Site icon Vistara News

Paris Olympics: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಅಥ್ಲೀಟ್​ಗಳಿಗೆ ಮನೆ ಊಟ; ಹೇಗಿದೆ ಮೆನು?

Paris Olympics

ನವದೆಹಲಿ: ಮಹತ್ವದ ಕ್ರೀಡಾಕೂಡವಾದ ಪ್ಯಾರಿಸ್ ಒಲಿಂಪಿಕ್ಸ್‌(Paris Olympics) ಜುಲೈ 26ರಿಂದ ಆರಂಭಗಳ್ಳಲಿದೆ. ಈ ಬಾರಿ ಟೂರ್ನಿಯಲ್ಲಿ ಸ್ಪರ್ಧಿಸಲಿರುವ ಭಾರತೀಯ ಕ್ರೀಡಾಪಟುಗಳಿಗೆ ​ಸಿಹಿ ಸುದ್ದಿಯೊಂದು ಲಭಿಸಿದೆ. ಎಲ್ಲ ಅಥ್ಲೀಟ್​ಗಳಿಗೆ ಭಾರತೀಯ ಶೈಲಿಯ ಊಟ ಸಿಗಲಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ ಗೇಮ್ಸ್‌ ವಿಲೇಜ್‌ನಲ್ಲಿ ರೋಟಿ, ದಾಲ್‌, ಆಲೂ ಗೋಬಿ, ಚಿಕನ್‌ ಇತ್ಯಾದಿ ಭಾರತೀಯ ಖಾದ್ಯಗಳು ಸಿಗಲಿದೆ.

ಪ್ರತಿ ಬಾರಿಯೂ ಜಾಗತಿಕ ಕ್ರೀಡಾಕೂಟಗಳಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ದೊಡ್ಡ ಸಮಸ್ಯೆ ಎದುರಾಗುತ್ತಿದ್ದು ಆಹಾರ. ಟೋಕಿಯೊ ಒಲಿಂಪಿಕ್ಸ್​ನಲ್ಲಿಯೂ ಭಾರತೀಯ ಅಥ್ಲೀಟ್​ಗಳು ಸರಿಯಾದ ಪೌಷ್ಟಿಕಾಂಶ ಆಹಾರ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ವಿದೇಶಿ ಅಥ್ಲೀಟ್‌ಗಳಿಗೆ ಈ ಸಮಸ್ಯೆ ಎದುರಾಗುವುದಿಲ್ಲ. ಏಕೆಂದರೆ ಅವರು ಅಕ್ಕಿಯಿಂದ ತಯಾರಿಸಿದ ಆಹಾರವನ್ನು ಅಷ್ಟಾಗಿ ಸೇವಿಸುವುದಿಲ್ಲ. ಈ ಬಾರಿ ಭಾರತೀಯ ಅಥ್ಲೀಟ್​ಗಳ ಆಹಾರದ ದೊಡ್ಡ ಸಮಸ್ಯೆ ಬಗೆಹರಿದಂತಿದೆ. ದಕ್ಷಿಣ ಏಷ್ಯಾದ ಖಾದ್ಯಗಳನ್ನು ಸೇರಿಸಲು ಸಂಘಟಕರಿಗೆ ಭಾರತೀಯ ಒಲಿಂಪಿಕ್‌ ಸಂಸ್ಥೆ ಮನವಿ ಮಾಡಿದೆ. ಈ ಮನವಿಯನ್ನು ಸಂಘಟಕರು ಒಪ್ಪಿಕೊಂಡಿರುವುದಾಗಿ ಒಲಿಂಪಿಕ್ಸ್‌ನ ಭಾರತ ತಂಡ ಉಪ ಮುಖ್ಯಾಧಿಕಾರಿಯಾಗಿರುವ ಶಿವ ಕೇಶವನ್‌ ತಿಳಿಸಿದ್ದಾರೆ.

ಇದನ್ನೂ ಓದಿ Paris Olympics : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸೆಕ್ಸ್​ಗೆ ಇಲ್ಲ ಬ್ಯಾನ್​; ಫ್ರೀ ಕಾಂಡೋಮ್​ ವಿತರಣೆ ನಿರಂತರ

ಗೇಮ್ಸ್‌ ವಿಲೇಜ್‌ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾ ವಿಜ್ಞಾನ ಕೇಂದ್ರವನ್ನೂ ಐಒಎ ಸ್ಥಾಪಿಸುತ್ತಿದೆ. ಇಲ್ಲಿ ಅಥ್ಲೀಟ್‌ಗಳಿಗೆ ಅಗತ್ಯವಿರುವ ವೈದ್ಯಕೀಯ ನೆರವು, ಔಷಧ ಒದಗಿಸಲು ಭಾರತದಿಂದಲೇ ವೈದ್ಯಕೀಯ ಉಪಕರಣಗಳನ್ನು ಕೂಡ ಐಒಎ ಪ್ಯಾರಿಸ್‌ಗೆ ಕೊಂಡೊಯ್ಯುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಈ ಬಾರಿ ಇನ್ನೂ ಹೆಚ್ಚಿನ ಪದಕ ಗೆಲ್ಲುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವು ಕ್ರೀಡಾ ಯೋಜನೆಗಳನ್ನು ಜಾರಿಗೆ ತಂದಿತ್ತು. ಇದರ ಫಲಿತಾಂಶ ಇನ್ನೇನು ಕೆಲವೇ ತಿಂಗಳಲ್ಲಿ ಲಭಿಸಲಿದೆ.

ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ


ಉದ್ಘಾಟನಾ ಸಮಾರಂಭ(paris olympics 2024 opening ceremony) ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ನೆರವೇರಲಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಕ್ರೀಡಾಕೂಟದ ಆಯೋಜಕರು ಮಾಡಿದ್ದಾರೆ. ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್‌ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.

ಬೋಟ್‌ಗಳಲ್ಲೇ ಪರೇಡ್‌

ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

Exit mobile version