ಪ್ಯಾರಿಸ್: 44 ವರ್ಷಗಳ ಬಳಿಕ ಒಲಿಂಪಿಕ್ಸ್(Paris Olympics) ಹಾಕಿಯಲ್ಲಿ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡ ಭಾರತ ಪುರುಷರ ಹಾಕಿ ತಂಡ ಇಂದು ನಡೆಯುವ ಕಂಚಿನ ಪದಕದ ಸ್ಪರ್ಧೆಯಲ್ಲಿ ಸ್ಪೇನ್(india vs spain) ವಿರುದ್ಧ ಸೆಣಸಾಡಲಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಕಂಚಿನ ಪದಕ ಗೆದ್ದು 41 ವರ್ಷಗಳ ಬಳಿಕ ಪದಕದ ಬರ ನೀಗಿಸಿತ್ತು. ಈ ಬಾರಿಯೂ ಕಂಚಿಗೆ ತೃಪ್ತಿಪಡಬೇಕಾದ ಸ್ಥಿತಿ ಎದುರಾಗಿದೆ. ಅದು ಕೂಡ ಇಂದು ಗೆದ್ದರೆ ಮಾತ್ರ.
ಈ ಬಾರಿಯ ಕೂಟದಲ್ಲಿ ಭಾರತ ಕ್ವಾರ್ಟರ್ ಫೈನಲ್ ತನಕ ತೋರಿದ್ದ ಪ್ರದರ್ಶನವನ್ನು ಕಂಡಾಗ ಭಾರತ ನಿಶ್ಚಿತವಾಗಿ ಚಿನ್ನ ಗೆಲ್ಲಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅಲ್ಲದೆ ಕಳೆದ ಬಾರಿಯ ಚಾಂಪಿಯನ್ ಮತ್ತು ರನ್ನರ್ ಅಪ್ಗಳು ಕೂಡ ಕ್ವಾರ್ಟರ್ ಫೈನಲ್ನಲ್ಲಿಯೇ ಮುಗ್ಗರಿಸಿತ್ತು. ಹೀಗಾಗಿ ಭಾರತಕ್ಕೆ ಚಿನ್ನ ಗೆಲ್ಲುವ ಉತ್ತಮ ಅವಕಾಶ ಕೂಡ ಇತ್ತು. ಆದರೆ, ಸೆಮಿಫೈನಲ್ನಲ್ಲಿ ತನಗಿಂತ ಬಲಿಷ್ಟವಲ್ಲದ ಜರ್ಮನಿ ವಿರುದ್ಧ ಹಲವು ತಪ್ಪುಗಳನ್ನು ಮಾಡಿದ ಕಾರಣ 3-2 ಗೋಲುಗಳ ಅಂತರದಿಂದ ಆಘಾತಕಾರಿ ಸೋಲು ಕಂಡು ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು.
ಟೂರ್ನಿಯುದ್ದಕ್ಕೂ ಹಿಮಾಲಯ ಪರ್ವತದಂತೆ ತೆಡೆಗೋಡೆಯಾಗಿ ನಿಂತು ಹಲವು ಗೋಲುಗಳನ್ನು ತಡೆದಿದ್ದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ನಿರ್ಣಾಯಕ ಸೆಮಿ ಫೈನಲ್ನಲ್ಲಿ ಇದೇ ಪ್ರದರ್ಶನ ತೋರುವಲ್ಲಿ ವಿಫಲರಾದರು. ಜತೆಗೆ ಅಮಿತ್ ರೋಹಿದಾಸ್ ಅವರಿಗೆ ಒಂದು ಪಂದ್ಯದ ಬ್ಯಾನ್ ಶಿಕ್ಷೆ, ಒಟ್ಟಾರೆ ಭಾರತಕ್ಕೆ ಅದೃಷ್ಟ ಕೈಕೊಟ್ಟಿತು. ಇಂದು ನಡೆಯುವ ಕಂಚಿನ ಸ್ಪರ್ಧೆಯಲ್ಲಾದರೂ ಉತ್ತಮವಾಗಿ ಆಡಿ ಪದಕ ಗೆಲ್ಲಲಿ ಎಂಬುದು ಭಾರತದ ಕ್ರೀಡಾಪ್ರೇಮಿಗಳ ಪ್ರಾರ್ಥನೆ.
ಸ್ಪೇನ್ ವಿರುದ್ಧ ಭಾರತದ ದಾಖಲೆ ಉತ್ತಮವಾಗಿದೆ. ಒಲಿಂಪಿಕ್ಸ್ನಲ್ಲಿ ಇತ್ತಂಡಗಳು ಈವರೆಗೆ 10 ಸಲ ಮುಖಾಮುಖಿಯಾಗಿವೆ. ಭಾರತ ಏಳನ್ನು ಗೆದ್ದರೆ, ಸ್ಪೇನ್ ಕೇವಲ ಒಂದು ಗೆಲುವು ಮಾತ್ರ ಸಾಧಿಸಿದೆ. ಉಳಿದೆರಡು ಪಂದ್ಯಗಳು ಡ್ರಾಗೊಂಡಿವೆ. ಬಲಾಬಲದ ಲೆಕ್ಕಾಚಾರದಲ್ಲಿ ಭಾರತ ಮುಂದಿದ್ದರೂ ಕೂಡ ಎದುರಾಳಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು.
ಶ್ರೀಜೇಶ್ಗೆ ಕೊನೆಯ ಪಂದ್ಯ
ಭಾರತೀಯ ಹಾಕಿ ತಂಡದ ಹಿರಿಯ ಆಟಗಾರ, ಗೋಲ್ ಕೀಪರ್ ಪಿಆರ್ ಶ್ರೀಜೇಶ್ (PR Sreejesh) ಅವರಿಗೆ ಇದು ಕೊನೆಯ ಅಂತಾರಾಷ್ಟ್ರೀಯ ಹಾಕಿ (International Hockey) ಪಂದ್ಯವಾಗಿದೆ. ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಅವರು ತಮ್ಮ ನಿವೃತ್ತಿ ಪ್ರಕಟಿಸಿದ್ದರು. ನಾಲ್ಕನೇ ಒಲಿಂಪಿಕ್ಸ್ ಆಡುತ್ತಿರುವ ಅವರಿಗೆ ಗೆಲುವಿನ ವಿದಾಯ ಸಿಗುವಂತಾಗಲಿ.
2006ರಲ್ಲಿ ಭಾರತೀಯ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಕಳೆದ ಟೊಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತ್ತು. ಭಾರತ ತಂಡದ ಈ ಪದಕ ಗೆಲುವಿನಲ್ಲಿ ಶ್ರೀಜೇಶ್ ಪ್ರಮುಖ ಪಾತ್ರವಹಿಸಿದ್ದರು. ವಿಶ್ವದ ಅತ್ಯುತ್ತಮ ಗೋಲ್ ಕೀಪರ್ ಎಂಬ ಪುರಸ್ಕಾರವೂ ಸಂದಿತ್ತು.