ವಾಷಿಂಗ್ಟನ್: ಯುವ ಮಹಿಳಾ ಟೆನಿಸ್ ಆಟಗಾರ್ತಿ ಕೊಕೊ ಗಾಫ್(Coco Gauff) ಅವರು ಪ್ಯಾರಿಸ್ ಒಲಿಂಪಿಕ್ಸ್‌ನ(Paris Olympics) ಉದ್ಘಾಟನಾ ಸಮಾರಂಭದಲ್ಲಿ(Paris Olympics Opening Ceremony) ಅಮರಿಕದ ಮಹಿಳಾ ಧ್ವಜಧಾರಿಯಾಗಲಿದ್ದಾರೆ(US Flag Bearer). ಶುಕ್ರವಾರ(ಜುಲೈ 26) ನಡೆಯುವ ಉದ್ಘಾಟನ ಸಮಾರಂಭದಲ್ಲಿ ಯುಎಸ್ ಧ್ವಜವನ್ನು ಹೊತ್ತೊಯ್ಯಲಿದ್ದಾರೆ. ಈ ಗೌರವವನ್ನು ಪಡೆದ ಅತ್ಯಂತ ಕಿರಿಯ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜತೆಗೆ ಉದ್ಘಾಟನಾ ಅಥವಾ ಸಮಾರೋಪ ಸಮಾರಂಭದಲ್ಲಿ ಅಮೆರಿಕದ ಧ್ವಜಧಾರಿಯಾಗಿ ಸೇವೆ ಸಲ್ಲಿಸಿದ ಮೊದಲ ಟೆನಿಸ್ ಆಟಗಾರ್ತಿ ಎಂದೆನಿಸಿಕೊಳ್ಳಲಿದ್ದಾರೆ. ಪುರುಷರ ವಿಭಾಗದಲ್ಲಿ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ ಯುಎಸ್ ಧ್ವಜವನ್ನು ಹೊತ್ತೊಯ್ಯಲಿದ್ದಾರೆ.
ಮಾರ್ಚ್ 2004 ರಲ್ಲಿ ಜನಿಸಿದ ಗಾಫ್, ಪ್ಯಾರಿಸ್ನಲ್ಲಿ ಯುಎಸ್ ಧ್ವಜವನ್ನು(Coco Gauff US Flag Bearer) ಹಿಡಿಯುವ ಮೂಲಕ 1976 ರ ವಿಂಟರ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಯುಎಸ್‌ಗೆ ಧ್ವಜಧಾರಿಯಾಗಿ ಸೇವೆ ಸಲ್ಲಿಸಿದ ಆಲ್ಪೈನ್ ಸ್ಕೀಯರ್ ಸಿಂಡಿ ನೆಲ್ಸನ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಗಾಫ್ಗೆ ಈಗ 20 ವರ್ಷ.
ಮಹಿಳಾ ಟೆನಿಸ್ ಸಿಂಗಲ್ಸ್‌ನಲ್ಲಿ ವಿಶ್ವ ನಂ. 2 ಶ್ರೇಯಾಂಕವನ್ನು ಹೊಂದಿರುವ ಗಾಫ್ ಕಳೆದ ವರ್ಷದ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ವಿಭಾಗದಲ್ಲಿಯೂ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದು ಬೀಗಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಯುಎಸ್ ಓಪನ್‌ನಲ್ಲಿ, ಪ್ರಶಸ್ತಿ ಗೆಲ್ಲುವ ಮೂಲಕ ಅತಿ ಕಿರಿಯ ವಯಸ್ಸಿನಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದ 2ನೇ ಅಮೇರಿಕನ್ ಆಟಗಾರ್ತಿ ಎನಿಸಿಕೊಂಡಿದ್ದರು. ದಾಖಲೆ ಸೆರೆನಾ ವಿಲಿಯಮ್ಸ್ ಹೆಸರಿನಲ್ಲಿದೆ. ವಿಲಿಯಮ್ಸ್ 1999 ರಲ್ಲಿ 17 ನೇ ವಯಸ್ಸಿನಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
ಇದನ್ನೂ ಓದಿ Paris Olympics: ಈ ಬಾರಿಯ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲಿದ್ದಾರೆ ಭಾರತದ 24 ಸೈನಿಕರು
ಸಮೀಕ್ಷೆಯೊಂದರ ಪ್ರಕಾರ ಪ್ಯಾರಿಸ್ ಒಲಿಂಪಿಕ್ಸ್ ಪದಕಪಟ್ಟಿಯಲ್ಲಿ ಅಮೆರಿಕಕ್ಕೆ ಅಗ್ರ ಸ್ಥಾನ ಲಭಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. 2008ರ ಬೀಜಿಂಗ್ ಕ್ರೀಡಾಕೂಟವನ್ನು ಹೊರತುಪಡಿಸಿ, 1992ರಿಂದ ಒಲಿಂಪಿಕ್ಸ್ ನಲ್ಲಿ ಅಮೆರಿಕವೇ ಪ್ರಭುತ್ವ ಸಾಧಿಸಿದೆ. ಸಮೀಕ್ಷೆ ಪ್ರಕಾರ ಅಮೆರಿಕ 112 ಪದಕಗಳನ್ನು ಗೆಲ್ಲುವ ಸಾಧ್ಯತೆ ಇದೆ. ಗಾಫ್ ಕೂಡ ಈ ಬಾರಿ ಚೊಚ್ಚಲ ಪದಕ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ.
ಪ್ಯಾರಿಸ್ ಆತಿಥ್ಯದಲ್ಲಿ ನಡೆಯಲಿರುವ 3ನೇ ಒಲಿಂಪಿಕ್ಸ್ ಕೀಡಾಕೂಟ ಇದಾಗಿದೆ. ಮೊದಲ ಒಲಿಂಪಿಕ್ಸ್ ನಡೆದದ್ದು 1900ರಲ್ಲಿ. ಇದಾದ ಬಳಿಕ 1924ರಲ್ಲಿ ಆತಿಥ್ಯ ವಹಿಸಿತ್ತು. ಇದೀಗ ಬರೋಬ್ಬರಿ 100 ವರ್ಷಗಳ ಬಳಿಕ ಇಲ್ಲಿ ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ನಡೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್ ವರೆಗೆ ಬೋಟ್‌ಗಳಲ್ಲೇ ಪರೇಡ್ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.