪದಕ ಗೆಲುವಿಗೆ ಹಿನ್ನಡೆಯಾದ ಮೊಣಕಾಲಿನ ಗಾಯ; ಕಣ್ಣೀರು ಸುರಿಸುತ್ತಾ ಸೆಮಿಯಿಂದ ಹಿಂದೆ ಸರಿದ ಮರಿನ್‌

Paris Olympics

Paris Olympics: Carolina Marin injures her knee, forced to retire during semifinal against He Bingjiao

ಪ್ಯಾರಿಸ್:‌ ಸ್ಪೇನ್‌ನ ಶಟ್ಲರ್‌ ಕೆರೊಲಿನಾ ಮರಿನ್‌(Carolina Marin) ಅವರು ಗಾಯದ ಸಮಸ್ಯೆಗೆ ತುತ್ತಾಗಿ ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಟೂರ್ನಿಯಲ್ಲಿ ಪದಕ ಗೆಲ್ಲುವ ಅವಕಾಶವೊಂದನ್ನು ಕಳೆದುಕೊಂಡಿದ್ದಾರೆ. ಇಂದು (ಭಾನುವಾರ) ನಡೆದ ಸೆಮಿಫೈನಲ್‌ ಪಂದ್ಯದ ವೇಳೆ ಮೊಣಕಾಲಿನ(Carolina Marin knee injure) ಗಾಯದಿಂದ ಕಣ್ಣೀರು ಸುರಿಸುತ್ತಾ ಟೂರ್ನಿಯಿಂದ ಹೊರನಡೆದರು.

ಚೀನಾದ ಹಿ ಬಿಂಗ್‌ಜಿಯಾವೊ(He Bingjiao) ವಿರುದ್ಧದ ಪಂದ್ಯದಲ್ಲಿ ಮರಿನ್​ ಮೊದಲ ಗೇಮ್​ನಲ್ಲಿ 21-14 ಅಂತರದಿಂದ ಗೆದ್ದು, ದ್ವಿತೀಯ ಗೇಮ್​ನಲ್ಲಿ 10-06 ಮುನ್ನಡೆಯಲ್ಲಿದ್ದ ವೇಳೆ ಅವರು ಬಲ ಮೊಣಕಾಲಿನ ಗಾಯ ಕಾಣಿಸಿಕೊಂಡಿತು. ಆಡುವ ಪ್ರಯತ್ನ ಮಾಡಿದರೂ ಕೂಡ ನೋವು ಗಂಭೀರ ಪ್ರಮಾಣವಾದ್ದರಿಂದ ಅಂತಿಮವಾಗಿ ಪಂದ್ಯವನ್ನು ತ್ಯಜಿಸಿದರು. ಸೋಲು ಕಾಣಬೇಕಿದ್ದ ಚೀನಾದ ಹಿ ಬಿಂಗ್‌ಜಿಯಾವೊ ನೇರವಾಗಿ ಫೈನಲ್​ ಪ್ರವೇಶಿಸುವ ಮೂಲಕ ಪದಕವೊಂದನ್ನು ಖಾತ್ರಿಪಡಿಸಿದರು.

ಕಳೆದ ಟೋಕಿಯೊ ಒಲಿಂಪಿಕ್ಸ್‌ ಕೂಟದ ವೇಳೆಯೂ ಮೊಣಕಾಲಿನ ಗಾಯದಿಂದಾಗಿ ಮರಿನ್‌ ಟೂರ್ನಿಯಿಂದ ಹಿಂದೆ ಸರಿದಿದ್ದರು. ಅಂದು ಅಭ್ಯಾಸದ ವೇಳೆ ಮರಿನ್‌ಗೆ ಮೊಣಕಾಲಿನ ಗಾಯದ ಸಮಸ್ಯೆ ಎದುರಾಗಿತ್ತು. ತೀವ್ರ ಸ್ವರೂಪದ ಗಾಯವಾದ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಪ್ಯಾರಿಸ್​ನಲ್ಲಿಯೂ ಅವರಿಗೆ ಮೊಣಕಾಲಿನ ಗಾಯ ಹಿನ್ನಡೆ ಉಂಟು ಮಾಡಿದೆ.

“ದುರದೃಷ್ಟವಶಾತ್‌ ನನಗೆ ಈ ಬಾರಿಯ ಒಲಿಂಪಿಂಕ್ಸ್​ನಲ್ಲಿಯೂ ಸಂಪೂರ್ಣವಾಗಿ ಆಡಲು ಸಾಧ್ಯವಾಗಲಿಲ್ಲ. ಆದರೆ ಗಾಯದಿಂದ ಶೀಘ್ರ ಚೇತರಿಸಿಕೊಂಡು ಮುಂದಿನ ಟೂರ್ನಿಯಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದೆ” ಎಂದು ಹೇಳಿ ಮರಿನ್​ ಕಣ್ಣೀರು ಹಾಕಿದರು. ‌ಮರಿನ್​ 2016ರ ರಿಯೊ ಒಲಿಂಪಿಕ್ಸ್‌ ಫೈನಲ್​ನಲ್ಲಿ ಭಾರತದ ಪಿ.ವಿ ಸಿಂಧು ಅವರನ್ನು ಸೋಲಿಸಿ ಚಿನ್ನ ಗೆದ್ದಿದ್ದರು. ಒಂದೊಮ್ಮೆ ಸಿಂಧು ಅವರು ಈ ಬಾರಿಯ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸುತ್ತಿದ್ದರೆ ಚಿನ್ನ ಗೆಲ್ಲುವ ಸುವರ್ಣ ಅವಕಾಶವಿತ್ತು. ಸಿಂಧು ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದರು.

ಇದನ್ನೂ ಓದಿ Paris Olympics: ಶೂಟೌಟ್​ನಲ್ಲಿ ಗೆದ್ದು ಸೆಮಿಗೆ ಲಗ್ಗೆಯಿಟ್ಟ ಭಾರತ; ಒಲಿಂಪಿಕ್ಸ್​ನಿಂದ ಗ್ರೇಟ್​ ಬ್ರಿಟನ್ ಕಿಕ್​ ಔಟ್​

ಸೆಮಿಯಲ್ಲಿ ಸೋಲು ಕಂಡ ಸೇನ್​


ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌(Paris Olympics) ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಭಾರತದ ಕೊನೆಯ ಭರವಸೆಯಾಗಿ ಉಳಿದಿರುವ ಲಕ್ಷ್ಯ ಸೇನ್‌(Lakshya Sen) ಭಾನುವಾರ ನಡೆದ ಹೈವೋಲ್ಟೇಜ್​ ಸೆಮಿಫೈನಲ್‌ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ವಿಶ್ವದ ಖ್ಯಾತ ಶಟ್ಲರ್​ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌(Viktor Axelsen) ವಿರುದ್ಧ 20-22 21-14 ನೇರ ಗೇಮ್​ಗಳ ಅಂತರದಿಂದ ಸೋಲು ಕಂಡು ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರೂ ಕೂಡ ಕಂಚಿನ ಪದಕ ಸ್ಪರ್ಧೆಯಲ್ಲಿ ಆಡಲಿದ್ದಾರೆ.​

ಲವ್ಲಿನಾಗೆ ಸೋಲು


ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದಿದ್ದ ಬಾಕ್ಸರ್​ ಲವ್ಲಿನಾ ಬೊರ್ಗೊಹೇನ್‌(Lovlina Borgohain) ಅವರು ಇಂದು(ಭಾನುವಾರ) ನಡೆದ ಮಹಿಳಾ  75 ಕೆ.ಜಿ. ವಿಭಾಗದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಚೀನಾದ ಲಿ ಕಿಯಾನ್ ವಿರುದ್ಧ 4-1 ಅಂತರದಿಂದ ಸೋಲು ಕಂಡು ತಮ್ಮ ಒಲಿಂಪಿಕ್ಸ್​ ಅಭಿಯಾನ ಮುಗಿಸಿದರು. ಇವರ ನಿರ್ಗಮನದೊಂದಿಗೆ ಬಾಕ್ಸಿಂಗ್​ನಲ್ಲಿ ಭಾರತ ಸ್ಪರ್ಧೆ ಕೂಡ ಕೊನೆಗೊಂಡಿತು. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಲವ್ಲಿನಾ 69 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. 

Exit mobile version