Site icon Vistara News

Paris Olympics: ಶುಭಾರಂಭದ ನಿರೀಕ್ಷೆಯಲ್ಲಿ ಪುರುಷರ ಹಾಕಿ ತಂಡ; ಕಿವೀಸ್​ ಎದುರಾಳಿ

Paris Olympics

Paris Olympics: Indian men's hockey team eye winning-start against New Zealand

ಪ್ಯಾರಿಸ್​: ಟೋಕಿಯೊ ಒಲಿಂಪಿಕ್ಸ್​(Paris Olympics) ಕಂಚಿನ ಪದಕ ವಿಜೇತ ಭಾರತ ಪುರುಷರ ಹಾಕಿ ತಂಡ(Hockey India) ಇಂದು ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಎದುರಾಳಿ ನ್ಯೂಜಿಲ್ಯಾಂಡ್(hockey india vs new zealand)​. ಇತ್ತಂಡಗಳ ಈ ಪಂದ್ಯ ರಾತ್ರಿ 9ಗಂಟೆಗೆ ಆರಂಭವಾಗಲಿದೆ. ಟೋಕಿಯೊದಲ್ಲಿ ಪದಕ ಗೆಲ್ಲುವ ಮೂಲಕ 41 ವರ್ಷಗಳ ಬಳಿಕ ಪದಕದ ಬರ ನೀಗಿಸಿದ್ದ ಭಾರತ ತಂಡ ಈ ಬಾರಿ ಚಿನ್ನಕ್ಕೆ ಕೊರಳೊಡ್ಡುವಂತಾಗಲಿ ಎನ್ನುವುದು ಭಾರತೀಯರ ಹಾರೈಕೆ. ಪುರುಷರ ಹಾಕಿಯಲ್ಲಿ 8 ಬಾರಿ ಸ್ವರ್ಣ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆ ಭಾರತ ಉಳಿಸಿಕೊಂಡಿದೆ.

ಭಾರತ ತಂಡ ಹಾಲಿ ಚಾಂಪಿಯನ್‌ ಬೆಲ್ಜಿಯಂ, ಆಸ್ಟ್ರೇಲಿಯಾ, ಅರ್ಜೆಂಟೀನಾ, ನ್ಯೂಜಿಲ್ಯಾಂಡ್​ ಹಾಗೂ ಐರ್ಲೆಂಡ್‌ ಜತೆ ‘ಬಿ’ ಗುಂಪಿನಲ್ಲಿದೆ. ನ್ಯೂಜಿಲ್ಯಾಂಡ್​ ಪಂದ್ಯದ ಬಳಿಕ ಭಾರತ ಜುಲೈ 29ರಂದು ಅರ್ಜೆಂಟೀನಾ, 30ರಂದು ಐರ್ಲೆಂಡ್‌, ಆಗಸ್ಟ್ 1ರಂದು ಬೆಲ್ಜಿಯಂ, ಆಗಸ್ಟ್​ 2ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಕ್ವಾರ್ಟರ್‌ಫೈನಲ್ ಪಂದ್ಯಗಳು ಆಗಸ್ಟ್​ 4ರಂದು ಮತ್ತು ಸೆಮಿಫೈನಲ್ ಪಂದ್ಯಗಳು ಆಗಸ್ಟ್​ 6 ರಂದು ನಡೆಯಲಿವೆ. ಕಂಚಿನ ಪದಕದ ಮತ್ತು ಫೈನಲ್ ಪಂದ್ಯ ಆಗಸ್ಟ್​ 8ರಂದು ನಡೆಯಲಿವೆ.

ಈ ಬಾರಿಯ 16 ಸದಸ್ಯರ ತಂಡದಲ್ಲಿ 11 ಮಂದಿ ಆಟಗಾರರು ಟೋಕಿಯೊ ಒಲಿಂಪಿಕ್ಸ್​ ಆಡಿದ ಆಟಗಾರರಾಗಿದ್ದಾರೆ. ಗೋಲ್ ಕೀಪರ್ ಪಿಆರ್ ಶ್ರೀಜೇಶ್ (PR Sreejesh) ಅವರಿಗೆ ಇದು ಕೊನೆಯ ಒಲಿಂಪಿಕ್ಸ್​ ಕೂಟವಾಗಿದೆ. ಈಗಾಗಲೇ ಅವರು ತಮ್ಮ ನಿವೃತ್ತಿಯನ್ನು ಕೂಡ ಘೋಷಿಸಿದ್ದಾರೆ.

ತಂಡ


ಗೋಲ್‌ಕೀಪರ್‌: ಪಿ.ಆರ್‌. ಶ್ರೀಜೇಶ್‌

ಡಿಫೆಂಡರ್‌ಗಳು: ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೊಹಿದಾಸ್, ಹರ್ಮನ್‌ಪ್ರೀತ್ ಸಿಂಗ್, ಸುಮಿತ್, ಸಂಜಯ್

ಮಿಡ್‌ಫೀಲ್ಡರ್‌ಗಳು: ರಾಜ್‌ಕುಮಾರ್ ಪಾಲ್, ಶಮ್‌ಶೇರ್‌ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್.

ಫಾರ್ವರ್ಡ್‌: ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್

ಬದಲಿ ಆಟಗಾರರು: ನೀಲಕಂಠ ಶರ್ಮಾ, ಜುಗರಾಜ್ ಸಿಂಗ್, ಕೃಷ್ಣ ಬಹದ್ದೂರ್ ಪಾಠಕ್.

ಇದನ್ನೂ ಓದಿ Paris Olympics: ಶರತ್ ಕಮಲ್​ಗೆ ಮೊದಲ ಪಂದ್ಯದಲ್ಲಿ ಸ್ಲೊವೆನಿಯಾದ ಡೆನಿ ಕೊಜುಲ್ ಎದುರಾಳಿ

ಅರ್ಹತೆ ಪಡೆಯದ ಮಹಿಳಾ ತಂಡ

ಟೋಕಿಯೊ ಒಲಿಂಪಿಕ್ಸ್​ನಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತೀಯ ಮಹಿಳಾ ಹಾಕಿ ತಂಡವು ಮುಂದಿನ ಪ್ಯಾರಿಸ್ ಒಲಿಂಪಿಕ್ಸ್​​ಗೆ ಅರ್ಹತೆಯನ್ನೇ ಪಡೆಯದಿರುವುದು ವಿಪರ್ಯಾಸ. 2012ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್​ನಲ್ಲಿ ಅವಕಾಶ ಪಡೆಯಲು ವಿಫಲಗೊಂಡಿದೆ.

1980ರ ಮಾಸ್ಕೋದಲ್ಲಿ ಮಹಿಳಾ ಹಾಕಿ ಸೇರ್ಪಡೆಯಾದ ಬಳಿಕ ಭಾರತ ಮಹಿಳಾ ತಂಡ ಒಲಿಂಪಿಕ್ಸ್​ನಲ್ಲಿ ಕೇವಲ ಮೂರು ಬಾರಿ ಆಡಿದೆ. ಮೊದಲ ನಾಲ್ಕು ಆವೃತ್ತಿಯಲ್ಲಿ ಅರ್ಹತೆ ಪಡೆಯದ ಭಾರತ ರಿಯೋ 2016ರಲ್ಲಿ ಅವಕಾಶ ಗಿಟ್ಟಿಸಿತು. ಆ ಸಮಯದಲ್ಲಿ 12ನೇ ಸ್ಥಾನ ಪಡೆದುಕೊಂಡಿತ್ತು. ನಂತರ ಟೋಕಿಯೊ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿತ್ತು.

Exit mobile version